*ಬೆಳಗಾವಿ ಸಂಪೂರ್ಣ ಬಂದ್ ಮಾಡಿ:* *ಕರ್ನಾಟಕ ಬಂದ್ ಗೆ ಬೆಂಬಲಿಸಿ*; *ಕನ್ನಡಪರ ಸಂಘಟನೆ ಕರೆ*

ಪ್ರಗತಿವಾಹಿನಿ ಸುದ್ದಿ: ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಮೇಲೆ ಎಂಇಎಸ್ ಪುಂದರ ಹಲ್ಲೆ ಖಂಡಿಸಿ, ಎಂಇಎಸ್, ಶಿವಸೇನೆ ನಿಷೇಧಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಹೋರಾಟ ರಾಜ್ಯಾದ್ಯಂತ ಆರಂಭವಾಗಿದೆ. ಬೆಳಗಾವಿಯಲ್ಲಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ತೀವ್ರಗೊಳ್ಳುತ್ತಿದೆ.
ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ವಿವಿಧ ಕನ್ನಡ ಸಂಘಟನೆಗಳು ಜಮಾವಣೆಗೊಂಡಿದ್ದು, ರಸ್ತೆ ತಡೆ ನಡೆಸಿದ್ದಾರೆ. ರಸ್ತೆಯಲ್ಲಿಯೇ ಮಲಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂಇಎಸ್ ಪುಂಡಾಟಕ್ಕೆ ಬ್ರೇಕ್ ಹಾಕಬೇಕು. ಬೆಳಗಾವಿಯಲ್ಲಿ ಎಂಇಎಸ್, ಶಿವಸೇನೆ ಸಂಪೂರ್ಣ ನಿಷೇಧವಾಗಬೇಕು ಎಂದು ಆಗ್ರಹಿಸಿದರು.
ಬೆಳಗಾವಿ ಸಂಪೂರ್ಣ ಬಂದ್ ಮಾಡಿ ಬಂದ್ ಗೆ ಬೆಂಬಲ ನೀಡಿ. ಈಗಷ್ಟೇ ಪ್ರತಿಭಟನೆ ಆರಂಭವಾಗಿದೆ. ಎಚ್ಚರಿಕೆ ನೀಡಿಯೂ ಬೆಳಗಾವಿ ಬಂದ್ ಮಾಡದೇ ಅಂಗಡಿ, ಮುಂಗಟ್ಟು ತೆರೆದರೆ, ವಾಹನ ಓಡಾಟ ನಡೆಸಿದರೆ ನಾವಾಗಿಯೇ ಬಂದ್ ಮಾಡಿಸಬೇಕಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ. ನಾವು ಹೋರಾಟ ನಡೆಸುತ್ತಿರುವುದು ನಿಮ್ಮ ಸಲುವಾಗಿಯೇ ಹಾಗಾಗಿ ಬೆಳಗಾವಿಯನ್ನು ಸಂಪೂರ್ಣ ಬಂದ್ ಮಾಡುವ ಮೂಲಕ ಕರ್ನಾಟಕ ಬಂದ್ ಗೆ ಬೆಂಬಲಿಸಿ. ಬೆಳಗಾವಿ ಬಂದ್ ಮಾಡಿಸಿಯೇ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.