*ಬಜೆಟ್ ಭಾಷಣದ ಮೂಲಕ ಜನರ ಕಿವಿ ಮೇಲೆ ಚಂಡೂವ ಇಡುವ ಕೆಲಸ ಮಾಡಿದ್ದಾರೆ; ಸಿಎಂ ಬೊಮ್ಮಾಯಿ ಬಜೆಟ್ ಬಗ್ಗೆ ಡಿ.ಕೆ.ಶಿವಕುಮಾರ್ ಲೇವಡಿ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿದ ಬಿಸುಲು ಕುದುರೆ ಬಜೆಟ್. ಜಾತ್ರೆ ಕನ್ನಡಕದ ರೀತಿ ಬಜೆಟ್ ಕೊಟ್ಟಿದ್ದಾರೆ ಈ ಮೂಲಕ ರಾಜ್ಯದ ಜನರ ಕಿವಿಯ ಮೇಲೆ ಚಂಡೂವ ಇಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಬಜೆಟ್ ಭಾಷಣ ಮುಗಿಯುತ್ತಿದ್ದಂತೆ ಎರಡೂ ಕಿವಿಯ ಮೇಲೆ ಚಂಡೂವು ಇಟ್ಟುಕೊಂಡು ಬಂದ ಡಿ.ಕೆ.ಶಿವಕುಮಾರ್, ಸರ್ಕಾರ ಸದನದ ಒಳಗೂ, ಹೊರಗು ಜನರ ಕಿವಿ ಮೇಲೆ ಹೂವಿಡುವ ಕೆಲಸ ಮಾಡುತ್ತಿದೆ. ಚುನಾವಣೆಗೆ ಕೆಲವೇ ದಿನ ಬಾಕಿಯಿರುವಾಗ ಘೋಷಣೆಯಾಗಿರುವ ಈ ಬಜೆಟ್ ಕೇವಲ ಭಾಷಣಕ್ಕೆ ಮಾತ್ರ ಸೀಮಿತ. ಯಾವ ಯೋಜನೆಯೂ ಜಾರಿಗೆ ಬರಲ್ಲ. ಇದು ಯಾರ ಕೈಗೂ ಸಿಗದ, ಯಾರ ಕಣ್ಣಿಗೂ ಕಾಣದ ಬಜೆಟ್. ಸುಮ್ಮನೇ ಶೋ ಮಾಡಿದ್ದಾರೆ ಅಷ್ಟೇ ಎಂದು ಟೀಕಿಸಿದರು.
ಕಾಂಗ್ರೆಸ್ ನಾಯಕರು ಈ ಬಜೆಟ್ ನ್ನು ಪ್ರತಿಭಟಿಸುತ್ತೇವೆ. ಜನರ ಕಿವಿಯ ಮೇಲೆ ಚಂಡೂವ ಇಡುವ ಕೆಲಸವನ್ನು ಸಿಎಂ ಮಾಡಿದ್ದಾರೆ. ಉಸಿರು ಹಿಡಿದುಕೊಂಡು ನಿರರ್ಗಳವಾಗಿ ಬಜೆಟ್ ಓದಿದೆ ಎಂದು ಹೇಳಿಕೊಳ್ಳಬಹುದು ಅಷ್ಟೇ. ಬಜೆಟ್ ಮಂಡಿಸಲು ಸ್ವರವೇ ಬರುತ್ತಿರಲಿಲ್ಲ ಎಂದು ಲೇವಡಿ ಮಾಡಿದರು.
ಮಹದಾಯಿ, ಮೇಕೆದಾಟು ಯೋಜನೆಗಳಿಗೆ ಏನಾದರೂ ಘೋಷಿಸಿದರಾ? ಭ್ರಷ್ಟಾಚಾರ ನಿರ್ಮೂಲನೆ, ಉದ್ಯೋಗ ಸೃಷ್ಟಿ ಬಗ್ಗೆ ಮಾತನಾಡಿದರಾ? ಏನೂ ಪ್ರಸ್ತಾಪವನ್ನೇ ಮಾಡಲಿಲ್ಲ. ಜಾತ್ರೆಯಲ್ಲಿ ಸಿಗುವ ಕಲರ್ ಕನ್ನಡಕದಂತೆ ಬಜೆಟ್ ಕೊಟ್ಟಿದ್ದಾರೆ. ಅದನ್ನು ಹಾಕಿಕೊಂಡು ನೋಡಿದರೆ ಏನೂ ಕಾಣಲ್ಲ, ನೋಡಲು ಕಲರ್ ಕನ್ನಡಕ ಅಷ್ಟೇ ಶೋ ಕೇಸ್ ನಲ್ಲಿ ಇಡಬಹುದು ಎಂದರು.
ಸಿಎಂ ಬೊಮ್ಮಾಯಿ ಮಂಡಿಸಿದ ಬಜೆಟ್ ನಿಂದ ನಮಗೆ ಇನ್ನಷ್ಟು ಶಕ್ತಿ ಬಂದಿದೆ. ಮಹಿಳೆಯರಿಗೆ 500 ರೂಪಾಯಿ ಸಹಾಯಧನ ಘೋಷಿಸಿರುವುದು ಹಾಸ್ಯಾಸ್ಪದ. 500 ರೂಪಾಯಿ ಯಾವುದಕ್ಕೆ ಸಾಕು? ಸಿಲಿಂಡರ್ ದರ 1000 ರೂಪಾಯಿ ಆಗಿದೆ. ಅಗತ್ಯ ವಸ್ತುಗಳ ದರ ಗಗನಕ್ಕೇರಿದೆ. ಹೀಗಿರುವಾಗ 500 ರೂಪಾಯಿ ಏನಕ್ಕೆ ಸಾಕು? ನಾವು ಈಗಾಗಲೇ ಮಹಿಳೆಯರಿಗಾಗಿ 2000 ರೂಪಾಯಿ ಸಹಾಯಧನ ಘೋಷಿಸಿದ್ದೇವೆ. ಉಚಿತ ವಿದ್ಯುತ್ ನೀಡುತ್ತೇವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಯೋಜನೆ ಜಾರಿಯಾಗುತ್ತೆ. ಸರ್ಕಾರದ ಬಜೆಟ್ ನಿಂದ ನಮ್ಮ ಪ್ರಣಾಳಿಕೆಗೆ ಇನ್ನಷ್ಟು ಶಕ್ತಿ ಬಂದಿದೆ ಎಂದು ಹೇಳಿದರು.
*ಉದ್ಯೋಗ ಸಿಗದ ಪದವೀಧರರಿಗೆ ಯುವಸ್ನೇಹಿ ಯೋಜನೆ ಆರಂಭ*
https://pragati.taskdun.com/karnataka-budget-2023cm-basavaraj-bommaividhanasoudhayuva-snehi-yojana/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ