ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಅಧಿಕಾರಿಗಳು ತಮ್ಮ ಗ್ರಾಮಗಳನ್ನು ಕುಟುಂಬದಂತೆ ಭಾವಿಸಿ, ಅವುಗಳ ಸಕಲ ಅಭಿವೃದ್ಧಿಗಾಗಿ ಶ್ರಮಿಸಬೇಕು. ಗ್ರಾಮ ಪಂಚಾಯತ ಚುನಾವಣೆಯಲ್ಲಿ ಜಯ ಗಳಿಸಿರುವ ಅಧ್ಯಕ್ಷರು ತಮ್ಮನ್ನು ಗೆಲ್ಲಿಸಿರುವ ಜನರು ಸಂತೃಪ್ತಿಯಿಂದ ಜೀವನ ನಡೆಸುವಂತೆ ನೋಡಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಬೆಳಗಾವಿಯ ಗಾಂಧಿ ಭವನದಲ್ಲಿ ಬುಧವಾರ (ಆ.11) 75 ನೇ ವರ್ಷದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯತ್ ಬೆಳಗಾವಿ ಅವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಗ್ರಾಮ ಪಂಚಾಯತಿಗಳ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅನಕ್ಷರಸ್ಥರಿಗೂ ಸಹ ಅವಕಾಶವನ್ನು ಕಲ್ಪಿಸಲಾಗುತ್ತಿದ್ದು, ಅವರು ಗ್ರಾಮಗಳ ಸಕಲ ಅಭಿವೃದ್ಧಿಗೆ ಶ್ರಮಿಸಬೇಕು ಹಾಗೂ ದೂರದೃಷ್ಟಿ ಕೋನದಿಂದ ಯೋಜನೆಗಳನ್ನು ರೂಪಿಸಬೇಕು.
ಗ್ರಾಮ ಪಂಚಾಯತಿ ಅಧ್ಯಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಸುಲಭವಲ್ಲ. ಇಲ್ಲಿ ಜನರ ನಂಬಿಕೆ ಬಹಳ ಮುಖ್ಯ. 5 ವರ್ಷದ ಅಧಿಕಾರದ ಅವಧಿಯಲ್ಲಿ ಅರ್ಧ ದಿನವಾದರೂ ಕೆಲಸ ಮಾಡಬೇಕು.ಜನರ ಸಮಸ್ಯೆಗಳನ್ನು ಆಲಿಸಬೇಕು. ಜಯ ಗಳಿಸಿದ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ,ಅಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ನರೇಗಾ ಯೋಜನೆಯಿಂದ ಉದ್ಯೋಗ ಸೃಷ್ಟಿ :
ನರೇಗಾ ಯೋಜನೆಯ ಮುಖಾಂತರ ಗ್ರಾಮಗಳಲ್ಲಿ ಉದ್ಯೋಗ ಅವಕಾಶ ಸೃಷ್ಟಿಸಿ, ಗ್ರಾಮದ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಅವರನ್ನು ತೊಡಗಿಸಬೇಕು. ವಲಸೆ ಬಂದಂತಹ ಜನರಿಗೂ ಸಹ ಅವಕಾಶ ಕಲ್ಪಿಸಿ, ಸ್ವಾವಲಂಬಿ ಜೀವನ ನಡೆಸುವಲ್ಲಿ ನರೇಗಾ ಯೋಜನೆ ಸಹಕಾರಿಯಾಗಿದೆ.
ವಿಶೇಷವಾಗಿ, ಮಳೆ ನೀರಿನ ಸಂಗ್ರಹ ಮಾಡಲು ಕ್ಯಾಚ್ ದಿ ರೇನ್ ಈ ಯೋಜನೆಯಲ್ಲಿ ಬದು, ಕೃಷಿ ಹೊಂಡಗಳ ನಿರ್ಮಾಣ,ಕೆರೆಗಳ ಅಭಿವೃದ್ಧಿ, ತೆರೆದ ಬಾವಿಗಳ ನಿರ್ಮಾಣ ಮಾಡುವುದರೊಂದಿಗೆ ಭೂಮಿಯ ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕು. ಭೂಮಿಯಲ್ಲಿ ಇಂಗಿಸಿ, ಬಳಸಬೇಕು.
ಕರ್ನಾಟಕದಲ್ಲಿ 28,000 ಕ್ಕೂ ಹೆಚ್ಚು ಕೆರೆಗಳಿದ್ದು ನಮ್ಮ ಸರ್ಕಾರದ ಅವಧಿಯಲ್ಲಿ ಎಲ್ಲ ಕೆರೆಗಳ ಅಭಿವೃದ್ಧಿ ಗುರಿಯನ್ನು ತಲುಪಲಾಗುವುದು ಎಂದು ಅವರು ಭರವಸೆ ನೀಡಿದರು.
ನರೇಗಾ ಹಾಗೂ ಕೋವಿಡ್ ನಿರ್ವಹಣೆಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ :
ಕೋವಿಡ್ 2 ನೇಯ ಅಲೆಯ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ವ್ಯಾಪಿಸಿದ್ದು, ಗ್ರಾಮ ಪಂಚಾಯತಿ ವಲಯದ ಟಾಸ್ಕ್ ಫೋರ್ಸ್ ಸೋಂಕನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ. ಕೋವಿಡ್ ನಿರ್ವಹಿಸುವಲ್ಲಿ ನಮ್ಮ ರಾಜ್ಯವು ಮೊದಲ ಸ್ಥಾನದಲ್ಲಿದ್ದು, ಜಗತ್ತಿನಲ್ಲಿಯೇ ನಮ್ಮ ದೇಶ ಮೊದಲ ಸ್ಥಾನದಲ್ಲಿದೆ.
ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಜಲಶಕ್ತಿ ಅಭಿಯಾನದಲ್ಲಿ ಒಟ್ಟು 4,87,695 ಕಾಮಗಾರಿಗಳನ್ನು ರಾಜ್ಯವು ಕೈಗೊಂಡಿದ್ದು, ಕರ್ನಾಟಕ ರಾಜ್ಯಕ್ಕೆ ಮೊದಲ ಸ್ಥಾನ ದೊರಕಿದೆ.
ತೋಟಗಾರಿಕೆಯಲ್ಲಿಯೂ ಸಹ ಅನೇಕ ರೀತಿಯ ಹೂವು, ಹಣ್ಣು ಹಾಗೂ ತರಕಾರಿಗಳನ್ನು ಬೆಳೆಯಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ತಮ್ಮ ಗ್ರಾಮಗಳ ಅಭಿವೃದ್ಧಿಯನ್ನು ಇತರ ಗ್ರಾಮಗಳ ಅಭಿವೃದ್ಧಿ ಯೊಂದಿಗೆ ಹೋಲಿಸಿ, ಸ್ಪರ್ಧಾತ್ಮಕ ಭಾವನೆಯಿಂದ ಗ್ರಾಮ ಪಂಚಾಯಿತಿ ಕಾರ್ಯ ನಿರ್ವಹಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಪುರಸಭೆ ಮಟ್ಟದಲ್ಲಿ ಗ್ರಾಮ ಪಂಚಾಯತ್ ತರಬೇತಿ:
ಮುಂದಿನ ದಿನಗಳಲ್ಲಿ ಪುರಸಭೆ ಮಟ್ಟದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಿಗೆ ಯೋಜನೆಗಳ ಕುರಿತು ಹಾಗೂ ಅವರ ಕರ್ತವ್ಯಗಳ ಕುರಿತು ತರಬೇತಿಯನ್ನು ನೀಡಲಾಗುವುದು.
ಅಲ್ಲದೇ, ಪಂಚಾಯತ್ ಕಚೇರಿಗಳಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಹರಿಸಬೇಕು. ವಿದ್ಯುತ್ ವ್ಯವಸ್ಥೆಯ ಮೇಲೆ ಅವಲಂಬಿತರಾಗದೇ, ಸೋಲಾರ್ ವ್ಯವಸ್ಥೆ ಮಾಡಿಕೊಳ್ಳಬೇಕು.
ಪ್ರತಿ ಗ್ರಾಮದ ಶೌಚಾಲಯ ಪ್ರತಿ ಮನೆಯೂ ಹೊಂದಿರಬೇಕು. ನಮ್ಮ ಹಳ್ಳಿ ಹಾಗೂ ಗ್ರಾಮದ ಸುತ್ತ ಮುತ್ತಲಿನ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು.
ಜಲಜಿವನ್ ಮಿಷನ್ ಮುಖ್ಯ ಉದ್ದೇಶ ಮನೆ ಮನೆಗೆ ನೀರು ಒದಗಿಸುವುದು ಆಗಿದ್ದು “ಮನೆ ಮನೆಗೆ ಗಂಗೆ” ಯೋಜನೆಯ ಮೂಲಕ ನೀರಿನ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ವಿಧಾನ ಸಭಾ ಉಪಸಭಾಪತಿ ಆನಂದ ಮಾಮನಿ ಮಾತನಾಡಿ, ಗ್ರಾಮದ ಸುತ್ತ ಮುತ್ತಲಿನ ಪರಿಸರ ಶುಚಿಯಾಗಿ ಇರುವಂತೆ ನೋಡಿಕೊಳ್ಳುವುದು ಅತಿ ಮುಖ್ಯವಾಗಿದ್ದು, ಹಳ್ಳಿಗಳಲ್ಲಿ ಕೆರೆಗಳ ನಿರ್ಮಾಣ, ಕಸ ವಿಲೇವಾರಿ ಹಾಗೂ ಶಾಲೆಗಳ ಅಭಿವೃದ್ದಿಯಂತಹ ಕಾರ್ಯಗಳನ್ನು ಮಾಡುವುದರ ಮೂಲಕ ಸರ್ವೋಮುಖ ಅಭಿವೃದ್ಧಿಯಾಗಬೇಕು ಎಂದು ಹೇಳಿದರು.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹಲವಾರು ಉದ್ಯೋಗಗಳನ್ನು ಸೃಷ್ಟಿಸಲು ಅವಕಾಶಗಳಿದ್ದು, ಶಾಲಾ ಕ್ರೀಡಾಂಗಣಗಳ ನಿರ್ಮಾಣ ಮಾಡುವುದು ಹಾಗೂ ಪ್ರತಿ ಮನೆಗೂ ಗಂಗೆ ಎಂಬ ಯೋಜನೆಯನ್ನು ಎಲ್ಲರೂ ತಮ್ಮ ಗ್ರಾಮದಲ್ಲಿ ಅಳವಡಿಸಿ ನೀರಿನ ಸಮಸ್ಯೆಯನ್ನು ಹೋಗಲಾಡಿಸಬೇಕು ಎಂದು ತಿಳಿಸಿದರು.
ದೇವಾಲಯಗಳ ಸುತ್ತಲೂ ಗೋಡೆಗಳ ನಿರ್ಮಾಣ ಹಾಗೂ ಸಮುದಾಯ ಭವನಗಳ ನಿರ್ಮಾಣವಾಗಬೇಕು. ರಸ್ತೆಗಳ ನಿರ್ಮಾಣಕ್ಕೆ ಅವಕಾಶ ನೀಡಬೇಕು.ಹಾಗೂ ಶಾಲಾ ಕಟ್ಟಡಗಳ ನಿರ್ಮಾಣ ದುರಸ್ತಿಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ ಮಾತನಾಡಿ, ಬೆಳಗಾವಿ ಅತಿ ದೊಡ್ಡ ಹಾಗೂ ಅತಿ ದೊಡ್ಡ ಜಿಲ್ಲಾ ಪಂಚಾಯತ್ ಹೊಂದಿದ ಜಿಲ್ಲೆಯಾಗಿದ್ದು, ಹಳ್ಳಿಗಳ ಅಭಿವೃದ್ಧಿಗಾಗಿ ಶ್ರಮಿಸುವ ಭಾಗ್ಯ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಸದಸ್ಯರಿಗೆ ದೊರಕಿದೆ. 5 ವರ್ಷಗಳ ಅವಧಿಯಲ್ಲಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ನೀವೆಲ್ಲರೂ ಶ್ರಮಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಗಾಂಧಿ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಲು ಹಲವಾರು ಕಾರ್ಯಗಾರ ನಡೆಸಲಾಗುವುದು ಹಾಗೂ ಎಲ್ಲಾ ಸದಸ್ಯರು ದೂರ ದೃಷ್ಟಿಯನ್ನು ಇಟ್ಟುಕೊಂಡು ಕಾರ್ಯವನ್ನು ನಿರ್ವಹಿಸಬೇಕು ಎಂದು ಅವರು ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಉಮಾ ಮಹದೇವನ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಹಂತ ಹಂತವಾಗಿ ಗ್ರಾಮ ಪಂಚಾಯಿತಿಗಳನ್ನು ಮಾದರಿ ಪಂಚಾಯತಿ ಮಾಡುವ ಗುರಿಯನ್ನು ಹೊಂದಿದ್ದೇವೆ.
ಕರ್ನಾಟಕ ರಾಜ್ಯದಲ್ಲಿ ಮಹಿಳಾ ಮಕ್ಕಳ ಹಾಗೂ ಅಂಗವಿಕಲರ ಪಂಚಾಯತಿ ಮಟ್ಟದಲ್ಲಿ ಬಜೆಟ್ ನಲ್ಲಿ ಮೀಸಲು ದೇಶದಲ್ಲಿಯೇ ನಮ್ಮ ರಾಜ್ಯ ಪ್ರಥಮ ಬಾರಿ ನೀಡಿದೆ ಎಂದು ಅವರು ತಿಳಿಸಿದರು.
ಕೆ.ಡಿ.ಪಿ. ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರೀಶಿಲನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಪರಿಸರವಾದಿಗಳಾದ ಶಿವಾನಂದ ಕಳವೆ ರಾಜ್ಯದಲ್ಲಿ 39,000 ಕೆರೆಗಳಿವೆ. ಕೆರೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಗ್ರಾಮ ಪಂಚಾಯತಿಗಳಿಗೆ ನೀಡಲಾಗಿದೆ. ಮಳೆಯ ನೀರಿನ ಸಂಗ್ರಹಣೆ ಮಾಡಬೇಕು ಎಂದು ತಿಳಿಸಿದರು.
ಕೆರೆಗಳ ಇತಿಹಾಸ, ಮಹತ್ವ ಹಾಗೂ ಕೆರೆಗಳ ನಿರ್ವಹಣೆಯ ವಿವಿಧ ವಿಧಾನಗಳ ಬಗ್ಗೆ ಉಪನ್ಯಾಸ ನೀಡಿದರು.
ಇದೇ ವೇಳೆ, ಪ್ರಮೋದ್ ಹೆಗಡೆ ವಿಕೇಂದ್ರೀಕರಣ ಕುರಿತು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ದರ್ಶನ್ ಹೆಚ್.ವಿ ಅವರು ಸ್ವಾಗತಿಸಿ, ಘನ ತ್ಯಾಜ್ಯ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆ, ನರೇಗಾ ಯೋಜನೆ, ಜಲ ಜೀವನ್ ಮಿಷನ್ ಯೋಜನೆಗಳ ಪ್ರಗತಿಯ ವರದಿಯನ್ನು ವಿವರಿಸಿದರು.
ಇದೇ ವೇಳೆ, ಹಾವೇರಿ ಜಿಲ್ಲೆಯ ಕರ್ನಾಟಕ ಜನಪದ ವಿಶ್ವವಿದ್ಯಾಲಯದ ಗ್ರಾಮ ಚರಿತ್ರೆ ಕೋಶವನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ