
ಪ್ರಗತಿವಾಹಿನಿ ಸುದ್ದಿ: ಕರಾವಳಿ ಜಿಲ್ಲೆಗಳಲ್ಲಿ ವರುಣಾರ್ಭಟಕ್ಕೆ ದುರಂತಗಳು ಸಂಭವಿಸುತ್ತಿದ್ದು, ನಿನ್ನೆ ದಕ್ಷಿಣ ಕನ್ನಡದಲ್ಲಿ ಮನೆ ಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು. ಈ ಘಟನೆ ಬೆನ್ನಲ್ಲೇ ಇದೀಗ ಮಹಾಮಳೆಗೆ ಮಂಗಳೂರಿನಲ್ಲಿ ಇಬ್ಬರು ಆಟೋ ಚಾಲಕರು ಬಲಿಯಾಗಿದ್ದಾರೆ.
ಕರೆಂಟ್ ಶಾಕ್ ಹೊಡೆದು ಇಬ್ಬರು ಆಟೋ ಚಾಲಕರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡದ ಪಾಂಡೇಶ್ವರದ ರೊಸಾರಿಯೋ ಶಾಲೆಯ ಬಳಿ ನಡೆದಿದೆ. ರಾಜು ಹಾಗೂ ದೇವರಾಜು ಮೃತ ಆಟೋ ಚಾಲಕರು.
ಬಿರುಗಾಳಿ ಮಳೆಯಿಂದಾಗಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಗೊತ್ತಾಗದೇ ವಿದ್ಯುತ್ ತಂತಿ ಸ್ಪರ್ಶಿಸಿ ಓರ್ವ ಆಟೋ ಚಾಲಕ ಒದ್ದಾಡುತ್ತಿದ್ದ. ಆತನನ್ನು ರಕ್ಷಿಸಲೆಂದು ಇನ್ನೋರ್ವ ಆಟೋ ಚಾಲಕ ಹೋಗಿದ್ದಾನೆ. ಇಬ್ಬರಿಗೂ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.