ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಹಾತ್ಮಾ ಗಾಂಧಿ ನರೇಗಾ ಯೋಜನೆಯಲ್ಲಿ ಜಲಶಕ್ತಿ ಅಭಿಯಾನದಲ್ಲಿ ಕರ್ನಾಟಕ ರಾಜ್ಯಕ್ಕೆ ಮೊದಲ ಸ್ಥಾನ ದೊರಕಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆಯ ಸಚಿವರಾದ ಕೆ.ಎಸ್. ಈಶ್ವರಪ್ಪ ಹೇಳಿದರು.
ಬೆಳಗಾವಿ ಪ್ರವಾಸ ಮಂದಿರದಲ್ಲಿ ಬುಧವಾರ (ಆ.೧೧) ಜರುಗಿದ ಜಲಶಕ್ತಿ ಅಭಿಯಾನದ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಜಲಶಕ್ತಿ ಅಭಿಯಾನದಡಿ ಮಾರ್ಚ್ ೨೨ ರಿಂದ ಇಲ್ಲಿಯವರೆಗೆ ಒಟ್ಟು ೪.೯೭ ಲಕ್ಷ ಜಲ ಸಂರಕ್ಷಣೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಅದರಲ್ಲಿ ೨.೩೮ ಲಕ್ಷ ಕಾಮಗಾರಿ ಪೂರ್ಣಗೊಳಿಸುವ ಮೂಲಕ ದೇಶದಲ್ಲಿಯೇ ಪ್ರಥಮ ಸ್ಥಾನವನ್ನು ಪಡೆದಿದೆ. ಈ ಸ್ಥಾನ ಪಡೆಯಲು ಮೂಲ ಕಾರಣ ೪೦ ಲಕ್ಷ ನರೇಗಾ ಜಾಬ್ ಕಾರ್ಡುದಾರರು. ಈ ಸಾಧನೆಗಾಗಿ ಎಲ್ಲಾ ನರೇಗಾ ಸೈನಿಕರು ಹಾಗೂ ಎಲ್ಲಾ ಜಿಲ್ಲಾ ಪಂಚಾಯತಿ ಸಿಇಓ ಹಾಗೂ ಪಿಡಿಓ ಅವರನ್ನು ಅಭಿನಂದಿಸುತ್ತೇನೆ ಎಂದರು.
ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವೆಚ್ಚದಲ್ಲಿ ಕನಿಷ್ಠ ೬೫ ರಷ್ಟು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗೆ ಮೀಸಲಿಡಲಾಗಿದೆ. ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನ- ಕ್ಯಾಚ್ ಮೀ ರೈನ್ ಎಂಬ ಅಭಿಯಾನಕ್ಕೆ ಮಾರ್ಚ್ ೨೨ ರಂದು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದು, ಇದರ ಮುಖ್ಯ ಉದ್ದೇಶ ನೀರಿನ ಅಂತರ್ಜಲ ಮಟ್ಟ ಹೆಚ್ಚಳ ಮಾಡುವುದಾಗಿದೆ ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ ನಡೆದ (ಏ.೯) ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಜಲಶಕ್ತಿ ಅಭಿಯಾನ ಕ್ಕೆ ಚಾಲನೆಯನ್ನು ನೀಡಲಾಯಿತು ೨೦೨೧-೨೨ ನೇ ಸಾಲಿನ ನರೇಗಾ ಕ್ರಿಯಾ ಯೋಜನೆಯಲ್ಲಿ ಪ್ರತ್ಯೇಕವಾಗಿ ಅಂತರ್ಜಲ ಚೇತನ ಶೀರ್ಷಿಕೆಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಕಾಮಗಾರಿಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಮುಂಗಾರು ಪ್ರಾರಂಭ ಪೂರ್ವದಲ್ಲಿ ೧೦೦ ದಿನಗಳ ಅವಧಿಗೆ ಜಲಶಕ್ತಿ ಅಭಿಯಾನದಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಲ ಸಂರಕ್ಷಣೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ೨೪೦ ಹೊಸ ಕೆರೆಗಳ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಹಾಗೂ ಕಲ್ಬುರ್ಗಿ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ನೂರಾರು ಕಲ್ಯಾಣ ಗಳ ಪುನಶ್ಚೇತನಕ್ಕೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ರಾಜ್ಯದ ಬೆಳಗಾವಿ, ಗದಗ, ಕಲ್ಬುರ್ಗಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ರೈತರ ಜಮೀನುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬದು ಮತ್ತು ಕೃಷಿ ಹೊಂಡಗಳ ಕಾಮಗಾರಿಗಳನ್ನು ನಡೆಸಲಾಗಿದ್ದು ರಾಯಚೂರು ಜಿಲ್ಲೆಯಲ್ಲಿ ೧೫೦ಕ್ಕೂ ಹೆಚ್ಚು ಗೋ ಕಟ್ಟೆಗಳ ನಿರ್ಮಾಣವನ್ನು ಮಾಡಲಾಗಿದೆ ಮತ್ತು ಕರಾವಳಿ ಮಲೆನಾಡು ಜಿಲ್ಲೆಗಳಲ್ಲಿ ತೆರೆದ ಬಾವಿಗಳು, ಬಯಲುಸೀಮೆ ಜಿಲ್ಲೆಗಳಲ್ಲಿ ಸಮಗ್ರ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಹಾಗೂ ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ರಾಮನಗರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಅರಣ ಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪ್ರಸ್ತುತ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಒಟ್ಟು ೨೯೩೪.೩೨ ಕೋಟಿ ರೂಪಾಯಿ ವ್ಯಯಿಸಲಾಗಿದ್ದು ಈ ವೆಚ್ಚದಲ್ಲಿ ಶೇಕಡಾ ೮೨ರಷ್ಟು (೨೪೦೮.೫೦) ಕೋಟಿ ರೂಪಾಯಿಗಳನ್ನು ಜಲಶಕ್ತಿ ಅಭಿಯಾನಕ್ಕೆ ವೆಚ್ಚ ಮಾಡಲಾಗಿದೆ ಎಂದು ಹೇಳಿದರು.
ಕೋವಿಡನಂತಹ ಸಂದರ್ಭದಲ್ಲಿ ಕೂಡ ಹಲವಾರು ಕಾಮಗಾರಿ ಕೈಗೊಳ್ಳಲಾಗಿದೆ ಹಾಗೂ ಇದರಿಂದ ಸಂಕಷ್ಟದ ಸಂದರ್ಭದಲ್ಲಿ ಗ್ರಾಮೀಣ ಜನರಿಗೆ ಕೆಲಸ ಒದಗಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ಗಳಿಗೆ ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಕುರಿತು ತರಬೇತಿಯನ್ನು ನೀಡಲು ಯೋಜನೆಗಳನ್ನು ರೂಪಿಸುತಿದ್ದೇವೆ, ಹಾಗೂ ಅದನ್ನು ಈಗಾಗಲೇ ದಾವಣಗೆರೆ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಜಾರಿಗೆ ತಂದಿದ್ದು ಈಗ ಬೆಳಗಾವಿ ಜಿಲ್ಲೆಯಲ್ಲಿಯೂ ಜಾರಿಗೆ ತರಲಾಗುತ್ತಿದೆ ಎಂದು ಈಶ್ವರಪ್ಪ ಹೇಳಿದರು.
ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಕೆರೆಗಳ ಅಭಿವೃದ್ದಿಯ ಕಾರ್ಯವನ್ನೂ ನೀಡಿದ್ದು ಅದರಿಂದ ಬರುವ ಆದಾಯ ಹಾಗೂ ಖರ್ಚು ವೆಚ್ಚ ಗ್ರಾಮ ಪಂಚಾಯತಿ ನಿರ್ವಹಿಸಬೇಕು ಹಾಗೂ ಸರಕಾರದ ಅವಧಿ ಪೂರ್ಣ ಗೊಳ್ಳುವದರ ಒಳಗಾಗಿ ಎಲ್ಲಾ ಕೆರೆಗಳ ಪುನಶ್ಚೇತನ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಮಾತನಾಡಿದರು
ಜಲಶಕ್ತಿ ಅಭಿಯಾನ ದಲ್ಲಿ ಏಪ್ರಿಲ್ ೧ ರಿಂದ ಇಲ್ಲಿಯವರೆಗೆ ೭೨೪೧೧ ಕೃಷಿ ಹೊಂಡ ನಿರ್ಮಾಣ, ೯೦೯೪೬ ಬದು ನಿರ್ಮಾಣ ಮಾಡಲಾಗಿದ್ದು, ೪೦೮೨ ತೆರೆದ ಬಾವಿಗಳು ಪುನಶ್ಚೇತನ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ೧೩೭೬೪೮, ರಿಚಾರ್ಜ್ ರಚನೆ ಮಾಡಲಾಗಿದ್ದು, ೨೮೬ ಕಲ್ಯಾಣ ಗಳ ಪುನಶ್ಚೇತನ ಮಾಡಲಾಗಿದೆ.
೭೦೪ ಮಳೆ ನೀರು ಕೊಯ್ಲು ರಚನೆ ಮಾಡಲಾಗಿದ್ದು ರಾಜ್ಯಾದ್ಯಂತ ೫೫,೧೮೪ ಸಮಗ್ರ ಕೆರೆ ಅಭಿವೃದ್ಧಿ ಯೋಜನೆಯಲ್ಲಿ ಹೊಸ ಕೆರೆಗಳ ನಿರ್ಮಾಣ , ಕೆರೆಗಳ ಹೂಳೆತ್ತುವ ಕಾಮಗಾರಿಯನ್ನು ಹಾಗೂ ಗೋ ಕಟ್ಟೆಗಳ ನಿರ್ಮಾಣ ಮಾಡಲಾಗಿದೆ , ೧,೧೨೧೮೨ ಅರಣ ಕರಣ ಕಾಮಗಾರಿ ಕೈಗೊಂಡಿದ್ದು, ೪೬೪ ಮಲ್ಟಿ ಆರ್ಚ್ ಚೆಕ್ ಡ್ಯಾಂ , ೧೨೬೨ ನೀರು ಇಂಗಿಸುವ ಕಂದಕಗಳ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಜಲಶಕ್ತಿ ಅಭಿಯಾನದಲ್ಲಿ ತುಮಕೂರು ಜಿಲ್ಲೆಯಲ್ಲಿ ೨೯,೪೫೨, ರಾಮನಗರ ಜಿಲ್ಲೆಯಲ್ಲಿ ೨೮,೭೭೦, ಕಲ್ಬುರ್ಗಿಯಲ್ಲಿ ೨೭೧೨೬, ರಾಯಚೂರು ಜಿಲ್ಲೆಯಲ್ಲಿ ೨೫,೮೨೬ ಹಾಗೂ ಬೆಳಗಾವಿಯಲ್ಲಿ ೨೫,೪೨೨ ಅತಿ ಹೆಚ್ಚು ಕಾಮಗಾರಿಗಳನ್ನು ಈ ೫ ಜಿಲ್ಲೆಯಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಬಿಜೆಪಿ ಗ್ರಾಮೀಣ ಅಧ್ಯಕ್ಷ ಸಂಜಯ್ ಪಾಟೀಲ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು
ಪರಿಹಾರಕ್ಕಾಗಿ ಜೆಸಿಬಿ ಹಚ್ಚಿ ಮನೆ ಕೆಡವಿದ್ದಾರೆ, ಅಂತವರು ಜೈಲಿಗೆ ಹೋಗುತ್ತಾರೆ ಎಂದ ಈಶ್ವರಪ್ಪ
ನರೇಗಾ ಹಾಗೂ ಕೋವಿಡ್ ನಿರ್ವಹಣೆಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ