ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ನೃತ್ಯವನ್ನು ಆಯೋಜಿಸಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಮುಜುಗರ ಉಂಟು ಮಾಡಿದ್ದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರಿಗೆ ತಕ್ಷಣವೇ ಕನ್ನಡಿಗರಲ್ಲಿ, ಕ್ಷಮೆ ಯಾಚಿಸುವಂತೆ ಕೇಂದ್ರ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಸೂಚಿಸಿದ್ದಾರೆ.
ಮರಾಠಿ ಭಾಷಿಕರು ಬೆಳಗಾವಿಯ ಗಡಿಯಲ್ಲಿ ಇನ್ನಿಲ್ಲದ ದಾಂಧಲೆ ಸೃಷ್ಟಿಸುತ್ತಿರುತ್ತಾರೆ. ಸದಾ ಕನ್ನಡಿಗರನ್ನು ಕೆಣಕುತ್ತ ಶಾಂತಿ ಮತ್ತು ಶಿಸ್ತನ್ನು ಉಲ್ಲಂಘಿಸುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ವೇದಿಕೆ ಪವಿತ್ರವಾದುದು. ಅದನ್ನು ಯಾವುದೇ ಕಾರಣಕ್ಕೂ ಮಲಿನಗೊಳಿಸಬಾರದು. ಇಂತಹ ಕೃತ್ಯಗಳು ಮರುಕಳಿಸಬಾರದು ಎಂದು ಎಚ್ಚರಿಸಿದ್ದಾರೆ.
ಪರಿಷತ್ತಿನ ನಡೆ ಮತ್ತು ಗೌರವಕ್ಕೆ ಧಕ್ಕೆ ತರಬಾರದು. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ನೃತ್ಯ ಆಯೋಜಿಸಿದ್ದು, ಪರಿಷತ್ತಿನ ಇತಿಹಾಸದಲ್ಲಿ ಕಪ್ಪು ಚುಕ್ಕೆ. ಇಂತಹ ಕಾರ್ಯ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಆದ್ದರಿಂದ ಈ ಕುರಿತು ತಕ್ಷಣ ವಿಷಾದ ವ್ಯಕ್ತಪಡಿಸಿ ಮಾಧ್ಯಮಗಳ ಮೂಲಕ ಕನ್ನಡಿಗರಲ್ಲಿ ಕ್ಷಮೆ ಯಾಚಿಸಬೇಕು. ಯಾವ ರೀತಿಯಲ್ಲಾದರೂ ಇದಕ್ಕೆ ತಪ್ಪಿ ನಡೆದರೆ ನಿಮ್ಮ ಮೇಲೆ ಪರಿಷತ್ತಿನ ನಿಬಂಧನೆಗಳ ಪ್ರಕಾರ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿ, ನಾಡೋಜ ಡಾ. ಮಹೇಶ ಜೋಶಿ ಅವರು ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಪತ್ರದಲ್ಲಿ ಸೂಚಿಸಿದ್ದಾರೆ.
ಕೇಂದ್ರ ಪರಿಷತ್ತಿನ ಎಚ್ಚರಿಕೆ ಹಾಗೂ ಸೂಚನೆಯನುಸಾರ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಹಾಸೀಂಪೀರ ವಾಲೀಕಾರ ತಕ್ಷಣವೇ ಕ್ಷಮೆ ಕೋರಿದ್ದು, ಇಂತಹ ತಪ್ಪುಗಳು ಇನ್ನೊಮ್ಮೆ ಮರುಕಳಿಸದಂತೆ ಎಚ್ಚರಿಕೆ ವಹಿಸಿಸುತ್ತೇನೆ. ಈ ಘಟನೆಯಿಂದ ಕನ್ನಡ ಮನಸ್ಸುಗಳಿಗೆ ನೋವಾಗಿದೆ. ಇದಕ್ಕಾಗಿ ನಾನು ವಿನಮ್ರವಾಗಿ ವಿಷಾದನೀಯ ಹೇಳುತ್ತೇನೆ ಎಂದಿದ್ದಾರೆ.
ಅವಿವಾಹಿತ ಹೆಣ್ಣುಮಗಳು ಪೋಷಕರಿಂದ ಮದುವೆ ಖರ್ಚು ಪಡೆಯಬಹುದು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ