*ಕಾರದಗಾದಲ್ಲಿ 6ನೇ ಕನ್ನಡ ಸಮಾವೇಶ; ಸರ್ವಾಧ್ಯಕ್ಷರಾಗಿ ಸರಜೂ ಕಾಟ್ಕರ್ ಆಯ್ಕೆ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ‘ನಿಪ್ಪಾಣಿ ತಾಲ್ಲೂಕಿನ ಕಾರದಗಾದ ಡಿ.ಎಸ್.ನಾಡಗೆ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಕನ್ನಡ ಬಳಗದಿಂದ 2024ರ ಜ.7ರಂದು 6ನೇ ಕನ್ನಡ ಸಮಾವೇಶ ಆಯೋಜಿಸಲಾಗಿದೆ’ ಎಂದು ಸಮಾವೇಶದ ಗೌರವಾಧ್ಯಕ್ಷ ರಾಜು ಖಿಚಡೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮೂರಿನಲ್ಲಿ ನಡೆದ ಮೊದಲ ಕನ್ನಡ ಸಮಾವೇಶದ ಸರ್ವಾಧ್ಯಕ್ಷರಾಗಿ ಡಾ.ಪಾಟೀಲ ಪುಟ್ಟಪ್ಪ ಅವರನ್ನು ಆಯ್ಕೆ ಮಾಡಲಾಗಿತ್ತು. ಈಗ 6ನೇ ಸಮಾವೇಶಕ್ಕೆ ಹಿರಿಯ ಸಾಹಿತಿ ಸರಜೂ ಕಾಟ್ಕರ್ ಅವರನ್ನು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಕನ್ನಡ ಮತ್ತು ಮರಾಠಿ ಭಾಷಿಕರೆಲ್ಲ ಸೇರಿಕೊಂಡು ಅದ್ಧೂರಿಯಾಗಿ ಕನ್ನಡ ಹಬ್ಬ ಆಚರಿಸುತ್ತೇವೆ’ ಎಂದರು.
‘ಅಂದು ಬೆಳಿಗ್ಗೆ 10.30ಕ್ಕೆ ಉದ್ಘಾಟನೆ ಸಮಾರಂಭವಿದ್ದು, ಕುಲರತ್ನಭೂಷಣ ಮುನಿ ಮಹಾರಾಜರು, ಸಂಪಾದನಾ ಸ್ವಾಮೀಜಿ, ದರಿಖಾನ ಅಜ್ಜನವರು, ಸಾಧನಾಂದ ಮಹಾರಾಜರು ಸಾನ್ನಿಧ್ಯ ವಹಿಸುವರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸಮಾವೇಶಕ್ಕೆ ಚಾಲನೆ ನೀಡುವರು. ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ದೀಪ ಬೆಳಗಿಸುವರು. ಅತಿಥಿಗಳಾಗಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಶಶಿಕಲಾ ಜೊಲ್ಲೆ, ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮುಖಂಡರಾದ ಉತ್ತಮ ಪಾಟೀಲ, ಅಣ್ಣಾಸಾಹೇಬ ಹವಲೆ ಆಗಮಿಸುವರು. ಮಾಜಿ ಸಂಸದ ರಾಜು ಶೆಟ್ಟಿ ಅವರನ್ನು ಸತ್ಕರಿಸಲಾಗುವುದು’ ಎಂದರು.
‘ಬೆಳಿಗ್ಗೆ 8ಕ್ಕೆ ಮೆರವಣಿಗೆ, ಮಧ್ಯಾಹ್ನ 12ಕ್ಕೆ ವಿಚಾರಗೋಷ್ಠಿ, 2 ಗಂಟೆಗೆ ಕವಿಗೋಷ್ಠಿ, ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಹಾಗೂ 6.30ಕ್ಕೆ ಸಾಂಸ್ಕೃತಿಕ ಸಂಜೆ ನೆರವೇರಲಿದೆ. ಎಲ್ಲ ಕಾರ್ಯಕ್ರಮಗಳಲ್ಲಿ ಜನರು ಉತ್ಸಾಹದಿಂದ ಪಾಲ್ಗೊಳ್ಳಬೇಕು’ ಎಂದು ಕೋರಿದರು.
ಸರಜೂ ಕಾಟ್ಕರ್, ‘ಭಾಷಾ ಸಾಮರಸ್ಯಕ್ಕೆ ಹೆಸರಾದ ಕಾರದಗಾದಲ್ಲಿ ನಡೆಯುತ್ತಿರುವ ಕನ್ನಡ ಸಮಾವೇಶಕ್ಕೆ ಸರ್ವಾಧ್ಯಕ್ಷನಾಗಿ ಆಯ್ಕೆಯಾಗಿರುವುದಕ್ಕೆ ಖುಷಿಯಾಗಿದೆ. ಪಾಟೀಲ ಪುಟ್ಟಪ್ಪನವರು ಮೊದಲ ಸಮಾವೇಶದ ಸರ್ವಾಧ್ಯಕ್ಷರಾಗಿದ್ದರು. ಅವರ ಶಿಷ್ಯನಾಗಿ ಆ ಸ್ಥಾನದಲ್ಲಿ ಕೂರುತ್ತಿರುವ ಭಾಗ್ಯ ನನ್ನದಾಗಿದೆ’ ಎಂದರು.
ಸಾಹಿತಿ ರಾಮಕೃಷ್ಣ ಮರಾಠೆ, ಕನ್ನಡ ಬಳಗದ ಅಧ್ಯಕ್ಷ ಸಂಜಯ ಗಾವಡೆ, ಉಪಾಧ್ಯಕ್ಷ ಬಾಳು ನವನಾಳೆ, ಮಾಣಿಕ ಚಂದಗಡೆ, ಕಿರಣ ಸದಲಗೆ ಇತರರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ