Kannada NewsKarnataka NewsLatest

ಮಾಜಿ ಶಾಸಕ ಅರವಿಂದ ಪಾಟೀಲ ಬಿಜೆಪಿಗೆ – ಸಚಿವ ಜಾರಕಿಹೊಳಿ

ಕೊರೋನಾ ವಾರಿಯರ್ಸ್ ಪ್ರಶಸ್ತಿ ಪ್ರದಾನ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಖಾನಾಪುರದ ಮಾಜಿ ಶಾಸಕ ಅರವಿಂದ ಪಾಟೀಲ ಈಗ ಮಹಾರಾಷ್ಟ್ರ ಏಕೀಕರಣ ಸಮಿತಿಯಲ್ಲಿಲ್ಲ. ಅವರನ್ನು ಶೀಘ್ರವೇ ಬಿಜೆಪಿಗೆ ಸೇರಿಸಿಕೊಳ್ಳುತ್ತೇವೆ ಎಂದು ರಾಜ್ಯ ಜಲಸಂಪನ್ಮೂಲ ಸಚಿವರೂ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಭಾನುವಾರ ೬೫ನೇ ಕರ್ನಾಟಕ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ಅರವಿಂದ ಪಾಟೀಲ ಈಗ ಸಮಿತಿ (ಎಇಎಸ್)ಯಲ್ಲಿಲ್ಲ. ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಬಿಜೆಪಿಗೆ ಸೇರುತ್ತಾರೆ ಎನ್ನುವ ಕಾರಣಕ್ಕೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬೆಂಬಲಿಸಿದ್ದೀರಾ ಎನ್ನುವ ಪ್ರಶ್ನೆಗೆ, ಅದು ಸಹಕಾರಿ ಸಂಸ್ಥೆ. ಅಲ್ಲಿ ರಾಜಕೀಯವಿಲ್ಲ ಎಂದರು.
ಮಹಾರಾಷ್ಟ್ರ ಸರಕಾರ ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಘೋಷಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಅವರದ್ದು ಅವರು ಮಾಡಿಕೊಳ್ಳಲಿ. ನಮ್ಮದು ನಾವು ಮಾಡುತ್ತೇವೆ. ಕನ್ನಡ ನಾಡಿನ, ಕನ್ನಡಿಗರ ಹಿತ ಬಲಿಕೊಡುವ ಪ್ರಶ್ನೆಯೇ ಇಲ್ಲ ಎಂದರು.
ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಾರಕಿಹೊಳಿ ಕನ್ನಡ ನಾಡು-ನುಡಿ; ನೆಲ-ಜಲ ಸಂರಕ್ಷಣೆಗೆ ಸರಕಾರ ಸದಾ ಬದ್ಧವಾಗಿರುತ್ತದೆ ಎಂದರು.
ಇದೇ ವೇಳೆ ಜಿಲ್ಲಾಡಳಿತದ ವತಿಯಿಂದ 19 ಜನರಿಗೆ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ರಮೇಶ ಜಾರಕಿಹೊಳಿ ಅವರ ಭಾಷಣದ ಪೂರ್ಣ ಪಾಠ ಇಲ್ಲಿದೆ: 

ಇಂದಿನ ಸಂಭ್ರಮದಲ್ಲಿ ಭಾಗಿಯಾಗಿರುವ ನಾಡಿನ ಹಿರಿಯ ಜೀವಿಗಳಿಗೆ, ಕರ್ನಾಟಕದ ಏಕೀಕರಣಕ್ಕೆ ದುಡಿದ ಮಹನೀಯರಿಗೆ, ವಿದ್ವಾಂಸರು, ಕವಿ-ಸಾಹಿತಿಗಳಿಗೆ, ಚಿಂತಕರು, ಜಿಲ್ಲೆಯ ಶಾಸಕ ಮಿತ್ರರು, ಸಂಸದರು, ಹಾಗೂ ಎಲ್ಲ ಜನಪ್ರತಿನಿಧಿಗಳು, ನಾಗರಿಕ ಬಂಧುಗಳು, ಸಹೋದರ-ಸಹೋದರಿಯರು ಮತ್ತು ಮಾಧ್ಯಮದ ಸ್ನೇಹಿತರಿಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಅದೇ ರೀತಿ ಸಂಗೀತ, ಶಿಕ್ಷಣ ಮತ್ತು ಬಯಲಾಟ ಕ್ಷೇತ್ರದಲ್ಲಿನ ಸಾಧನೆಗಾಗಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಅನಂತ ತೇರದಾಳ, ಶ್ರೀಮತಿ ಕೆಂಪವ್ವ ಹರಿಜನ ಹಾಗೂ ಅಶೋಕ ಶೆಟ್ಟರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಇತಿಹಾಸದಲ್ಲಿ ವೇಣುಗ್ರಾಮವೆಂದು ಹೆಸರುವಾಸಿಯಾಗಿದ್ದ ನಮ್ಮ ಬೆಳಗಾವಿಯು ತನ್ನ ವಿಶಿಷ್ಟ ಪರಿಸರದಿಂದಾಗಿ ಎಲ್ಲರಿಗೂ ಪ್ರಿಯವಾಗಿದೆ. ಐತಿಹಾಸಿಕವಾಗಿ ಜಿಲ್ಲೆಯ ಹಲಸಿ ಗ್ರಾಮವು ಕದಂಬ ಅರಸರ ರಾಜಧಾನಿಯಾಗಿದ್ದ ಸಂಗತಿ ಸ್ಥಳೀಯವಾಗಿ ಲಭ್ಯವಿರುವ ಶಾಸನಗಳು ಮತ್ತು ತಾಮ್ರ ಪತ್ರಗಳ ಆಧಾರದಿಂದ ತಿಳಿದುಬರುತ್ತದೆ.
೬ನೇ ಶತಮಾನದಿಂದ ಕ್ರಿ.ಶ ೭೬೦ರ ವರೆಗೂ ಬೆಳಗಾವಿಯು ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿತ್ತು. ಕ್ರಿ,ಶ ೮೭೫ರ ಅವಧಿಯಲ್ಲಿ ರಾಷ್ಟçಕೂಟರ ಆಳ್ವಿಕೆಯಲ್ಲಿ ಸಾಂಸ್ಕೃತಿಕವಾಗಿ ಬೆಳೆದುಬಂದ ಬೆಳಗಾವಿ, ನಂತರ ರಟ್ಟ ವಂಶದ ಅರಸರ ರಾಜಧಾನಿಯಾಗಿತ್ತು.
ದೆಹಲಿಯ ಸುಲ್ತಾನರ ಹಾಗೂ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿದ್ದ ಬೆಳಗಾವಿ, ಕ್ರಿ.ಶ ೧೩೪೭ರಲ್ಲಿ ಬಹುಮನಿ ಸುಲ್ತಾನರ ಆಳ್ವಿಕೆಯ ಭಾಗವಾಗಿದ್ದ ಕುರಿತಂತೆ ಜಿಲ್ಲೆಯಾದ್ಯಂತ ಅನೇಕ ಸ್ಮಾರಕಗಳನ್ನು ನಾವು ಇಂದಿಗೂ ಕಾಣಬಹುದಾಗಿದೆ.
ಚಾರಿತ್ರಿಕವಾಗಿ ಪಾರತಂತ್ರವನ್ನು ವಿರೋಧಿಸಿ ಬ್ರಿಟೀಷರೊಡನೆ ಸ್ವಾತಂತ್ಹೋರಾಟಕ್ಕೆ ನಾಂದಿ ಹಾಡಿದ ಕಿತ್ತೂರಿನ ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಪ್ರಪ್ರಥಮ ಮಹಿಳಾ ಸೈನ್ಯವನ್ನು ಕಟ್ಟಿದ ಬೆಳವಡಿ ಮಲ್ಲಮ್ಮ ನಮ್ಮ ನಾಡಿನ ಧೀಮಂತ ಶಕ್ತಿ ಎಂಬುದು ಸರ್ವವಿದಿತ.
ರಾಷ್ಟçಪಿತ ಮಹಾತ್ಮಾ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧಿವೇಶನವು ೧೯೨೪ರಲ್ಲಿ ನಮ್ಮ ಬೆಳಗಾವಿಯ ಪುಣ್ಯಭೂಮಿಯಲ್ಲಿಯೇ ನಡೆದಿತ್ತು ಎಂಬುದು ಬೆಳಗಾವಿಯ ಹಿರಿಮೆ.
ಅದೇ ರೀತಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಚಿಕ್ಕೋಡಿ ನ್ಯಾಯಾಲಯದ ಪ್ರಕರಣವೊಂದರಲ್ಲಿ ವಕಾಲತ್ತು ವಹಿಸಿದ್ದು, ಈ ನೆಲದ ಇನ್ನೊಂದು ವಿಶೇಷ. ಅಲ್ಲದೇ ಸಮಾನತೆಯನ್ನು ಸಾರಲು ಜಾತಿ ಭೇದವನ್ನು ತೊಡೆದು ಹಾಕಲು ವಿಶೇಷವಾಗಿ ಅಸ್ಪೃಶ್ಯತೆಯ ನಿವಾರಣೆಗಾಗಿ ಬಹಿಷ್ಕೃತ ಹಿತಕರಣಿ ಸಭಾ ಮೂಲಕ ಜಿಲ್ಲೆಯ ನಿಪ್ಪಾಣಿಯಲ್ಲಿ ಚಳುವಳಿಯನ್ನು ರೂಪಿಸಿದ್ದು ನಮಗೆಲ್ಲ ಹೆಮ್ಮೆಯ ವಿಷಯ.
ಸ್ವಾತಂತ್ರ್ಯ ಪೂರ್ವದಲ್ಲಿಯೇ ಕನ್ನಡ ಕುಲಪುರೋಹಿತರೆಂದು ಖ್ಯಾತಿವೆತ್ತ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳುವಳಿಯ ಕಿಚ್ಚು ಹೊತ್ತಿಸಿದರು. ೧೯೫೦ರ ಸುಮಾರಿಗೆ ಭಾರತವು ಗಣರಾಜ್ಯವೆಂದು ಘೋಷಿಸಲ್ಪಟ್ಟ ನಂತರ, ಡೆಪ್ಯೂಟಿ ಚೆನ್ನಬಸಪ್ಪ, ಅ.ನ.ಕೃಷ್ಣರಾಯರು, ಬಿ.ಎಂ.ಶ್ರೀಕಂಠಯ್ಯನವರು, ಫ.ಗು.ಹಳಕಟ್ಟಿಯವರು, ಹುಯಿಲಗೋಳ ನಾರಾಯಣರಾಯರು, ಅಂದಾನೆಪ್ಪ ದೊಡ್ಡಮೇಟಿ ಮುಂತಾದ ಮಹನೀಯರ ಅವಿರತ ಹೋರಾಟದ ಫಲವಾಗಿ ೧೯೫೬ರ ನವೆಂಬರ್ ೧ ರಂದು ನಮ್ಮ ಹೆಮ್ಮೆಯ ಕರುನಾಡು, ಚಂದನದ ತವರೂರು ಕರ್ನಾಟಕ ರಾಜ್ಯವು ಉದಯವಾಗಿದೆ.
ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಬೆಳಗಾವಿ ಜಿಲ್ಲೆಯಿಂದ ಹಲವಾರು ಮಹನೀಯರು ಕ್ರಿಯಾಶೀಲರಾಗಿ ಹೋರಾಡಿದ್ದು, ಬೈಲಹೊಂಗಲದ ಗಂಗಾಧರ ತುರಮುರಿ, ಹುದಲಿಯ ಸ್ವಾತಂತ್ರ್ಯ ಯೋಧರಾದ ಗಂಗಾಧರರಾವ್ ದೇಶಪಾಂಡೆ, ಚಿಂಚಲಿಯ ರಾಷ್ಟ್ರೀಯವಾದಿ ಆರ್.ಎಸ್.ಹುಕ್ಕೇರಿ, ತ್ರಿವಿಧ ದಾಸೋಹಿ ನಾಗನೂರ ಶಿವಬಸವ ಮಹಾಸ್ವಾಮಿಗಳು, ಗೋಕಾವಿ ನಾಡಿನ ಬೆಟಗೇರಿ ಕೃಷ್ಣಶರ್ಮ, ಸವದತ್ತಿಯ ಶಂ.ಬಾ.ಜೋಶಿ, ಅಂಕಲಿಯ ಬಸವಪ್ರಭು ಕೋರೆ, ಅಥಣಿಯ ಬಿ.ಎನ್.ದಾತಾರ, ಕುಂದರನಾಡಿನ ಅಣ್ಣೂ ಗುರೂಜಿ, ದತ್ತೋಪಂತ ಬೆಳವಿ, ಸಂಪಗಾವಿಯ ಚನ್ನಪ್ಪ ವಾಲಿ ಮೊದಲಾದವರ ಕೊಡುಗೆ ಅವಿಸ್ಮರಣೀಯವಾಗಿದೆ.
ಚಂಪಾಬಾಯಿ ಭೋಗಲೆ, ಅಕ್ಕನ ಬಳಗದ ಬಸಲಿಂಗಮ್ಮ ಬಾಳೆಕುಂದ್ರಿ, ಕೃಷ್ಣಾಬಾಯಿ ಪಣಜೀಕರ ಮೊದಲಾದ ಮಹಿಳೆಯರೂ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿರುವುದು ನಾಡು-ನುಡಿ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ಮಹಿಳೆಯರ ಕೊಡುಗೆ ಅಪಾರ ಎಂಬುದಕ್ಕೆ ಸಾಕ್ಷಿಯಾಗಿದೆ.
ಕನ್ನಡ ಭಾಷಿಕ ಪ್ರದೇಶಗಳು ಒಂದಾಗಿ ಅಖಂಡ ಕರ್ನಾಟಕ ರಚನೆಯಾಗಬೇಕೆಂಬ ಕನಸು ನನಸಾಗಿ ಇಂದಿಗೆ ೬೪ ವರ್ಷಗಳು ಪೂರ್ಣಗೊಂಡಿದ್ದು, ನಾವೆಲ್ಲರೂ ೬೫ನೇ ರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸುತ್ತಿರುವುದು ಕರ್ನಾಟಕದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ದಿನವಾಗಿದೆ.
 ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪರವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಇಂತಹ ಸಂಕಷ್ಟದ ಕಾಲದಲ್ಲಿಯೂ ಜನಪರ ಕಾರ್ಯಕ್ರಮಗಳನ್ನು ರೂಪಿಸುವುದರ ಜತೆಗೆ ಪ್ರವಾಹ ಸಂತ್ರಸ್ತರಿಗೆ ಬದುಕು ಕಟ್ಟಿಕೊಡುವ ದೃಢ ಸಂಕಲ್ಪ ಮಾಡಿದೆ.
ಈ ಸಂದರ್ಭದಲ್ಲಿ ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಕೈಗೊಂಡ ಕೆಲವು ಅಭಿವೃದ್ಧಿ ಕೆಲಸಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.
ಪ್ರಸ್ತುತ ೨೦೨೦ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿರುವುದರಿಂದ ರೈತರಿಗೆ ಬಿತ್ತನೆ ಕಾರ್ಯಕ್ಕೆ ಅನುಕೂಲಕರವಾಗಿದೆ. ಈ ಮುಂಗಾರಿನಲ್ಲಿ ಒಟ್ಟು ೬.೮೮ ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಇಲ್ಲಿಯವರೆಗೆ ಎಲ್ಲಾ ಬೆಳೆಗಳು ಸೇರಿದಂತೆ ಒಟ್ಟು ೬.೯೭ ಲಕ್ಷ ಹೆಕ್ಟೇರ್‌ಗಳಷ್ಟು ಅಂದರೆ ಶೇ. ೧೦೧ ರಷ್ಟು ಬಿತ್ತನೆಯಾಗಿದೆ.
ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಆಗಿರುವ ಹೆಚ್ಚು ಮಳೆಯಿಂದಾಗಿ ಮತ್ತು ಪ್ರವಾಹದಿಂದ ಜಿಲ್ಲೆಯಲ್ಲಿ ನೆರೆ ಪರಿಸ್ಥಿತಿ ಉದ್ಭವವಾಗಿ ಬೆಳೆಗಳಲ್ಲಿ ನೀರು ನಿಂತು ಸುಮಾರು ೧ ಲಕ್ಷ ೫೫ ಸಾವಿರ ಹೆಕ್ಟೇರ್ ಪ್ರದೇಶವನ್ನು ಬಾಧಿತ ಕ್ಷೇತ್ರವೆಂದು ಅಂದಾಜಿಸಲಾಗಿದೆ. ಸಮೀಕ್ಷೆ ಪೂರ್ಣಗೊಂಡ ಕ್ಷೇತ್ರಕ್ಕೆ ಬೆಳೆ ಹಾನಿ ಪರಿಹಾರ ಕೋರಿ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಒಟ್ಟು ೧.೫೫ ಲಕ್ಷ ರೈತರಿಗೆ ೧೨.೩೪ ಕೋಟಿ ರೂ. ಗಳ ಅನುದಾನದಲ್ಲಿ ೪೮, ೫೯೧ ಕ್ವಿಂಟಾಲ್ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ೨ ಲಕ್ಷ ೧೧ ಸಾವಿರ ೯೧೭ ಮೆಟ್ರಿಕ್ ಟನ್ ರಸಗೊಬ್ಬರ ವಿತರಣೆಯಾಗಿದೆ ಹಾಗೂ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆ ಕಾರ್ಯ ಪ್ರಗತಿಯಲ್ಲಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿಯವರೆ ೫.೩೨ ಲಕ್ಷ ಫಲಾನುಭವಿಗಳಿಗೆ ರೂ. ೪೯೦.೨೯ ಕೋಟಿ ಸಹಾಯಧನವನ್ನು ನೇರವಾಗಿ ರೈತರ ಖಾತೆಗೆ ಜಮೆಯಾಗಿರುತ್ತದೆ.
ಆತ್ಮ ನಿರ್ಭರ ಯೋಜನೆಯಡಿ ಒಂದು ಜಿಲ್ಲೆ ಒಂದು ಉತ್ಪನ್ನ ಶೀರ್ಷಿಕೆಯಡಿ ಜಿಲ್ಲೆಗೆ ಬೆಲ್ಲ ಉತ್ಪನ್ನವನ್ನು ಆಯ್ಕೆಮಾಡಲಾಗಿದೆ. ಆಯ್ಕೆಯಾದ ಉತ್ಪನ್ನದ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಬ್ರಾಂಡಿಂಗ್ ಮಾಡುವ ಉದ್ದೇಶ ಹೊಂದಲಾಗಿದೆ.
ಸದರಿ ಯೋಜನೆಯಡಿ ಮೌಲ್ಯವರ್ಧನೆ ಮಾಡುವ ಘಟಕಗಳಿಗೆ ಯೋಜನೆ ಮೊತ್ತದ ೩೫% ಅಥವಾ ಗರಿಷ್ಠ ರೂ. ೧೦ ಲಕ್ಷದ ವರೆಗೆ ಸಹಾಯಧನ ನೀಡುವ ಉದ್ದೇಶ ಹೊಂದಲಾಗಿದೆ.
ಬೆಳೆ ಸಮೀಕ್ಷೆ ಯೋಜನೆಯಡಿ ರೈತರಿಗೆ ತಮ್ಮ ಜಮೀನಿಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಅಪ್ಲೋಡ್ ಮಾಡುವ ವಿನೂತನ ಯೋಜನೆಯನ್ನು ಪ್ರಾರಂಭಿಸಲಾಗಿಸಲಾಗಿರುತ್ತದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸುಮಾರು ೧೪ ಲಕ್ಷ ೬೪ ಸಾವಿರ ೩೦೬ ಕ್ಷೇತ್ರಗಳಲ್ಲಿ ಬೆಳೆದ ಮುಂಗಾರು ಹಂಗಾಮಿನ ವಿವಿಧ ಬೆಳಗಳ ಮಾಹಿತಿಯನ್ನು ರೈತರ ಬೆಳೆ ಸಮೀಕ್ಷೆ ಮೋಬೈಲ್ ಆ್ಯಪ್‌ನಿಂದ ಅಪ್ಲೋಡ್ ಮಾಡಲಾಗಿದೆ.
ಜಿಲ್ಲೆಯ ಒಟ್ಟು ತೋಟಗಾರಿಕೆ ಕ್ಷೇತ್ರವು ೮೫ ಸಾವಿರ ೧೭೭ ಹೆಕ್ಟೇರ್ ಗಳಷ್ಟಿರುತ್ತದೆ. ಕಳೆದ ೫ ವರ್ಷಗಳಲ್ಲಿ ತೋಟಗಾರಿಕೆ ಕ್ಷೇತ್ರವು ಶೇ೧೧.೫೫ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಇದರಿಂದ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯು ತೋಟಗಾರಿಕೆ ಜಿಲ್ಲೆಯೆಂದು ಘೋಷಿತವಾಗಿದೆ.
ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ರೈತರ ಅನುಕೂಲಕ್ಕಾಗಿ ೨೦೨೦-೨೧ನೇ ಸಾಲಿಗೆ ರಾಷ್ಟಿçÃಯ ತೋಟಗಾರಿಕೆ ಮಿಷನ್ ಯೋಜನೆಯಡಿ ಜಿಲ್ಲೆಗೆ ೯೩೭ ಲಕ್ಷಗಳ ಅನುದಾನ ನಿಗದಿಯಾಗಿದ್ದು,   ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತೀರ್ಣ, ಕೃಷಿ ಹೊಂಡ/ಸಮುದಾಯ ಕೆರೆಗಳ ನಿರ್ಮಾಣ ತೋಟಗಾರಿಕೆಯಲ್ಲಿ ಯಾಂತ್ರೀಕರಣ ಹಾಗೂ ತೋಟಗಾರಿಕೆ ಬೆಳೆಗಳನ್ನು ಸಂಸ್ಕರಿಸಲು ಪ್ರಾಥಮಿಕ ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ಪ್ರೋತ್ಸಾಹಿಸಲಾಗುತ್ತದೆ.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ೯೪೦ ಲಕ್ಷಗಳ ಅನುದಾನ ನಿಗದಿಯಾಗಿದ್ದು, ಈ ಮೂಲಕ ಜಿಲ್ಲೆಯ ರೈತರಿಗೆ ಹನಿ ನೀರಾವರಿ ಘಟಕಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಕೋವೀಡ್-೧೯ ಸಂದರ್ಭದಲ್ಲಿ ಹಾನಿಗೊಳಗಾದ ಹೂ, ಹಣ್ಣು ಮತ್ತು ತರಕಾರಿ ಬೆಳೆದ ರೈತರಿಗೆ ಪ್ರತಿ ಹೆಕ್ಟೇರ್‌ಗೆ ರೂ.೧೫ ಸಾವಿರದಿಂದ ೨೫ ಸಾವಿರದವರೆಗೆ ಪರಿಹಾರ ಧನವನ್ನು ಒಟ್ಟು ೧೧ ಸಾವಿರ ೪೩೭ ರೈತರಿಗೆ ಹಂಚಿಕೆ ಮಾಡಲಾಗುತ್ತಿದೆ.
ರೈತರು ಬೆಳೆದ ಹೂವುಗಳನ್ನು ಮಾರಾಟ ಮಾಡಲು ಒಂದು ಸುಸ್ಥಿರ ಸುಸಜ್ಜಿತ ಪುಷ್ಪ ಹರಾಜು ಕೇಂದ್ರವನ್ನು ಬೆಳಗಾವಿ ನಗರದಲ್ಲಿ ನಿರ್ಮಿಸಲಾಗಿದೆ.
*****
ಜಿಲ್ಲೆಯಲ್ಲಿ ೨೦೧೯ ರ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿ ಸಂಭವಿಸಿದ ಎ, ಬಿ ಹಾಗೂ ಸಿ ಕೆಟಗರಿಯ ಒಟ್ಟು ೪೪,೧೫೬ ಮನೆಗಳ ಮಾಲೀಕರಿಗೆ ಈಗಾಗಲೇ ೪೮೮.೭೪ ಕೋಟಿ ರೂಪಾಯಿ ಪರಿಹಾರ ವಿತರಿಸಲಾಗಿದೆ.
ಅದೇ ರೀತಿ ೨೦೧೯-೨೦ ನೇ ಸಾಲಿಗೆ ಸಂಬಂಧಿಸಿದಂತೆ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿರುವ ೧, ೫೩, ೯೮೪ ರೈತರಿಗೆ ೨೫೮ ಕೋಟಿ ರೂಪಾಯಿ ಪರಿಹಾರ ಧನ ನೀಡಲಾಗಿರುತ್ತದೆ.
ಇತ್ತೀಚೆಗೆ ಅಂದರೆ ೨೦೨೦-೨೧ ನೇ ಸಾಲಿನ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಬೆಳೆಹಾನಿ ಅನುಭವಿಸಿದ ೧೪,೦೬೭ ರೈತರಿಗೆ ೬.೪೨ ಕೋಟಿ ರೂಪಾಯಿ ಪರಿಹಾರ ಧನ ಕೂಡ ವಿತರಿಸಲಾಗಿದೆ.
ಕರ್ನಾಟಕ ಜಲಸಂಪನ್ಮೂಲ ಇಲಾಖೆಯ ವತಿಯಿಂದ ಆಗಸ್ಟ್ ತಿಂಗಳಿನಲ್ಲಿ ಮುಂಬೈನಲ್ಲಿ ಮಹಾರಾಷ್ಟç ಸರ್ಕಾರದ ನೀರಾವರಿ ಇಲಾಖೆಯ ಸಚಿವರು ಹಾಗೂ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿ, ಮಳೆಗಾಲದಲ್ಲಿ ಜಲಾಶಯಗಳಿಂದ ನೀರು ಬಿಡುಗಡೆ ಕುರಿತು ಸಮನ್ವಯ ಸಾಧಿಸಿದ ಪರಿಣಾಮ ಈ ಬಾರಿ ಪ್ರವಾಹ ಪರಿಸ್ಥಿತಿ ಉದ್ಭವಿಸದಂತೆ ಎಚ್ಚರಿಕೆ ವಹಿಸಿಲಾಗಿತ್ತು.
ಜಿಲ್ಲೆಯಲ್ಲಿ ಕೋವಿಡ್-೧೯ ನಿಯಂತ್ರಣ ಮತ್ತು ಚಿಕಿತ್ಸೆಗೆ ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಅಕ್ಟೋಬರ್ ೩೦ ರವರೆಗೆ ಒಟ್ಟು ೨.೧೯ ಲಕ್ಷ ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ ಒಟ್ಟಾರೆ ೨೪ ಸಾವಿರ ೬೪೨ ಕೋವಿಡ್ ಪ್ರಕರಣಗಳು ದೃಢಪಟ್ಟಿರುತ್ತವೆ.
೧ ಲಕ್ಷ ೯೧ ಸಾವಿರ ೬೦೩ ಜನರ ವರದಿ ನೆಗೆಟಿವ್ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ೨೩ ಸಾವಿರ ೭೯೬ ಜನರು ಗುಣಮುಖರಾಗಿದ್ದು, ಸದ್ಯಕ್ಕೆ ೫೧೩ ಸಕ್ರಿಯ ಪ್ರಕರಣಗಳಿರುತ್ತವೆ.
ಸದ್ಯಕ್ಕೆ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಗಣನೀಯವಾಗಿ ಇಳಿಮುಖಗೊಂಡಿದ್ದು, ಆಕ್ಸಿಜನ್ ಸೌಲಭ್ಯ ಹೊಂದಿರುವ ಬೆಡ್‌ಗಳ ಬೇಡಿಕೆ ಕೂಡ ಕಡಿಮೆಯಾಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಪರೀಕ್ಷೆಗೊಳಪಡಿಸಿದ ಜನರ ಪೈಕಿ ಸೋಂಕಿತರ ಪ್ರಮಾಣ ಶೇ. ೫ಕ್ಕಿಂತ ಕಡಿಮೆಯಾಗಿರುವುದು ಕಂಡುಬಂದಿದೆ.
ಆಯುಷ್ಮಾನ್ ಭಾರತ – ಆರೋಗ್ಯ ಕರ್ನಾಟಕ ಯೋಜನೆಯಡಿ ಸೆಪ್ಟೆಂಬರ್ ೨೦೨೦ರ ಅಂತ್ಯದವರೆಗೆ ಒಟ್ಟು ೫೪ ಸಾವಿರ ೫೯೫ ಫಲಾನುಭವಿಗಳಿಗೆ ೧೧ ಕೋಟಿ ೫೯ ಲಕ್ಷ ರೂಪಾಯಿ ವಿನಿಯೋಗಿಸಲಾಗಿದೆ. ಈ ಯೋಜನೆಯಡಿ ಕೋವಿಡ್ ಸೋಂಕಿತ ೧೭೪೨ ಜನರ ಚಿಕಿತ್ಸೆಗೆ ೫.೧೫ ಕೋಟಿ ರೂಪಾಯಿ ವೆಚ್ಚ ಮಾಡಲಾಗಿರುತ್ತದೆ.
*****
೨೦೨೦-೨೧ ನೇ ಸಾಲಿನ ಯೋಜನೆಯಡಿಯಲ್ಲಿ ೧ ರಿಂದ ೧೦ ನೇ ತರಗತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ ಹಾಗೂ ಸಾಕ್ಸ್ ನೀಡುವ ಯೋಜನೆಯಡಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ  ೨೦೨೦-೨೧ ನೇ ಸಾಲಿಗೆ ೧ ರಿಂದ ೧೦ ತರಗತಿಯ ಎಲ್ಲ ಸರ್ಕಾರಿ ಒಟ್ಟು ೨ ಲಕ್ಷ ೩ ಸಾವಿರ ೯೪೩ ಶಾಲಾ ವಿದ್ಯಾರ್ಥಿಗಳಿಗೆ ಷೂ ಮತ್ತು ಸಾಕ್ಸ್ ವಿತರಣೆ ಮಾಡಲಾಗುವುದು.
ಉಚಿತ ಪಠ್ಯ ಪುಸ್ತಕ ಯೋಜನೆಯಡಿಯಲ್ಲಿ ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಉಚಿತವಾಗಿ ೨೮ ಲಕ್ಷ ೯೨ ಸಾವಿರ ಹಾಗೂ ಅನುದಾನ ರಹಿತ ಶಾಲಾ ಮಕ್ಕಳಿಗೆ ೫ ಲಕ್ಷ ೬೪ ಸಾವಿರ ೪೧೧ ಸೇರಿದಂತೆ ಒಟ್ಟು ೩೪ ಲಕ್ಷ ೫೭ ಸಾವಿರ ೬೩ ಪಠ್ಯ ಪುಸ್ತಕಗಳನ್ನು ಪೂರೈಸಲಾಗಿದೆ.
ಅದೇ ರೀತಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ೨೦೨೦-೨೧ ನೇ ಸಾಲಿನ ಪಠ್ಯ ಪುಸ್ತಕ ಸರಕಾರಿ ಅನುದಾನಿತ ೦೧ ರಿಂದ ೧೦ ನೇ ತರಗತಿಯ  ಬೇಡಿಕೆ ಪುಸ್ತಕಗಳ ಸಂಖ್ಯೆ ೪ ಲಕ್ಷ ೯೮ ಸಾವಿರ ಸ್ವೀಕರಿಸಿದ್ದು,  ಸರಕಾರಿ ಅನುದಾನಿತ ಎಲ್ಲಾ ಶಾಲಾ ಮಕ್ಕಳಿಗೆ ಒದಗಿಸಲಾಗಿದೆ.
ಬೆಳಗಾವಿ ಜಿಲ್ಲೆಯು ಪ್ರಸಕ್ತ ಸಾಲಿನಲ್ಲಿ ನಡೆಸಲಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಕೋವಿಡ್ ೧೯ ರ ಮಧ್ಯೆಯೂ ಯಶಸ್ವಿಯಾಗಿ ನಡೆಸಲಾಗಿರುತ್ತದೆ.
   ಶೈಕ್ಷಣಿಕ ಚಿಕ್ಕೋಡಿ ಜಿಲ್ಲೆಯ ವ್ಯಾಪ್ತಿಯಲ್ಲಿ ೦೪ ಅಭ್ಯರ್ಥಿಗಳು ಈ ಸಲ ಯುಪಿಎಸ್‌ಸಿ ಪರಿಕ್ಷೆಯಲ್ಲಿ ಆಯ್ಕೆಯಾಗಿರುವುದು ಪ್ರಶಂಸನಾರ್ಹವಾಗಿದೆ.
******
ಸರ್ಕಾರದಿಂದ ಹೊಸದಾಗಿ ಘೋಷಣೆ ಮಾಡಲಾದ ನೇಕಾರರ ಸಮ್ಮಾನ ಯೋಜನೆಯಡಿ ಪ್ರತಿ ಕೈಮಗ್ಗ ನೇಕಾರರಿಗೆ ಪ್ರತಿ ವರ್ಷ ೨ ಸಾವಿರ ರೂಪಾಯಿ ಸಹಾಯಧವನ್ನು ನೀಡಲಾಗುತ್ತಿದೆ.  ೨೦೨೦-೨೧ ನೇ ಸಾಲಿನಲ್ಲಿ ೪,೦೨೨ ನೇಕಾರರಿಗೆ ತಲಾ ಎರಡು ಸಾವಿರ ರೂಪಾಯಿಯಂತೆ ೮೦.೪೪ ಲಕ್ಷ ಸಹಾಯಧನ ಬಿಡಗುಡೆ ಮಾಡಲಾಗಿದೆ.
ವಿದ್ಯುತ್ ಮಗ್ಗ ನೇಕಾರರಿಗೆ ಕೋವಿಡ್-೧೯ ಲಾಕ್ ಡೌನ್ ಸಂಬಂಧ ಒಂದು ಸಲದ ಪರಿಹಾರ ಯೋಜನೆಯಡಿ ಪ್ರತಿ ನೇಕಾರರಿಗೆ ಎರಡು ಸಾವಿರದಂತೆ ಒಟ್ಟು ೧೩ ಸಾವಿರ ೬೧೬ ನೇಕಾರರಿಗೆ ರೂ.೨೭೨.೩೨ ಲಕ್ಷ ಸಹಾಯಧನ ಬಿಡುಗಡೆ ಮಾಡಲಾಗಿದೆ.
ನೇಕಾರರು ನೇಕಾರಿಕೆ ಉದ್ದೇಶಕ್ಕಾಗಿ ಸಹಕಾರಿ ಸಂಘಗಳು / ಸಹಕಾರಿ ಬ್ಯಾಂಕುಗಳಿAದ ಪಡೆದ ಗರಿಷ್ಟ ಒಂದು ಲಕ್ಷಗಳ ವರೆಗಿನ ಸಾಲ ಮನ್ನಾ ಯೋಜನೆಯಡಿ ಒಟ್ಟು ೧೬೩೨ ನೇಕಾರರ ರೂ.೮೮೬ ಲಕ್ಷ ಸಾಲ ಮನ್ನಾ ಮಾಡಲಾಗಿದೆ.
ಸರ್ಕಾರವು ಪ್ರವಾಸೋದ್ಯಮ ಇಲಾಖೆಯಿಂದ ವಿಶೇಷ ಪ್ರವಾಸಿ ಟ್ಯಾಕ್ಸಿ ಯೋಜನೆಯನ್ನು ಜಾರಿಗೊಳಿಸಿದ್ದು, ಇದು ಬೆಳಗಾವಿ ಜಿಲ್ಲೆಯ ನಿರುದ್ಯೋಗಿ  ಅಭ್ಯರ್ಥಿಗಳ ಬದುಕಿಗೆ ಆಸರೆಯಾಗಿದೆ.
೨೦೦೯-೧೦ನೇ ಸಾಲಿನಿಂದ ಈ ಯೋಜನೆ ಜಾರಿಯಲ್ಲಿದ್ದು, ಇದುವರೆಗೂ ಒಟ್ಟು ೯೬೯ ನಿರುದ್ಯೋಗಿಗಳಿಗೆ ಪ್ರವಾಸಿ ಟ್ಯಾಕ್ಸಿಗಳನ್ನು ವಿತರಿಸಿದ್ದು, ರೂ.೨೦.೫೫ ಕೋಟಿ ಸಹಾಯಧನವನ್ನು ವಿತರಿಸಲಾಗಿದೆ.
ನೂತನ ಪ್ರವಾಸೋದ್ಯಮ ನೀತಿ ೨೦೧೫-೨೦೨೦ ರ ಅಡಿ ಜಿಲ್ಲಾ ಪ್ರವಾಸೋದ್ಯಮ ಸಮಿತಿಯಿಂದ ಒಟ್ಟು ೧೮ ಹೋಟೆಲ್ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಒಟ್ಟು ರೂ. ೪೬.೫೫ ಕೋಟಿ ಬಂಡವಾಳ ಹೂಡಿಕೆಯಾಗಿದ್ದು, ಈ ಯೋಜನೆಗಳು ಪೂರ್ಣಗೊಂಡ ಬಳಿಕ ಯೋಜನಾಪ್ರರ್ವತಕರಿಗೆ ಲಭ್ಯವಾಗುವ ಉತ್ತೇಜನವನ್ನು ನಿಯಮಾನುಸಾರ ಒದಗಿಸಲು ಕ್ರಮವಹಿಸಲಾಗಿದೆ.
ಬೆಳಗಾವಿ ಜಿಲ್ಲೆಯು ಸಹಕಾರ ಜಿಲ್ಲೆಯಾಗಿದ್ದು ರಾಜ್ಯದಲ್ಲಿ ಸಹಕಾರ ಚಳುವಳಿಯಲ್ಲಿ ಬೆಳಗಾವಿ ಜಿಲ್ಲೆ ಮುಂಚೂಣಿಯಲ್ಲಿದೆ.
ಒಂದು ಲಕ್ಷದವರೆಗಿನ ಸಾಲಮನ್ನಾ ಯೋಜನೆಯಲ್ಲಿ ಬೆಳಗಾವಿ ಜಿಲ್ಲೆಯ ಒಟ್ಟು ೨ ಲಕ್ಷ ೮೭ ಸಾವಿರ ರೈತರ ಸಾಲದ ರೂ. ೧೧೬೨ ಕೋಟಿ ಮನ್ನಾ ಆಗುವ ಬಗ್ಗೆ ಅಂದಾಜಿಸಲಾಗಿದೆ. ಈವರೆಗೆ ಜಿಲ್ಲೆಯ ೨.೬೦ ಲಕ್ಷ ರೈತರಿಗೆ ೧ ಸಾವಿರ ೨೦ ಕೋಟಿ ರೂಪಾಯಿ ಬಿಡುಗಡೆಯಾಗಿರುತ್ತದೆ.
ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಸಾಲ ವಿತರಿಸಲಾಗುತ್ತಿದ್ದು, ಸೆಪ್ಟೆಂಬರ್ ಅಂತ್ಯದವರೆಗೆ ೨ ಲಕ್ಷ ೮೮ ಸಾವಿರ ರೈತರಿಗೆ ೧ ಸಾವಿರ ೪೫೪ ಕೋಟಿ ರೂಪಾಯಿ ಬೆಳೆ ಸಾಲ ವಿತರಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ, ಅಡವಿ ಸಿದ್ದೇಶ್ವರ ಏತ ನೀರಾವರಿ ಯೋಜನೆ, ಶಂಕರಲಿಂಗ ಏತ ನೀರಾವರಿ ಯೋಜನೆ, ಕರಗಾಂವ ಏತ ನೀರಾವರಿ ಯೋಜನೆ, ಸತ್ತಿಗೇರಿ ಏತ ನೀರಾವರಿ ಯೋಜನೆ, ರಾಮಲಿಂಗೇಶ್ವರ ಏತ ನೀರಾವರಿ ಯೋಜನೆ, ಮರೆಗುದ್ದಿ ಹಾಗೂ ಬೆಂಡವಾಡ ಏತ ನೀರಾವರಿ ಸೇರಿದಂತೆ ಅನೇಕ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಪ್ರಸ್ತಾವವಿದೆ.
ಅಥಣಿ ತಾಲ್ಲೂಕಿನ ೧೭ ಕೆರೆಗಳನ್ನು ಝುಂಜರವಾಡ ಗ್ರಾಮದ ಹತ್ತಿರದ ಕೃಷ್ಣಾ ನದಿಯಿಂದ ನೀರನ್ನು ಎತ್ತಿ ತುಂಬಿಸುವ ಯೋಜನೆ; ಕಾಗವಾಡ ತಾಲ್ಲೂಕಿನ ೨೩ ಕೆರೆಗಳು; ಅರಬಾವಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ೨೧ ಕೆರೆಗಳನ್ನು ಘಟಪ್ರಭಾ ನದಿಯಿಂದ ನೀರು ತುಂಬಿಸುವ ಯೋಜನೆ; ಗೋಕಾಕ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ೨೪ ಕೆರೆಗಳನ್ನು ಮಾರ್ಕಂಡೇಯ ನದಿಯಿಂದ ನೀರು ತುಂಬಿಸುವ ಯೋಜನೆ; ಗೋಕಾಕ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ೩೨ ಕೆರೆಗಳನ್ನು ಘಟಪ್ರಭಾ ನದಿಯಿಂದ ನೀರು ತುಂಬಿಸುವ ಯೋಜನೆ ಚಾಲ್ತಿಯಲ್ಲಿವೆ.
ಬೆಳಗಾವಿ ಮಹಾನಗರ ಪಾಲಿಕೆಯ ಆಯ್ದ ೧೦ ವಾರ್ಡ್ಗಳಲ್ಲಿ ನಿರಂತರ ನೀರು ಸರಬರಾಜು ಯೋಜನೆಯನ್ನು ವಿಶ್ವ ಬ್ಯಾಂಕ್ ನೆರವಿನೊಂದಿಗೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ. ಉಳಿದ ೪೮ ವಾರ್ಡ್ಗಳಿಗೆ ಈ ಸೌಲಭ್ಯವನ್ನು ವಿಸ್ತರಿಸುವ ಕುರಿತು ವಿಶ್ವಬ್ಯಾಂಕಿನ ಧನ ಸಹಾಯದ ಆಧಾರದ ಮೇಲೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಮುಂಬರುವ ೫ ವರ್ಷ ಕಾಲಮಿತಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಎಲ್ಲಾ ವಾರ್ಡಗಳಿಗೆ ನಿರಂತರ ನೀರು ಸರಬರಾಜು ಸೌಲಭ್ಯವನ್ನು ಕಲ್ಪಿಸಲಾಗುವುದು. ಈ ಹಂತದ ಕಾಮಗಾರಿಯ ಸಲುವಾಗಿ ರೂ. ೫೭೧.೩೫ ಕೋಟಿಗಳ ಮೊತ್ತವನ್ನು ನಿಗದಿಪಡಿಸಲಾಗಿದೆ.
ಮಹನೀಯರೇ,
ಅಖಂಡ ಕರ್ನಾಟಕದ ನಿರ್ಮಾಣದ ಕನಸು ನನಸು ಮಾಡಲು ಶ್ರಮಿಸಿದ ನಮ್ಮ ಹಿರಿಯರ ಆಶಯದಂತೆ ಸಮಗ್ರ ಕರ್ನಾಟಕವನ್ನು ಪ್ರಗತಿಪರ ರಾಜ್ಯವನ್ನಾಗಿ ಕಟ್ಟಲು ಎಲ್ಲರೂ ಕೈ ಜೋಡಿಸೋಣ. ಕನ್ನಡ ನಾಡು-ನುಡಿ; ನೆಲ-ಜಲ ಸಂರಕ್ಷಣೆಗೆ ಸರಕಾರ ಸದಾ ಬದ್ಧವಾಗಿರುತ್ತದೆ.
ನಾವೆಲ್ಲರೂ ಒಂದಾಗಿ ಕನ್ನಡದ ತೇರನ್ನು ಮುನ್ನಡೆಸೋಣ; ಕರ್ನಾಟಕವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸೋಣ ಎಂದು ಆಶಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button