Karnataka NewsLatestPolitics

*15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಹಣ ಬಿಡುಗಡೆಗೆ ತಡೆ*: *ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಲು ಸಜ್ಜಾದ ರಾಜ್ಯ ಸರ್ಕಾರ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ಗ್ರಾಮಪಂಚಾಯಿತಿಗಳಿಗೆ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬಿಡುಗಡೆ ಮಾಡಬೇಕಾದ 2,186.20 ಕೋಟಿ ರೂ. ಅನುದಾನವನ್ನ ಕೇಂದ್ರ ಸರ್ಕಾರ ತಡೆ ಹಿಡಿದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಆರೋಪಿಸಿದ್ದು, ಈ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಕಾನೂನು ಹೋರಾಅಟಕ್ಕೆ ರಾಜ್ಯ ಸರ್ಕಾರ ಸಜ್ಜಾಗಿದೆ.

ಸುಪ್ರೀಂ ಕೋರ್ಟ್ ನಲ್ಲಿ ವಿಶೇಷ ತೆರವು ಅರ್ಜಿ (ಎಸ್.ಎಲ್.ಪಿ.) ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಖಂಡ್ರೆ, ಕೇಂದ್ರ ಸರ್ಕಾರವು ಕರ್ನಾಟಕದ ಮೇಲೆ ಮಾತ್ರ ಪ್ರಹಾರದ ಮೇಲೆ ಪ್ರಹಾರ ಮಾಡುತ್ತಿದೆ. ಹೀಗಾಗಿ ಇವತ್ತು ಅನಿವಾರ್ಯ ಕಾರಣಗಳಿಂದ ಸುಪ್ರಿಂ ಕೋರ್ಟ್ ಮೆಟ್ಟಿಲು ಹತ್ತಬೇಕಾಗಿದೆ. ನಾನು ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸೇರಿಸಿಕೊಂಡು ಸಮಾಲೋಚನೆ ಮಾಡಿದ್ದು, ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ಎಸ್ಎಲ್ಪಿ ಹಾಕಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರೊಂದಿಗೆ ಸಮಾಲೋಚಿಸಿದ ಸಚಿವರು, ರಾಜ್ಯ ಸರ್ಕಾರ ಹಲವು ಮನವಿ ಮಾಡಿದರೂ, ಅಗತ್ಯ ದಾಖಲಾತಿ ಸಲ್ಲಿಸಿದರೂ 2025-26ನೇ ಸಾಲಿನ 2186.20 ಕೋಟಿ ರೂ. ಬಿಡುಗಡೆ ಮಾಡದ ಕೇಂದ್ರದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದು ಮಾತ್ರ ಉಳಿದಿರುವ ಏಕೈಕ ಮಾರ್ಗ. ಈ ಬಾರಿ ಎಲ್ ನಿನೋ ಪ್ರಭಾವದಿಂದ ಮಳೆಯ ಕೊರತೆಯಾಗಿದ್ದು ಬರಪರಿಸ್ಥಿತಿ ತಲೆದೋರಿದೆ. ಪಂಚಾಯಿತಿಗಳಲ್ಲಿ ದುರಸ್ತಿಗೂ ಹಣವಿಲ್ಲ. ಕೇಂದ್ರ ಸರ್ಕಾರ ಈ ರೀತಿ ರಾಜ್ಯಕ್ಕೆ ನ್ಯಾಯಯುತವಾಗಿ ನೀಡಬೇಕಾದ ಹಣವನ್ನೇ ತಡೆ ಹಿಡಿದಿರುವುದು ಸರಿಯಲ್ಲ. ಹೀಗಾಗಿ ವಿಳಂಬ ಮಾಡದೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಎಂದು ತಿಳಿಸಿದರು.

Related Articles

Back to top button