‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪ್ರದಾನ: ಕನ್ನಡ ಕಡ್ಡಾಯ ಐತಿಹಾಸಿಕ ನಿರ್ಣಯ; ಸಚಿವ ಶಿವರಾಜ್ ತಂಗಡಗಿ
ಪ್ರಗತಿವಾಹಿನಿ ಸುದ್ದಿ: ಕರ್ನಾಟಕದಲ್ಲಿ ವ್ಯಾಪಾರ, ವ್ಯವಹಾರ ಮಾಡುತ್ತಿದ್ದೀರಿ ಎಂದರೆ ಶೇ.60 ಕನ್ನಡ ನಾಮಫಲಕ ಅಳವಡಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿರುವ ನ್ಯಾಯಾಲಯದ ಅಭಿಪ್ರಾಯ ಐತಿಹಾಸಿಕವಾದದ್ದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರು ಬಣ್ಣಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಶೇ. 60ರಷ್ಟು ಕನ್ನಡ ಬಳಕೆ ಮಾಡಬೇಕೆಂಬ ಪ್ರಶ್ನಿಸಿ ಕೆಲ ವಾಣಿಜ್ಯ ಸಂಸ್ಥೆಗಳು ಕೋರ್ಟ್ ಮೆಟ್ಟಿಲೇರಿದ್ದವು. ಆದರೆ ನ್ಯಾಯಾಲಯ ನೀವು ಕರ್ನಾಟಕದಲ್ಲಿದ್ದ ಮೇಲೆ ಸೂಚನಾ ಫಲಕಗಳನ್ನು ಕನ್ನಡದಲ್ಲಿ ಪ್ರದರ್ಶಿಸಬೇಕು ಎಂದು ಹೇಳಿರುವುದು ನಿಜಕ್ಕೂ ಶ್ಲಾಘನೀಯ. ಕನ್ನಡ ಭಾಷೆ ನೆಲ ಜಲ, ಸಂಸ್ಕೃತಿ, ಆಚಾರ – ವಿಚಾರ, ಸಂರಕ್ಷಣೆಯ ವಿಚಾರದಲ್ಲಿ ಸರ್ಕಾರ ವಿಶೇಷ ಕಾಳಜಿ ಹೊಂದಿದೆ ಎಂದು ತಿಳಿಸಿದರು.
ಮಾಶಾಸನ 3,000ಕ್ಕೆ ಹೆಚ್ಚಳ
ಇನ್ನೂ ಕಲಾವಿದರು ಮತ್ತು ಕಲೆಗಳಿಗೆ ಸರ್ಕಾರ ವಿಶೇಷ ಪ್ರೋತ್ಸಾಹ ನೀಡುತ್ತಿದ್ದು, ಮುಂದಿನ ವರ್ಷದಿಂದ ಕಲಾವಿದರಿಗೆ ನೀಡಲಾಗುವ ಮಾಶಾಸನದ ಮೊತ್ತವನ್ನ 3,000ಕ್ಕೆ ಹೆಚ್ಚಿಸಲಾಗುತ್ತದೆ. ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅನುದಾನ ನೀಡಲು ಯಾವುದೇ ಹಣಕಾಸಿನ ಕೊರತೆ ಇಲ್ಲ. ಪ್ರತಿಯೊಂದು ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೂ ಚಟುವಟಿಕೆಗಳನ್ನು ನಡೆಸುವ ಸಲುವಾಗಿ ಒಂದು ಕೋಟಿಯವರೆಗೂ ಅನುದಾನವನ್ನು ಒದಗಿಸಲಾಗುತ್ತಿದೆ. ಕಾರ್ಯಕ್ರಮದ ಕುರಿತು ಪ್ರಸ್ತಾವನೆ ಸಲ್ಲಿಸಿದರೆ, ಅದಕ್ಕೆ ಬೇಕಾದ ಅಗತ್ಯದ ಅನುದಾನ ನೀಡಲಾಗುತ್ತಿದೆ. ಈ ಮೂಲಕ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಕಳೆದ ಸರ್ಕಾರದಲ್ಲಿ ಅಕಾಡೆಮಿ – ಪ್ರಾಧಿಕಾರ ನಿಷ್ಕ್ರಿಯ
ಇಂದಿನ ಸರ್ಕಾರದಲ್ಲಿ ಅಕಾಡೆಮಿಗಳು ಸಂಪೂರ್ಣ ನಿಷ್ಕ್ರಿಯವಾಗಿದ್ದವು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ 14 ಅಕಾಡೆಮಿ ಮತ್ತು 4 ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನ ನೇಮಿಸುವ ಮೂಲಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ವೇಗ ನೀಡಲಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶೇಷವಾದಂತಹ ಇಲಾಖೆ. ಇಲಾಖೆ ಅಧಿನದಲ್ಲಿರುವ ಪ್ರಾಧಿಕಾರ ಮತ್ತು ಅಕಾಡೆಮಿಗಳು ಇಲಾಖೆಯ ಆಧಾರ ಸ್ಥಂಭಗಳು ಎಂದರೆ ತಪ್ಪಾಗಲಾರದು. ಅಕಾಡೆಮಿ – ಪ್ರಾಧಿಕಾರಗಳು ನಿಜಕ್ಕೂ ಇಲಾಖೆಗೆ ಮೆರುಗು ತರುವ ಕೆಲಸವನ್ನು ಮಾಡುತ್ತಿವೆ. ಕರ್ನಾಟಕ ಎಂದು ಹೆಸರಿಟ್ಟು 50 ವರ್ಷ ತುಂಬಿರುವ ಈ ಸಂಭ್ರಮದಲ್ಲಿ ನಾನು ಇಲಾಖೆಯ ಸಚಿವನಾಗಿರುವುದು ನನ್ನ ಭಾಗ್ಯ. ಒಂದು ಕರ್ನಾಟಕ ಎಂದು ಹೆಸರಿಟ್ಟ ಸಂದರ್ಭದಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದರು. ಅಂದು ಕರ್ನಾಟಕದ ಹಂಪಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ನಾವು ಕೂಡ ಅದೇ ಮಾದರಿಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿ, ಸುವರ್ಣ ಸಂಭ್ರಮದ ರಥಕ್ಕೆ ಚಾಲನೆ ನೀಡಿದ್ದೆವು. ಸುವರ್ಣ ಸಂಭ್ರಮದ ರಥ ಇಡೀ ರಾಜ್ಯದ ಮೂಲೆ ಮೂಲೆಗಳನ್ನು ಸಂಚರಿಸುತ್ತಿದೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನವೆಂಬರ್ 1.ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ 50 ಪುರುಷ ಹಾಗೂ ಮಹಿಳಾ ಸಾಧಕರಿಗೆ ಸುವರ್ಣ ಸಂಭ್ರಮ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಇದೇ ವೇಳೆ ಸಚಿವರು ಮಾಹಿತಿ ನೀಡಿದರು.
ಅಲ್ಲದೆ ಕರ್ನಾಟಕ ಕಲಾಶ್ರೀ ವಾರ್ಷಿಕ ಪ್ರಶಸ್ತಿಯನ್ನು ಪಡೆದ ಪ್ರತಿಯೊಬ್ಬರಿಗೂ ಸಚಿವರು ಅಭಿನಂದನೆಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ. ಧರಣಿ ದೇವಿ ಮಾಲಗತ್ತಿ, ಸಂಗೀತ – ನೃತ್ಯ ಅಕಾಡೆಮಿ ಅಧ್ಯಕ್ಷ ಶುಭಾ ಧನಂಜಯ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ