ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಬಜೆಟ್ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಆಡಳಿತ ಪಕ್ಷದ ವಿರುದ್ಧ ಹರಿಹಾಯಲು ವಿಪಕ್ಷಗಳು ಸಜ್ಜಾಗಿವೆ. ಇಂದು ಬೆಳಗ್ಗೆ ರಾಜ್ಯಪಾಲ ವಜುಭಾಯಿ ವಾಲಾ ಅವರ ಭಾಷಣದ ಮೂಲಕ ಚರ್ಚೆ ಆರಂಭವಾಗಲಿದೆ. ಎರಡು ದಿನಗಳ ಚರ್ಚೆಯ ಬಳಿಕ ಮಾರ್ಚ್ 5ರಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬಜೆಟ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ (ಸಿಎಲ್ಪಿ) ಕರೆದಿದ್ದಾರೆ. ಇನ್ನು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದ ತಾರತಮ್ಯ, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿವಾದಾತ್ಮಕ ಹೇಳಿಕೆ, ರಾಷ್ಟ್ರಾದ್ಯಂತ ವ್ಯಾಪಿಸಿರುವ ಸಿಎಎ ವಿರುದ್ಧದ ಪ್ರತಿಭಟನೆ, ಮಂಗಳೂರು ಗೋಲಿಬಾರ್ ಪ್ರಕರಣ ಸೇರಿದಂತೆ ಹಲವು ವಿಷಾಯಗಳನ್ನು ಅಸ್ತ್ರವಾಗಿಟ್ಟುಕೊಂಡು ಅಧಿವೇಶನದಲ್ಲಿ ಪ್ರಸ್ತಾಪಿಸಲು ಯೋಚಿಸಿವೆ.
ಇನ್ನುಪ್ರವಾಹ ಪರಿಹಾರ, ರೈತರ ಸಾಲ ಮನ್ನಾ, ಇಂದಿರಾ ಕ್ಯಾಂಟೀನ್ ದರ ಹೆಚ್ಚಳ ಸೇರಿದಂತೆ ಅನೇಕ ವಿಷಯಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ಮೇಲೆ ದಾಳಿ ನಡೆಸಲು ವಿಪಕ್ಷಗಳು ಸಜ್ಜಾಗಿವೆ. ರೈತರ ಸಾಲಮನ್ನಾ ಬಗ್ಗೆ ಸರ್ಕಾರ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದರ ವಿರುದ್ಧ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ 2 ದಿನಗಳ ಹಿಂದೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು. ಈ ಬಾರಿಯ ಬಜೆಟ್ ಅಧಿವೇಶನ ಆಡಳಿತ ಹಾಗೂ ವಿಪಕ್ಷಗಳ ನಡುವಿನ ಕಾದಾಟಕ್ಕೆ ಕಾರನವಾಗುವ ಸಾಧ್ಯತೆಯಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ