Latest

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯನಿರ್ವಹಿಸಲು ಕನ್ನಡಿಗರಿಗೆ ಅರ್ಜಿ ಆಹ್ವಾನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಧ್ಯೇಯೋದ್ದೇಶಗಳೊಂದಿಗೆ ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆ ಕಾಪಾಡುವ ಹಿನ್ನೆಲೆಯಲ್ಲಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ರೂಪಿಸುವ ಉದ್ದೇಶವನ್ನು ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರು ಹೊಂದಿದ್ದಾರೆ.

ಈ ನಿಟ್ಟಿನಲ್ಲಿ ಪರಿಷತ್ತಿನ ಕಾರ್ಯಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ವಿವಿಧ ಕೆಲಸಗಳನ್ನು ನಿರ್ವಹಿಸಲು ಆಸಕ್ತ ಕನ್ನಡಿಗರಿಗೆ ಪರಿಷತ್ತಿನ ಅಧ್ಯಕ್ಷರು ಅವಕಾಶ ನೀಡಲು ಮುಂದಾಗಿದ್ದಾರೆ.

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ, ಕನ್ನಡಪರ ಸಂಘ-ಸಂಸ್ಥೆಗಳಲ್ಲಿ, ಬ್ಯಾಂಕಿಂಗ್ ಹಾಗೂ ಸಾರ್ವಜನಿಕ ಉದ್ಯಮ ಕ್ಷೇತ್ರಗಳಲ್ಲಿ ಸೇರಿದಂತೆ ಇನ್ನಿತರೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದವರಿಗೆ ಹಾಗೂ ಕನ್ನಡ ಸೇವಾಸಕ್ತರಿಗೆ / ಯುವಕ-ಯುವತಿಯರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.

ಉತ್ತಮವಾದ ಕನ್ನಡಜ್ಞಾನವನ್ನು ಹೊಂದಿದ, ಆಡಳಿತದಲ್ಲಿ ಅನುಭವ ಹೊಂದಿದ, ಸಾಮಾಜಿಕ ಜಾಲತಾಣ ನಿರ್ವಹಣೆಯ ಜ್ಞಾನವುಳ್ಳ, ಗಣಕಯಂತ್ರದಲ್ಲಿ, ಲೆಕ್ಕಪತ್ರಗಳಲ್ಲಿ ಅನುಭವ ಹೊಂದಿದ, ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ತಪ್ಪಿಲ್ಲದೆ ಮಾತನಾಡಲು, ಓದಲು ಹಾಗೂ ಬರೆಯಲು ಬರುವವರಿಗೆ ಆದ್ಯತೆಯನ್ನು ನೀಡಲಾಗಿದ್ದು, ಬೆಂಗಳೂರಿನಲ್ಲಿ ವಾಸವಿರುವ, ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗೆ ಸಮೀಪದವರಿಗೆ, ಹೆಚ್ಚಿನ ಪ್ರಾಧಾನ್ಯತೆ ಕೊಡಲಾಗುವುದು.

Home add -Advt

ಇದು ಯಾವುದೇ ಸರ್ಕಾರಿ ನೌಕರಿಯಾಗಿರುವುದಿಲ್ಲ ಹಾಗೂ ಯಾವುದೇ ಹುದ್ದೆಯೂ ಅಲ್ಲ. ಇದು ಗೌರವಯುತವಾದ ಸ್ಥಾನವಾಗಿದ್ದು, ಕನ್ನಡ ನಾಡು-ನುಡಿಗೆ ಸಲ್ಲಿಸುವ ಈ ಸೇವೆಗೆ ಸೂಕ್ತವಾದ ಗೌರವ ಸಂಭಾವನೆಯನ್ನು ನೀಡಲಾಗುವುದು. ಈ ಸಂಬಂಧ ಉದ್ಯೋಗ ಮತ್ತು ಕನ್ನಡಪರ ಕೆಲಸಗಳ ವಿವರಗಳೊಂದಿಗೆ ತಮ್ಮ ಸ್ವ-ಪರಿಚಯ ಹೊಂದಿರುವ ಅರ್ಜಿಯನ್ನು ದಿನಾಂಕ 10-07-2022 ರೊಳಗಾಗಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು. ಈ ವಿಳಾಸಕ್ಕೆ ಕಳಿಸಲು ಕೋರಲಾಗಿದೆ.

ಬಂದ ಅರ್ಜಿಗಳನ್ನು ಪರಿಶೀಲಿಸಿ, ಸೂಕ್ತವಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಧ್ಯಮ ಸಲಹೆಗಾರ ಶ್ರೀನಾಥ್ ಜೆ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ನಾಳೆಯಿಂದ ನಿಷೇಧಾಜ್ಞೆ ಜಾರಿ

Related Articles

Back to top button