Latest

ಗಡಿ ಸಮಸ್ಯೆ ಪರಿಹಾರ ಸು’ಸೂತ್ರ’; ಗಡಿಯಲ್ಲಿ ಕನ್ನಡ- ಮರಾಠಿ ನಾಮಫಲಕ ಅಳವಡಿಕೆಯೊಂದಿಗೆ ಸಮನ್ವಯತೆ

ಪ್ರಗತಿವಾಹಿನಿ ಸುದ್ದಿ, ಕೊಲ್ಲಾಪುರ: ಕರ್ನಾಟಕ- ಮಹಾರಾಷ್ಟ್ರ ಗಡಿ ಸಮಸ್ಯೆ ಪರಿಹಾರಕ್ಕೆ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ಗಡಿ ಭಾಗದಲ್ಲಿ ಕನ್ನಡ ಹಾಗೂ ಮರಾಠಿ ನಾಮಫಲಕಗಳನ್ನು ಅಳವಡಿಸುವ ಮೂಲಕ ಉಭಯ ರಾಜ್ಯಗಳ ಪ್ರವಾಸಿಗರು, ಉದ್ಯೋಗಿಗಳು ಹಾಗೂ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲು ರಾಜ್ಯಪಾಲರ ಸಭೆ ಒಪ್ಪಿಗೆ ಸೂಚಿಸಿದೆ.

ಕೊಲ್ಲಾಪುರದಲ್ಲಿ ಶುಕ್ರವಾರ ಗಡಿ ಭಾಗಗಳ ಸಮಸ್ಯೆ ಪರಿಹಾರಕ್ಕಾಗಿ ನಡೆದ ರಾಜ್ಯಪಾಲರ ಸಭೆಯಲ್ಲಿ ಈ ಹೊಸ ಸೂತ್ರ ಅಳವಡಿಸಿಕೊಳ್ಳುವ ಕುರಿತು ಕರ್ನಾಟಕದ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಹಾಗೂ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಠ್ಯಾರಿ ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.

ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಕೆಲ ವಿಚಾರಗಳ ಕುರಿತು ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು. ಇನ್ನು ಕೆಲ ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರಗಳಿಗೆ ಸಲಹೆಗಳನ್ನು ನೀಡಲಾಗುವುದು ಎಂದು ಎರಡೂ ರಾಜ್ಯಗಳ ರಾಜ್ಯಪಾಲರು ತಿಳಿಸಿದರು.

ನದಿಗಳ ಪ್ರವಾಹದಿಂದ ಸಂಭವಿಸುತ್ತಿರುವ ಸಮಸ್ಯೆಗಳಿಗೆ ಹಾನಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಎರಡೂ ರಾಜ್ಯಗಳ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು. ಮಹಾರಾಷ್ಟ್ರದ ಅಧಿಕಾರಿಗಳು ಸಹಕಾರ ನೀಡಿದರೆ ಕೃಷ್ಣಾ ನದಿ ನೆರೆಯಿಂದ ಪ್ರತಿ ವರ್ಷ ಉಂಟಾಗುವ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದಾಗಿದೆ. ಅಂಬೋಲಿ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಮೂಲಕ ಎರಡೂ ರಾಜ್ಯಗಳ ನಡುವಣ ವ್ಯಾಪಾರ ವಹಿವಾಟು ವೃದ್ಧಿಸಿಕೊಳ್ಳಬಹುದು ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸಲಹೆ ನೀಡಿದರು.

ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವುದರಿಂದ ಸಾಂಗ್ಲಿ ಮತ್ತು ಕೊಲ್ಲಾಪುರ ಭಾಗದಲ್ಲಿ  ಮುಳುಗಡೆ ಸಮಸ್ಯೆ ಹೆಚ್ಚಲಿದೆ. ಈ ಕುರಿತು ಸಮಾಲೋಚನೆ ಅಗತ್ಯ ಎಂದು ಕೊಲ್ಲಾಪುರ ಜಿಲ್ಲಾಧಿಕಾರಿ ರಾಹುಲ್ ರೇಖಾವರ ಹೇಳಿದರು.

ಮೇವು ವ್ಯಾಪಾರ, ಕರ್ನಾಟಕ ಭಾಗದಿಂದ ಮಹಾರಾಷ್ಟ್ರದತ್ತ ಆನೆಗಳ  ಸಂಚಾರ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಮಹಾರಾಷ್ಟ್ರದ ಬಸ್ಸುಗಳಿಗೆ ಕರ್ನಾಟಕದ ನಿಲ್ದಾಣಗಳಲ್ಲಿ ಜಾಗ ನೀಡುವಂತೆ ಸಾಂಗ್ಲಿ ಜಿಲ್ಲಾಧಿಕಾರಿ ಡಾ. ರಾಜಾ ಕೋರಿದರು.

ಉಭಯ ರಾಜ್ಯಗಳ ಅಬಕಾರಿ ಸಮನ್ವಯತೆ ಕುರಿತು ಸೋಲಾಪುರ ಜಿಲ್ಲಾಧಿಕಾರಿ ಸೋಲಾಪುರ ಹೆಚ್ಚುವರಿ ಜಿಲ್ಲಾಧಿಕಾರಿ ಭರತ್ ವಾಘ್ಮೋರೆ ಸಲಹೆ ನೀಡಿದರು. ಇದೇ ವೇಳೆ ಗಡಿ ಭಾಗದಲ್ಲಿ ಅಬಕಾರಿ ಅಕ್ರಮ ಸಾಗಣೆಗೆ ಕಡಿವಾಣ ಹಾಕುವ ಕುರಿತು ಮಾತನಾಡಿದ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರಕರ ಗಡಿ ಭಾಗದ ಆಸ್ಪತ್ರೆಗಳಲ್ಲಿ ಭ್ರೂಣ ಹತ್ಯೆ ತಡೆಯುವ ನಿಟ್ಟಿನಲ್ಲಿ ಕ್ರಮಕ್ಕೆ ಆಗ್ರಹಿಸಿದರು.

ದ್ರಾಕ್ಷಿ ಮಾರುಕಟ್ಟೆ ವಿಸ್ತರಣೆ ಹಾಗೂ ಎರಡೂ ರಾಜ್ಯಗಳ ಧಾರ್ಮಿಕ ತಾಣಗಳಿಗೆ ಭೇಟಿ ನೀಡುವ ಭಕ್ತಾದಿಗಳಿಗೆ ಸೂಕ್ತ ಮೂಲಸೌಲಭ್ಯಗಳ ಹೆಚ್ಚಳ ಕುರಿತು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಪ್ರಸ್ತಾಪಿಸಿದರು.

ಕರ್ನಾಟಕದ ಗಡಿ ಭಾಗದಿಂದ ಕೂಲಿ ಮತ್ತಿತರ ಕೆಲಸಗಳಿಗಾಗಿ ವಲಸೆ ಹೋಗುವವರಿಗೆ ಮಹಾರಾಷ್ಟ್ರದಲ್ಲಿ ಸೂಕ್ತ ನೆರವು ಒದಗಿಸಲು ಬೀದರ್ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸಲಹೆ ನೀಡಿದರು.

ಸಭೆಯಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಅವಘಡ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button