
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬಂಡವಾಳ ಎಷ್ಟು ಹರಿದು ಬಂತು ಎನ್ನುವುದಕ್ಕಿಂತ ಎಷ್ಟು ಉದ್ಯೋಗ ಸೃಷ್ಟಿಯಾಯತು ಎನ್ನುವುದು ನನಗೆ ಮುಖ್ಯ. ಜೊತೆಗೆ, ಕೃಷಿ ವಲಯಗಳನ್ನು ವೈಜ್ಞಾನಿಕವಾಗಿ ರೂಪಿಸುವುದು, ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುವುದು, ನಗರಗಳನ್ನು ಯೋಜನಾಬದ್ಧವಾಗಿ ಬೆಳೆಸುವುದು, ಕರಾವಳಿ ಭಾಗಗಳನ್ನು ಬಳಸಿಕೊಂಡು ಆಮದು-ರಫ್ತು ಮತ್ತು ಪ್ರವಾಸೋದ್ಯಮ ಬೆಳೆಸುವುದು ನನ್ನ ಕಲ್ಪನೆಯ ಕರ್ನಾಟಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಾಧ್ಯಮ ಅಕಾಡೆಮಿಯ ಕ್ಲಬ್ ಹೌಸ್ ಉದ್ಘಾಟಿಸಿ ಅವರು ಮಾತನಾಡಿದರು. ಸಮಗ್ರ ಕರ್ನಾಟಕ ಹಾಗೂ ಎಲ್ಲ ಕ್ಷೇತ್ರಗಳ ಅಭಿವೃದ್ಧಿಯ ತಮ್ಮ ಕಲ್ಪನೆಯನ್ನು ಅವರು ಬಿಚ್ಚಿಟ್ಟರು. ದೇವಸ್ಥಾನ ಹಾಗೂ ಪೋರ್ಟ್ ಗಳನ್ನು ಬಳಸಿಕೊಂಡು ಪ್ರವಾಸೋದ್ಯಮವನ್ನು ಬೆಳೆಸುವ ಪರಿಕಲ್ಪನೆಯನ್ನು ಮುಂದಿಟ್ಟರು. ಈ ಸಂಬಂಧ ಶೀಘ್ರದಲ್ಲೇ ಸಭೆಯೊಂದನ್ನು ಆಯೋಜಿಸುತ್ತಿರುವುದಾಗಿಯೂ ವಿವರಿಸಿದರು.
ಸಾಮಾನ್ಯವಾಗಿ ಎಲ್ಲರೂ ಇಷ್ಟು ಸಾವಿರ ಕೋಟಿ, ಲಕ್ಷ ಕೋಟಿ ರೂ. ಬಂಡವಾಳ ಹರಿದುಬಂತು ಎನ್ನುತ್ತಾರೆ. ಆದರೆ ನನಗೆ ಎಷ್ಟು ಉದ್ಯೋಗ ಸೃಷ್ಟಿಯಾಯಿತು ಎನ್ನುವುದು ಮುಖ್ಯ. ಈ ದಿಸೆಯಲ್ಲಿ ಯೋಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಕನ್ನಡಕ್ಕೆ ಅಗ್ರಸ್ಥಾನ ಸಿಗಬೇಕು. ಕನ್ನಡಿಗರಿಗೆ ಅಗ್ರಸ್ಥಾನ ಸಿಗಬೇಕು ಎನ್ನುವುದು ನಮ್ಮ ಮೂಲ ಆದ್ಯತೆ. ದೀರ್ಘಾವಧಿ ಮತ್ತು ಅಲ್ಪಾವಧಿಯ ಯೋಜನೆಗಳನ್ನು ನನ್ನ ಕಲ್ಪನೆಯ ಕರ್ನಾಟಕದಲ್ಲಿ ಅಳವಡಿಸಿಕೊಳ್ಳುತ್ತೇನೆ ಎಂದು ಬೊಮ್ಮಾಯಿ ತಿಳಿಸಿದರು.
ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಸಂಪಾದಕರ ಗೀಲ್ಡ್ ಪರವಾಗಿ ಮಾತನಾಡಿದರು. ಕನ್ನಡಪ್ರಭ ಸಂಪಾದಕ ರವಿ ಹೆಗಡೆ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಜೋಗಿ ಕಾರ್ಯಕ್ರಮ ನಿರೂಪಿಸಿದರು. ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಕೆಯುಡಬ್ಲುಜೆ ಅಧ್ಯಕ್ಷ ಶಿವಾನಂದ ತಗಡೂರು, ಕಾರ್ಯದರ್ಶಿ ರೂಪಾ, ಶಿವಕುಮಾರ ಬೆಳ್ಳಿತಟ್ಟೆ ಮೊದಲಾದವರು ಭಾಗವಹಿಸಿದ್ದರು.
ಶಕ್ತಿಯುತ ದೇಹ ಹಾಗೂ ಮನಸ್ಸು ಆರೋಗ್ಯಕರ ಜೀವನಕ್ಕೆ ಸಹಕಾರಿ: ಮುಖ್ಯಮಂತ್ರಿ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ