Kannada NewsLatest

ಹುಕ್ಕೇರಿ ಹಿರೇಮಠದ ಜೋಳಿಗಿ- ನಾಡಿಗೆಲ್ಲ ಹೋಳಿಗಿ

ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಚ ಸ್ವಾಮೀಜಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ನಗರದಲ್ಲಿ ನವೆಂಬರ್ 1 ರ ರಾಜ್ಯೋತ್ಸವದ ಸೊಬಗಿನ ಸಡಗರವನ್ನು ಕಣ್ತುಂಬಿಕೊಳ್ಳದವರಿಲ್ಲ. ಖುದ್ದಾಗಿ ಇಲ್ಲಿಗೆ ಬಂದೋ, ಇಲ್ಲವೇ ಮಾಧ್ಯಮಗಳಲ್ಲಿ ಕಂಡು ಕಣ್ತುಂಬಿಕೊಂಡೋ ನಮ್ಮ ಈ ಸಡಗರವನ್ನುಕಾಣದವರೇ ಎಲ್ಲ. ಇಂದು ಆ ಹಬ್ಬ ಮತ್ತೊಮ್ಮೆ ಬಂದಿದೆ. ಈ ಹಬ್ಬ ನಮಗೆಲ್ಲ ಕೇವಲ ಒಂದು ಸಾಮಾನ್ಯ ಆಚರಣೆಯಲ್ಲ. ಅದೊಂದು ಸಂಭ್ರಮ, ತಾಯಿ ಭುವನೇಶ್ವರಿಯನ್ನು ವೈಭವೋಪೇತವಾಗಿ ಪೂಜಿಸುವ ಒಂದು ಉತ್ಸವ. ದೂರದೂರುಗಳಿಂದ ಬಂದು ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರುವ ಯುವ ಕನ್ನಡ ಮನಸ್ಸುಗಳೆಲ್ಲ ನಾಡಿನ ಹಿರಿಮೆ ಸಾರುವ ಐತಿಹಾಸಿಕ ಕುರುಹುಗಳ ರೂಪಕಗಳನ್ನು ಮೆರೆಸುವ, ಈ ನಾಡಿನ ವೈಭವವನ್ನು ಸಾರುವ ಸಾಧನೆಗಳನ್ನು ಎತ್ತಿ ಹಿಡಿದು ಕೊಂಡಾಡುವ, ಭಾವಾವೇಶದಿಂದ ಕನ್ನಡವನ್ನು ಆಡಿ-ಹಾಡಿ ಆಚರಿಸುವ ಕನ್ನಡದ ಕಂದಮ್ಮಗಳ ಚಿಲಿಪಿಲಿಯ ಹಬ್ಬ.

ಕೋರೋಣ ಮಹಾಮಾರಿ ಹಾಗು ಕಳೆದ ವರ್ಷ ಕಳೆದುಹೋದ ಅಪ್ಪುವಿನ ಶೋಕಾಚರಣೆಯಲ್ಲಿ ಮೂರು ವರ್ಷಗಳಿಂದ ಕಳೆಗುಂದಿದ್ದ ಬೆಳಗಾವಿಯ ರಾಜ್ಯೋತ್ಸವಕ್ಕೆ ಈ ವರ್ಷ ಎಲ್ಲೆಲ್ಲಿಲ್ಲದ ಸಡಗರ, ಸಂಭ್ರಮ. ಹತ್ತು ಹಲವು ಕಾರ್ಯಕ್ರಮಗಳು ನಮ್ಮ ಈ ಗಂಡು ಮೆಟ್ಟಿನ ನೆಲದಲ್ಲಿ ಜರುಗುತ್ತಲೇ ಇರುತ್ತವೆ, ಅವುಗಳಲ್ಲಿ ಕೆಲವು ಜಾತಿ – ಧರ್ಮದವುಗಳಾದರೆ, ರಾಜಕೀಯ ವೇದಿಕೆಗಳು ಹಲವು. ಆ ಕಾರ್ಯಕ್ರಮಗಳಲ್ಲಿ ಸೇರುವ ಸಾವಿರಾರು ಕಾರ್ಯಕ್ರಮಗಳಿಗೆ ಬರುವ ಜನರಲ್ಲಿ ಅದೆಷ್ಟು ಜನ ಸ್ವಯಂ ಪ್ರೇರಿತರಾಗಿ ಬರುವರೋ ಆ ಭಗವಂತನೇ ಬಲ್ಲ, ಆದರೆ ಇಂದಿನ ಈ ಕನ್ನಡದ ಹಬ್ಬಕ್ಕೆ ಸೇರುವ ಜನ ಮಾತ್ರ ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರಿದರೂ ಅವರ್ಯಾರನ್ನೂ ಇನ್ನ್ಯಾರೋ ಇಲ್ಲಿಗೆ ಕರೆ ತರುವುದಿಲ್ಲ. ಆ ಭಾಷೆ, ನೆಲ ಜಲದ ಅಭಿಮಾನ ಅವರನ್ನೆಲ್ಲ ಹುರಿದುಂಬಿಸಿ ಆತ್ಮಾಭಿಮಾನದಿಂದ ಇಲ್ಲಿಗೆ ಎಳೆದು ತರುತ್ತದೆ ಎಂಬುದರಲ್ಲಿ ಯಾವ ಸಂದೇಶವೂ ಇಲ್ಲ. ಅಂತಹ ಅಭಿಮಾನದ ಈ ಹಬ್ಬವನ್ನು ನಮ್ಮ ಜನ ಈ ಬಾರಿಯೂ ಅತೀ ಉತ್ಸುಕರಾಗಿ ಆಚರಿಸುತ್ತಿರುವುದು ಈ ನಾಡಿಗಾಗಿ, ಕನ್ನಡದ ಉಳಿವು – ಬೆಳೆವಿಗಾಗಿ ದುಡಿದ ಅದೆಷ್ಟೋ ಹಿರಿಯ ಆತ್ಮಗಳಿಗೆ ಇಂದು ಈ ನೆಲದಲ್ಲಿ ಕನ್ನಡತನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿರುವುದಕ್ಕಾಗಿ ಸಂತೃಪ್ತಿಯ ಭಾವವನ್ನು ನೀಡದಿರಲಾರದು. ಅಂತಹ ಸಾರ್ಥಕತೆಯ ಭಾವವನ್ನು ಉಳಿಸಿ ಬೆಳೆಸುವ ಕಡೆ ನಮ್ಮ ಹುಕ್ಕೇರಿಯ ಹಿರೇಮಠ, ನಾಗನೂರಿನ ರುದ್ರಾಕ್ಷಿಮಠ, ಕಾರಂಜಿಮಠದ ಪೂಜ್ಯರು ಸದಾ ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎನ್ನುವುದು ಹೆಮ್ಮೆಯ ಸಂಗತಿ.

ಹೌದು. ಬೆಳಗಾವಿಯಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು, ಕನ್ನಡತನವನ್ನು ಕಾಪಾಡಲು ಈ ಖಾವಿಧಾರಿಗಳು ಮಾಡಿರುವ ಸೇವೆಯನ್ನು ನಾವೆಂದಿಗೂ ಮರೆಯುವಂತಿಲ್ಲ. ಬೆಳಗಾವಿ ಕನ್ನಡಿಗರ ದುರಾವಸ್ಥೆಯನ್ನು ಕಂಡು ಇಲ್ಲಿ ಕನ್ನಡದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ಉಚಿತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ, ಅನ್ಯರ ಉಪಟಳವನ್ನು ತಮ್ಮದೇ ದಾಟಿಯಲ್ಲಿ ಹತ್ತಿಕ್ಕುತ್ತ ಬಂದ ನಾಗನೂರಿನ ರುದ್ರಾಕ್ಷಿಮಠದ ಡಾ ಶ್ರೀ ಶಿವಬಸವ ಸ್ವಾಮೀಜಿಗಳಿಂದ, ಡಾ ಶ್ರೀ ಸಿದ್ದರಾಮಸ್ವಾಮೀಜಿಗಳ ಮೂಲಕ ಇಂದಿನ ಡಾ ಶ್ರೀ ಅಲ್ಲಮಪ್ರಭು ಸ್ವಾಮೀಜಿಗಳವರೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಯೋಗದಾನವನ್ನು ನೀಡಿದ್ದಾರೆ. ಅವರ ಜೊತೆ ಜೊತೆಯಲ್ಲಿಯೇ ನಮ್ಮ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳೂ ಕೂಡ ಗಡಿಭಾಗದ ಕನ್ನಡ ಶಾಲೆಯ ಮಕ್ಕಳಿಗೆ ತುತ್ತು ಅನ್ನ ನೀಡುವ ಕಾಯಕದೊಂದಿಗೆ ಪ್ರತಿನಿತ್ಯ ಸಾವಿರಾರು ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ಸರಬರಾಜು ಮಾಡಿ ಸದ್ದಿಲ್ಲದೇ ಕನ್ನಡಪರ ಮನಸ್ಸುಗಳು ವಿದ್ಯಾವಂತರಾಗಿ ಬಾನೆತ್ತರಕ್ಕೆ ಬೆಳೆಯುವಂತೆ ಮಾಡುತ್ತಿರುವ ಕೀರ್ತಿಯೂ ಅವರಿಗೆ ಸಲ್ಲಬೇಕು.

 

ಅದರೊಟ್ಟಿಗೆ ಇಂದು ಬೆಳಿಗಿನಿಂದ ತಡರಾತ್ರಿಯವೆರೆಗೆ ನಡೆಯುವ ಈ ನಮ್ಮ ರಾಜ್ಯೋತ್ಸವದ ಹಬ್ಬಕ್ಕೆ ಅಪಾರ ಸಂಖ್ಯೆಯಲ್ಲಿ ಬರುವ ಕನ್ನಡಾಭಿಮಾನಿಗಳಿಗೆ ಇಂದು ಬೆಳಗಾವಿಯ ಸರದಾರ್ ಮೈದಾನದಲ್ಲಿ “ಹುಕ್ಕೇರಿ ಮಠದ ಜೋಳಿಗೆಯಿಂದ ಹೋಳಿಗೆ” ನೀಡುವ ಕಾಯಕ ನೆರವೇರಿತು. ನಾವು ಹತ್ತು ಹಲವು ಕಾರ್ಯಕ್ರಮಗಳನ್ನು ಕಂಡಿರಬಹುದು ಆದರೆ ಇಷ್ಟೊಂದು ಅಚ್ಚುಕಟ್ಟಾಗಿ ನೆರೆದಿರುವ ಲಕ್ಷಾಂತರ ಜನರಿಗೆ ಹೋಳಿಗೆ ಬಡಿಸುವ, ಅದರೊಟ್ಟಿಗೆ ಹೊಟ್ಟೆ ತುಂಬ ಅಣ್ಣ ಸಾರು, ಪಲ್ಯ ಬಡಿಸಿ, ಕನ್ನಡದ ಹಬ್ಬದಾಚರಣೆಗೆ ಬಂದವರು ಸ್ವರ್ಗಕ್ಕೆ ಬಂದಿದ್ದೇವೆ ಎಂಬಂತೆ ಭಾಸವಾಗುವ ಹಾಗೆ ಸಿಹಿಯೂಟ ನೀಡಿ, ಅವರ ಹಸಿವು ತಣಿಸಿ ಕಾರ್ಯಕ್ರಮದ ಮೆರಗು ಹೆಚ್ಚಿಸುವ ನಮ್ಮ ಶ್ರೀಗಳ ಪ್ರಯತ್ನ ಮನ – ಮನೆಗಳನ್ನು ತಲುಪದೇ ಇರಲಿಲ್ಲ. ಲೋಕಕಲ್ಯಾಣಕ್ಕಾಗಿ ನಡೆಯುವ ಯಜ್ಞ ಯಾಗಾದಿಗಳಂತೆ, ಕನ್ನಡದ ಆಚರಣೆಗಾಗಿ ಸೇರಿದ ಜನರಿಗೆ ಅನ್ನ ಸಂತರ್ಪಣೆ ಮಾಡಿಸಿ ಶ್ರೀಗಳೂ ಕನ್ನಡದ ಕಲ್ಯಾಣ ಕಾರ್ಯಕ್ಕಿಂದು ಅತೀ ದೊಡ್ಡ ಭಾಷ್ಯ ಬರೆದರು. ಶ್ರೀಗಳ ಈ ಸತ್ಕಾರ್ಯ ಇಂದು ನಿನ್ನೆಯದಲ್ಲ, ಹತ್ತಾರು ವರ್ಷಗಳಿಂದ ಕನ್ನಡಾಭಿಮಾನವನ್ನು ತಮ್ಮದೇ ರೀತಿಯಲ್ಲಿ ಜನರಿಗೆ ಸಿಹಿ ಬಡಿಸಿ ವ್ಯಕ್ತ ಪಡಿಸುತ್ತ ಬಂದಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಅಡುಗೆ ಭಟ್ಟರು ಹಾಗು ತಂಡ ಅಡುಗೆಯ ತಯಾರಿಯಲ್ಲಿ ತೊಡಗಿದ್ದರೇ, ಸಾಮಗ್ರಿಗಳನ್ನೆಲ್ಲ ಸೇರಿಸಿ, ಹೊಂದಿಸಿ ವ್ಯವಸ್ಥೆ ಮಾಡುವ ಕಾರ್ಯಕ್ಕೆ ಮಠದ ಸೇವಕರು ತಿಂಗುಳುಗಟ್ಟಲೆ ದುಡಿದಿದ್ದಾರೆ. ಲಕ್ಷ ಲಕ್ಷ ಹೋಳಿಗೆಯ ಜೊತೆ ಊಟ ಬಡಿಸಲು ಕೋಟಿ ಲೆಕ್ಕದಲ್ಲಿ ಖರ್ಚಾಗದೆ ಇರಲಾರದು, ಆ ಖರ್ಚು ವೆಚ್ಚ ಶ್ರೀಗಳನ್ನು ಬಾಧಿಸದೇ ಬಿಡಲಾರದು ಆದರೂ ಅದ್ಯಾವುದಕ್ಕೂ ಜಗ್ಗದೇ ನಮ್ಮ ನಾಡಿನ ಜನ ಸಿಹಿಯುಂಡು ಸಂಭ್ರಮಿಸಿ ಕನ್ನಡ ನಾಡಿನ ಹಬ್ಬವನ್ನಾಚರಿಸಲಿ ಎಂದು, ತಾವು ಊಟ ನಿದ್ದೆ ಮರೆತು ದುಡಿದ ಶ್ರಮದ ಫಲವಾಗಿ ಇಂದು ಹುಕ್ಕೇರಿ ಮಠದ ಜೋಳಿಗೆಯಿಂದ ನಾಡಿನ ಲಕ್ಷಾಂತರ ಜನರ ಹೊಟ್ಟೆಗೆ ಹೋಳಿಗೆ ಸೇರಿದ್ದಂತೂ ನಿಜ. ಭಗವಂತ ಇಂತಹ ನಿಸ್ವಾರ್ಥದ, ನಿಷ್ಕಲ್ಮಶ ಕನ್ನಡದ ಸಹೃದಯಿಗಳಿಗೆ, ಜನರ ಕಷ್ಟ ಕಾರ್ಪಣ್ಯಕ್ಕೆ, ಮಕ್ಕಳ ಶಿಕ್ಷಣಕ್ಕೆ ಮಿಡಿಯುವ ಹೃದಯ ಶ್ರೀಮಂತ ಪೂಜ್ಯರಿಗೆಲ್ಲ ದೀರ್ಘಾಯಸ್ಸು, ಆಯುರಾರೋಗ್ಯ. ಸಕಲ ಸೌಭಾಗ್ಯ, ಯಶಸ್ಸು, ಕೀರ್ತಿ ನೆಮ್ಮದಿ ನೀಡಿ ಹರಸಲೆಂದು ಪ್ರಾರ್ಥಿಸೋಣ.

(ಬರಹ: ಮಹಾಂತೇಶ ವಕ್ಕುಂದ)

ಕನ್ನಡಕ್ಕಾಗಿ ಹುಚ್ಚಾಯ್ತು ಬೆಳಗಾವಿ: ದೃಷ್ಟಿ ಹರಿಸಿದಲ್ಲೆಲ್ಲ ಹಳದಿ-ಕೆಂಪು; ಕನ್ನಡಿಗರ ಸಂಭ್ರಮ ನೋಡಲು ಕಣ್ಣೆರಡು ಸಾಲದಾಯ್ತು

https://pragati.taskdun.com/latest/belagavi-went-crazy-for-kannada-yellow-red-everywhere-you-look-it-brought-tears-to-see-the-joy-of-the-kannadigas/

ಇಂಜಿನಿಯರ್, ಡಾಕ್ಟರ್ ಆಗುವುದಕ್ಕಿಂತ ಮೊದಲು ಮಾನವನಾಗು; ಕನ್ನಡವನ್ನು ಕನ್ನಡಿಗರಿಂದ ಮಾತ್ರ ಕಾಪಾಡಲು ಸಾಧ್ಯ; ಡಾ. ಬಸವರಾಜ ಜಗಜಂಪಿ

https://pragati.taskdun.com/politics/klekannada-rajyotsavabelagavi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button