
ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರ ಹಲವು ಹಿರಿಯ ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡಿರುವ ಅಧಿಕಾರಿಗಳ ಮಾಹಿತಿ ಇಲ್ಲಿದೆ.
ಅಭಿರಾಮ್ ಜಿ. ಶಂಕರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ಮೈನಿಂಗ್ ಎನ್ವಿರಾನ್‌ಮೆಂಟ್ ರೆಸ್ಟೋರೇಶನ್ ಕಾರ್ಪೊರೇಷನ್ (KMERC) ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಜೂನ್ 30ರಂದು ನಿವೃತ್ತಿಯಾಗಿರುವ ಡಾ. ಸಂಜಯ್ ಎಸ್. ಬಿಜ್ಜೂರು ಅವರ ಸ್ಥಾನವನ್ನು ಇವರು ಭರಿಸಲಿದ್ದಾರೆ.
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕರಾಗಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರನ್ನು ನೇಮಕ ಮಾಡಲಾಗಿದೆ. ಜೊತೆಗೆ, ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ (KEONICS) ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನೂ ಇವರಿಗೆ ವಹಿಸಲಾಗಿದೆ. ಯೋಗೀಶ್ ಎ. ಎಂ. ಅವರನ್ನು ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಆ ಮೂಲಕ ಪ್ರಸನ್ನ ಎಚ್. ಅವರಿಗಿದ್ದ ಹೆಚ್ಚುವರಿ ಜವಾಬ್ದಾರಿಯನ್ನು ಹಿಂಪಡೆಯಲಾಗಿದೆ.
ಗ್ರಾಮೀಣಾಭಿವೃದ್ಧಿ ಆಯುಕ್ತರಾಗಿ ದಿವ್ಯಾ ಪ್ರಭು ಜಿ.ಆರ್.ಜೆ. ಅವರನ್ನು ನೇಮಕ ಮಾಡಲಾಗಿದ್ದು, ಡಾ. ಅರುಂಧತಿ ಚಂದ್ರಶೇಖರ್ ಅವರಿಗಿದ್ದ ಹೆಚ್ಚುವರಿ ಜವಾಬ್ದಾರಿಯನ್ನು ತೆರವುಗೊಳಿಸಲಾಗಿದೆ. ಇದರ ಜೊತೆಗೆ, ಪುರಸಭೆ ಆಡಳಿತ ನಿರ್ದೇಶಕರ ಕ್ಯಾಡರ್ ಹುದ್ದೆಗೆ ಸಮಾನವಾದ ಸ್ಥಾನಮಾನ ಮತ್ತು ಜವಾಬ್ದಾರಿಗಳನ್ನು ಹೊಂದಿರುವ ಕೆಲವು ಹುದ್ದೆಗಳನ್ನು ಐಎಎಸ್ (ವೇತನ) ನಿಯಮಗಳು–2016ರ ನಿಯಮ 12ರ ಅಡಿಯಲ್ಲಿ ಸಮಾನ ಹುದ್ದೆಗಳೆಂದು ರಾಜ್ಯ ಸರ್ಕಾರ ಘೋಷಿಸಿದೆ. ಈ ಆದೇಶವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು–1) ಅಧೀನ ಕಾರ್ಯದರ್ಶಿ ಟಿ. ಮಹಾಂತೇಶ್ ಅವರು ರಾಜ್ಯಪಾಲರ ಹೆಸರಿನಲ್ಲಿ ಹೊರಡಿಸಿದ್ದಾರೆ.


