*ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ; ಬಿಸಿಲ ಝಳಕ್ಕೆ ಕಂಗೆಟ್ಟಿದ್ದ ಜನತೆಗೆ ತಂಪೆರೆದ ಮಳೆರಾಯ*
ಪ್ರಗತಿವಾಹಿನಿ ಸುದ್ದಿ: ರಣಬಿಸಿಲ ಹೊಡೆತಕ್ಕೆ ಕಂಗೆಟ್ಟಿದ್ದ ರಾಜಧಾನಿ ಬೆಂಗಳೂರಿಗರಿಗೆ ಮೇಘರಾಜ ತಂಪೆರೆದಿದ್ದಾನೆ. 108 ದಿನಗಳ ಬಳಿಕ ಸಿಲಿಕಾನ್ ಸಿಟಿಗೆ ಮಳೆರಾಯನ ಆಗಮನವಾಗಿದೆ. ಬೆಳಿಗ್ಗೆಯಿಂದ ಮೋಡಕವಿದ ವಾತಾವರಣವಿದ್ದ ಬೆಂಗಳೂರಿನಲ್ಲಿ ಮಧ್ಯಾಹ್ನದ ಬಳಿಕ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ.
ರಾಜಧಾನಿ ಬೆಂಗಳೂರಿನ ಪ್ರಮುಖ ರಸ್ತೆಗಳು ಜಲಾವೃತಗೊಂಡಿವೆ. ಬಿಸಿಲ ಝಳದಿಂದ ಕಾದ ಕಾವಲಿನಂತಾಗಿದ್ದ ಬೆಂಗಳೂರು ತಣ್ಣಗಾಗಿದ್ದು, ಹಲವೆಡೆ ಸಾರ್ವಜನಿಕರು ಮಕ್ಕಳೊಂದಿಗೆ ಮಳೆಯಲ್ಲಿ ಮಿಂದು ಸಂಭ್ರಮಿಸಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್, ಶಾಂತಿನಗರ, ಶಿವಾನಂದ ಸರ್ಕಲ್, ರಾಜಾಜಿನಗರ, ಕೆ.ಆರ್ ಪುರ, ವೈಟ್ ಫೀಲ್ಡ್,ಆರ್.ಆರ್.ನಗರ ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ವಿವಿಧೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಐಟಿಪಿ ಲೇಔಟ್ ನಲ್ಲಿ ಸಿಡಿಲ ಹೊಡೆತಕ್ಕೆ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್ ಆಗಿದೆ. ಬಿರುಗಾಳಿ ಮಳೆಗೆ ಮರ, ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ.
ಹೆಬ್ಬಗೋಡಿ, ಆನೇಕಲ್ ಭಾಗದಲ್ಲಿ ಆಲಿಕಲ್ಲು ಮಳೆಯಾಗಿದೆ. ಹೊಸಗೊಟೆ ಸುತ್ತಮುತ್ತ ಬಿರುಗಾಳಿ ಮಳೆಯಾಗಿದ್ದು, ದಾಸರಹಳ್ಳಿಯಲ್ಲಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆಂದು ಹಾಕಲಾಗಿದ್ದ ಪೆಂಡಾಲ್ ಕಿತ್ತುಹೋಗಿದ್ದು, ಭಕ್ತರಿಗಾಗಿ ಏಬಲ್ ಮೇಲೆ ಇಟ್ಟಿದ್ದ ಊತ ನೀರುಪಾಲಾಗಿದೆ. ಏಕಾಏಕಿ ಸುರಿದ ವರುಣಾರ್ಭಟಕ್ಕೆ ಹಲವೆಡೆ ಅವಾಂತರ ಸೃಷ್ಟಿಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ