Belagavi NewsBelgaum NewsKannada NewsKarnataka News

ಮಹಾರಾಷ್ಟ್ರದಲ್ಲಿ ಕರ್ನಾಟಕ ಸಾರಿಗೆ ಬಸ್ ಗೆ ಬೆಂಕಿ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಮೀಸಲಾತಿಗೆ ಆಗ್ರಹಿಸಿ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಕರ್ನಾಟಕ ಸಾರಿಗೆ ಬಸ್ ಸೇರಿದಂತೆ 10ಕ್ಕೂ ಹೆಚ್ಚು ವಾಹನಗಳ ಮೇಲೆ ದಾಳಿ ನಡೆದಿದೆ.

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಘಟಕದ ಬಸ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಇದೇ ವೇಳೆ ಕಲ್ಲು ತೂರಾಟ ಕೂಡ ನಡೆದಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಜಾಲ್ನಾ ಜಿಲ್ಲೆಯ ವಡಿಗೋದ್ರಿ ಬಳಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ವೇಳೆ ಕೆಎಸ್‌ಆರ್‌ಟಿಸಿ ಬಸ್, ಮಹಾರಾಷ್ಟ್ರ ಸಾರಿಗೆ ಬಸ್ ಸೇರಿ ಆರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಮರಾಠಾ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಹಿಂಸಾಚಾರ ಭುಗಿಲೆದ್ದಿದ್ದು, ಅದರ ಬಿಸಿ ಕರ್ನಾಟಕ ಸಾರಿಗೆ ಬಸ್​​ಗೆ ತಟ್ಟಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಜಾಲ್ನಾ ಜಿಲ್ಲೆಯ ಶಹಾಗಡ್‌ನಲ್ಲಿ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ

ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಕಿಚ್ಚಿಗೆ  ಕರ್ನಾಟಕ ಸಾರಿಗೆ ಬಸ್‌ಗೆ ಬೆಂಕಿ ಹಚ್ಚಲಾಗಿದೆ. ಔರಂಗಾಬಾದ್ – ಹುಬ್ಬಳ್ಳಿ ಮಾರ್ಗದ ಕರ್ನಾಟಕ ಸಾರಿಗೆ ಬಸ್‌ಗೆ ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯ ಅಂಬಡ್ ತಾಲೂಕಿನ ವಡಿಗೋದ್ರಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಕಿಹಚ್ಚಲಾಗಿದೆ.

ಕೆಎಸ್‌ಆರ್‌ಟಿಸಿ ಬಸ್​​ನಲ್ಲಿ 45 ಜನರು ಪ್ರಯಾಣಿಸುತ್ತಿದ್ದರು. ಅವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕರ್ನಾಟಕ ಸಾರಿಗೆ ಇಲಾಖೆ ಅಧಿಕಾರಿಗಳು ಮಹಾರಾಷ್ಟ್ರ ಪೊಲೀಸರ ಜೊತೆ ಸಂಪರ್ಕದಲ್ಲಿದ್ದು, ಪರಿಸ್ಥಿತಿಯ ಬಗ್ಗೆ ನಿಗಾ ವಹಿಸಿದ್ದಾರೆ.

ಘಟನೆಯ ಬಗ್ಗೆ ರಾಮದುರ್ಗ ಮೂಲದ ಬಸ್ ಚಾಲಕ ಎಲ್​​ಎಲ್ ಲಮಾಣಿ ಮಾಹಿತಿ ನೀಡಿದ್ದಾರೆ. ಔರಂಗಾಬಾದ್​ನಿಂದ ಹುಬ್ಬಳ್ಳಿಗೆ ಬಸ್ ತೆರಳುತ್ತಿತ್ತು. ಲಾತೂರ್‌ ಬಸ್ ಹಿಂದೆ ನಾವು ಇದ್ವಿ. ಲಾತೂರ್ ಬಸ್‌ಗೆ ಕಲ್ಲು ತೂರಾಟ ನಡೆಸಿ ಗಾಜು ಒಡೆದರು. ಬಳಿಕ ಹಿಂಬದಿಯಲ್ಲಿದ್ದ ನಮ್ಮ ಬಸ್ ಮೇಲೂ ದಾಳಿ ಮಾಡಿದ್ರು. ಬಸ್‌ನ ಹೆಡ್‌ಲೈಟ್, ಗಾಜುಗಳನ್ನು ಪುಡಿ ಪುಡಿ ಮಾಡಿದರು. ಕೆಳಗೆ ಇಳಿಯಿರಿ ಇಲ್ಲ ಬೆಂಕಿ ಹಚ್ಚುತ್ತೇವೆ ಅಂತಾ ಹೇಳಿದ್ರು. ಇಳಿದ ತಕ್ಷಣವೇ ಬಸ್‌ಗೆ ಬೆಂಕಿ ಹಚ್ಚಿದ್ರು. 200 ರಿಂದ 300 ಜನ ಉದ್ರಿಕ್ತರು ಏಕಾಏಕಿ ದಾಳಿ ಮಾಡಿದ್ರು. ನಮ್ಮ ಬಸ್‌ನಲ್ಲಿ 45ರಿಂದ 50 ಪ್ರಯಾಣಿಕರು ಇದ್ರು ಎಂದು ವಡಿಗೋದ್ರಿ ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಚಾಲಕ ಲಮಾಣಿ ತಿಳಿಸಿದ್ದಾರೆ.

ಸಧ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮಾಹಿತಿ ಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button