‘ಮಹಾ’ ಸಚಿವರಿಗೆ ಗಡಿ ಪ್ರವೇಶಕ್ಕೆ ಅವಕಾಶ ನೀಡದಂತೆ ಒತ್ತಾಯ; ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಕರವೇ ಕಾರ್ಯಕರ್ತರು
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಹಾರಾಷ್ಟ್ರದ ಇಬ್ಬರು ಗಡಿ ಉಸ್ತುವಾರಿ ಸಚಿವರು ಡಿ.6 ರಂದು ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಒಂದಲ್ಲ ಒಂದು ನೆಪದಲ್ಲಿ ಭೇಟಿ ನೀಡುವ ಮೂಲಕ ಇಲ್ಲಿನ ಎಂಇಎಸ್ ಹಾಗೂ ಶಿವಸೇನೆಯ ಕಾರ್ಯಕರ್ತರನ್ನು ಬೆಂಬಲಿಸಿ ಕರ್ನಾಟಕ ಸರಕಾರದ ವಿರುದ್ಧ ಪ್ರಚೋದನೆ ನೀಡುವ ಉದ್ದೇಶವಾಗಿದೆ. ಅವರು ಗಡಿಭಾಗದಲ್ಲಿ ಪ್ರವೇಶ ಮಾಡದಂತೆ ನೋಡಿಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ನಿವೃತ್ತ ನ್ಯಾ. ಶಿವರಾಜ ಪಾಟೀಲ ಅವರನ್ನು ನೇಮಿಸಿದೆ. ಸರಕಾರ ಆಯೋಗದ ಕಚೇರಿಯನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡಿದರೆ ಮಾತ್ರ ಆಯೋಗದ ಪ್ರಯೋಜನೆಯು ಗಡಿ ಭಾಗದ ಜನತೆಗೆ ಲಭಿಸುತ್ತದೆ. ಕಳೆದ ಒಂದೂವರೆ ವರ್ಷದ ಹಿಂದೆ ತಾವು ಅಧಿಕಾರಕ್ಕೆ ಬಂದ ಕೂಡಲೇ ಸುವರ್ಣ ವಿಧಾನಸೌಧವನ್ನು ಸಕ್ರಿಯಗೊಳಿಸುವುದಾಗಿ ಭರವಸೆ ನೀಡಿದ್ದೀರಿ. ಆದರೆ ಇಲ್ಲಿಯವರೆಗೆ ಕೇವಲ ಮಾಹಿತಿ ಹಕ್ಕು ಆಯೋಗದ ಕಚೇರಿಯನ್ನು ಹೊರತು ಪಡಿಸಿದರೆ ಇನ್ನುಳಿದ ಯಾವುದೇ ಕಚೇರಿಯನ್ನು ಸ್ಥಳಾಂತರ ಮಾಡಿಲ್ಲ. ಅಧಿವೇಶನ ಮುನ್ನಾದಿನ ಈ ಕುರಿತು ಸರಕಾರ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರದಲ್ಲಿರುವ ಕನ್ನಡ ಪ್ರದೇಶವಾದ ಜತ್ ನ್ನು ಕರ್ನಾಟಕಕ್ಕೆ ಸೇರಿಸಲು ಪ್ರಯತ್ನಿಸುವುದಾಗಿ ಹೇಳಿಕೆ ನೀಡಿದ ಬಳಿಕ ಇಲ್ಲಿನ ಕನ್ನಡಿಗರು ಕರ್ನಾಟಕದ ಸರಕಾರದ ಬೆಂಬಲಕ್ಕೆ ನಿಂತಿದ್ದಾರೆ. ಕರ್ನಾಟಕವನ್ನು ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ಸಚಿವ ಸಂಪುಟದ ಇಬ್ಬರು ಹಿರಿಯ ಸಚಿವರನ್ನು ಹಾಗೂ ಹಿರಿಯ ಅಧಿಕಾರಿಗಳನ್ನು ಜತ್ ಪ್ರದೇಶಕ್ಕೆ ಕಳುಹಿಸಿ ಅಲ್ಲಿನ ಕನ್ನಡಿಗರಿಗೆ ದೈರ್ಯ ತುಂಬಬೇಕು. ಅಲ್ಲದೆ, ಕಳೆದ 50 ವರ್ಷಗಳಿಂದ ಗಡಿಭಾಗದಲ್ಲಿ ಸತತವಾಗಿ ನಾಡದ್ರೋಹಿ ಚಟುವಟಿಕೆಯಲ್ಲಿ ತೊಡಗಿರುವ ಎಂಇಎಸ್ ಹಾಗೂ ಶಿವಸೇನೆಯನ್ನು ನಿಷೇಧ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಮಹಾದೇವ ತಳವಾರ, ಸುರೇಶ ಗವನ್ನವರ, ಗಣೇಶ ರೋಕಡೆ, ರಮೇಶ ಯರಗಣ್ಣವರ, ವಿನಾಯಕ ಹಟ್ಟಿಹೊಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕರ್ನಾಟಕಕ್ಕೆ ಬರಲಿರುವ ಮಹಾರಾಷ್ಟ್ರ ಸಚಿವರಿಗೆ ರಾಜ್ಯ ಸರಕಾರದಿಂದ ಖಡಕ್ ಸಂದೇಶ ರವಾನೆ
https://pragati.taskdun.com/the-state-government-has-sent-a-message-to-the-maharashtra-minister-who-is-coming-to-karnataka/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ