
ಪ್ರಗತಿವಾಹಿನಿ ಸುದ್ದಿ: ರಾಜ್ಯದ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿ ರಾತ್ರಿ ವೇಳೆಯೂ ತಮ್ಮ ಕೇಂದ್ರ ಸ್ಥಾನದಲ್ಲೇ ಇರುವುದನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಇಲಾಖೆ ಮಹತ್ವದ ಸೂಚನೆ ನೀಡಿದೆ.
ತಾಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ (PHC) ವೈದ್ಯರು ಹಾಗೂ ಸಿಬ್ಬಂದಿ ಪ್ರತಿದಿನ ರಾತ್ರಿ 9 ಗಂಟೆಯ ನಂತರ ‘ಕರ್ತವ್ಯ’ ಆ್ಯಪ್ ಮೂಲಕ ಹಾಜರಾತಿ ದಾಖಲಿಸುವುದು ಕಡ್ಡಾಯಗೊಳಿಸಲಾಗಿದೆ.
ರಾತ್ರಿ ಸಮಯದಲ್ಲಿ ಗ್ರಾಮೀಣ ಹಾಗೂ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ವೈದ್ಯರು ಲಭ್ಯವಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ದೊರೆಯಬೇಕು ಮತ್ತು ಸರ್ಕಾರಿ ವೈದ್ಯರು ತಮ್ಮ ಕರ್ತವ್ಯದ ಕೇಂದ್ರ ಸ್ಥಾನದಲ್ಲೇ ವಾಸವಿರಬೇಕು ಎಂಬುದು ಈ ನಿಯಮದ ಪ್ರಮುಖ ಉದ್ದೇಶವಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಕೆಳಗಿನ ಸಿಬ್ಬಂದಿಗೆ ಈ ಸೂಚನೆ ಅನ್ವಯಿಸುತ್ತದೆ.
- ತಾಲೂಕು ಆಸ್ಪತ್ರೆಗಳ ವೈದ್ಯರು.
- ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು.
- ಶುಶ್ರೂಷಾಧಿಕಾರಿಗಳು.
- ಫಾರ್ಮಸಿ ಅಧಿಕಾರಿಗಳು.
- ಪ್ರಯೋಗಾಲಯ ತಂತ್ರಜ್ಞರು.
- ಇತರೆ ಸಂಬಂಧಿತ ಆಸ್ಪತ್ರೆ ಸಿಬ್ಬಂದಿ.
ಪ್ರತಿದಿನ ರಾತ್ರಿ 9 ಗಂಟೆಯ ನಂತರ ಕರ್ತವ್ಯ ಆ್ಯಪ್‌ನಲ್ಲಿ ಹಾಜರಾತಿ ದಾಖಲಿಸಬೇಕು. ಈ ವ್ಯವಸ್ಥೆಯಲ್ಲಿ ಜಿಯೋಫೆನ್ಸಿಂಗ್ ತಂತ್ರಜ್ಞಾನ ಬಳಸಲಾಗುತ್ತದೆ.
ಹಾಜರಾತಿ ದಾಖಲಿಸುವಾಗ ಸಿಬ್ಬಂದಿ ತಾವು ಕೆಲಸ ಮಾಡುವ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರ ಇರುವ ನಗರ, ಪಟ್ಟಣ ಅಥವಾ ಗ್ರಾಮದ ನಿಗದಿತ ಭೌಗೋಳಿಕ ವ್ಯಾಪ್ತಿಯೊಳಗೇ ಇರಬೇಕು. ನಿಗದಿತ ವ್ಯಾಪ್ತಿಯಿಂದ ಹೊರಗಿದ್ದು ಹಾಜರಾತಿ ದಾಖಲಿಸುವುದನ್ನು ತಡೆಯಲು ಜಿಯೋಫೆನ್ಸಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. ಅಂದರೆ, ವೈದ್ಯರು ಮತ್ತು ಸಿಬ್ಬಂದಿ ತಮ್ಮ ನಿಯೋಜಿತ ಕೇಂದ್ರ ಸ್ಥಾನದಲ್ಲೇ ವಾಸವಿದ್ದು, ಅಗತ್ಯವಿದ್ದಾಗ ರೋಗಿಗಳಿಗೆ ಲಭ್ಯವಾಗುವಂತೆ ನೋಡಿಕೊಳ್ಳುವುದು ಈ ಕ್ರಮದ ಉದ್ದೇಶವಾಗಿದೆ.
ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ರಾತ್ರಿ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ.
- ಸರ್ಕಾರದಿಂದ ಮಂಜೂರಾದ ರಜೆಯಲ್ಲಿರುವ ಸಿಬ್ಬಂದಿ.
- ಅಧಿಕೃತ ಅನುಮತಿಯೊಂದಿಗೆ ಕೇಂದ್ರ ಸ್ಥಾನದಿಂದ ಹೊರಗೆ ಕರ್ತವ್ಯ ನಿರ್ವಹಿಸುವವರು.
- ಸಕ್ಷಮ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆದು ಕೇಂದ್ರ ಸ್ಥಾನದಿಂದ ಹೊರಗೆ ತೆರಳಿರುವವರು.
ಇಂತಹ ಸಂದರ್ಭಗಳಲ್ಲಿ ವಿನಾಯಿತಿಗೆ ಕಾರಣವನ್ನು ಕರ್ತವ್ಯ ಆ್ಯಪ್‌ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು.
ವೈದ್ಯರು ಮತ್ತು ಸಿಬ್ಬಂದಿ ನಿಯಮಾನುಸಾರ ಹಾಜರಾತಿ ದಾಖಲಿಸುತ್ತಿದ್ದಾರೆಯೇ ಎಂಬುದನ್ನು ತಾಲೂಕು ಆರೋಗ್ಯಾಧಿಕಾರಿಗಳು ಪರಿಶೀಲಿಸಬೇಕು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಆಯುಕ್ತರು ಪ್ರತಿ ತಿಂಗಳು ಹಾಜರಾತಿ ವರದಿಗಳನ್ನು ಪರಿಶೀಲಿಸಲಿದ್ದಾರೆ.
ಅನುಮತಿಯಿಲ್ಲದೆ ನಿಯೋಜಿತ ಕೇಂದ್ರ ಸ್ಥಾನದಿಂದ ಹೊರಗಿರುವುದು ಅಥವಾ ನಿಯಮ ಉಲ್ಲಂಘಿಸುವುದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಅನ್ವಯಿಸುವ ಸೇವಾ ನಿಯಮಗಳ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಮೇಲ್ವಿಚಾರಣೆಯಲ್ಲಿಯೂ ಲೋಪವಾಗದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಈ ವ್ಯವಸ್ಥೆಯನ್ನು ಮೊದಲ ಹಂತದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯರಿಗೆ ಪ್ರಾಯೋಗಿಕವಾಗಿ 2026ರ ನವೆಂಬರ್ 1ರಿಂದ ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಇದರ ಅನುಷ್ಠಾನದ ಫಲಿತಾಂಶ ಆಧರಿಸಿ ಇತರ ಇಲಾಖೆಗಳ ಸರ್ಕಾರಿ ನೌಕರರಿಗೂ ರಾತ್ರಿ ಹಾಜರಾತಿ ವ್ಯವಸ್ಥೆ ವಿಸ್ತರಿಸುವ ಸಾಧ್ಯತೆಯಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



