
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬಿಹಾರ ಸರ್ಕಾರ ಜಾತಿ ಗಣತಿ ವರದಿ ಜಾರಿ ಮಾಡಿದ್ದನ್ನು ಸ್ವಾಗತಿಸುತ್ತೇವೆ. ಅದೇ ರೀತಿ ರಾಜ್ಯದಲ್ಲೂ ಜಾತಿ ಗಣತಿ ವರದಿ ಬಿಡುಗಡೆ ಮಾಡಿದರೆ ಒಳ್ಳೆಯದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮದು ಸುಮಾರು ವರ್ಷಗಳ ಹಿಂದೆ ತಯಾರಾಗಿದೆ. ಸರ್ಕಾರ ಮತ್ತು ಸಿಎಂ ನಿರ್ಧಾರ ಮಾಡಬೇಕು. ಜಾತಿ ಗಣತಿ ವರದಿ ಜಾರಿ ಮಾಡುವುದು ಒಳ್ಳೆಯದು. ಯಾವ ಸಮುದಾಯಕ್ಕೆ ಏನೇನು ಕಾರ್ಯಕ್ರಮ ಮಾಡಬೇಕು. ಹೆಚ್ಚಿನ ಅನುದಾನ ಕೊಡಬೇಕು ಅನ್ನೋದು ಗೊತ್ತಾಗುತ್ತದೆ. ಸಾಮಾಜಿಕವಾಗಿ, ಶೈಕ್ಷಣಿಕ ಲೆಕ್ಕಾಚಾರದಲ್ಲಿ ಬಹಳ ಒಳ್ಳೆಯ ಬೆಳವಣಿಗೆ ನಮ್ಮಲ್ಲಿಯೂ ಆಗಬೇಕು ಅನ್ನೋದು ನಮ್ಮ ಆಸೆ ಇದೆ. ಕಳೆದ ಬಾರಿ ಚುನಾವಣೆ ವೇಳೆಗೆ ಮಾಡೋಕೆ ಆಗಲಿಲ್ಲ. ನಮ್ಮ ಸರ್ಕಾರದ ಹಂತದಲ್ಲಿ ಚರ್ಚೆ ಆಗುತ್ತಿದ್ದು, ಆದಷ್ಟು ಬೇಗ ಸರ್ಕಾರ ಗಮನ ಹರಿಸಬೇಕು. ಜನಗಣತಿ ವರದಿಗೆ 200 ಕೋಟಿ ರೂ. ಖರ್ಚು ಮಾಡಿರಬೇಕು. ಆದಷ್ಟು ಬೇಗ ವರದಿ ಜಾರಿ ಆಗಬೇಕು ಎಂದು ಒತ್ತಾಯಿಸಿದರು.
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷಗಳ ಟೀಕೆ ವಿಚಾರಕ್ಕೆ ಯಾವುದೇ ಒಂದು ಮೂಲೆಯಲ್ಲಿ ಆಗಿದ್ದು, ಎಲ್ಲರೂ ಹೇಳಿದ್ದಾರೆಂದರೆ ಹೇಗೆ? ಯಾವುದೇ ಒಂದು ಮೂಲೆಯಲ್ಲಿ ನಡೆದಿದ್ದು, ಇಡೀ ಶಿವಮೊಗ್ಗಕ್ಕೆ ತೋರಿಸಿದರೆ ಹೇಗೆ ಎಂದು ಉದ್ಯಮಿಯೊಬ್ಬರು ಪ್ರಶ್ನೆ ಮಾಡಿದ್ದಾರೆ. ಎಲ್ಲೋ ಘಟನೆ ಆಗುತ್ತೆ, ಆಗಬಾರದು ಅಂತೇನಿಲ್ಲ. ಬೇರೆ ಬೇರೆ ಘಟನೆ ಬೇರೆ ಬೇರೆ ಕಾರಣಗಳಿಗೆ ಆಗುತ್ತೆ. ಎಲ್ಲಾ ಹಿಂದೂ ಮುಸ್ಲಿಂ ಅಂತಾ ಹೇಳಲಿಕ್ಕಾಗಲ್ಲ, ವೈಯಕ್ತಿಕವಾಗಿ ಬಹಳಷ್ಟು ಸಮಸ್ಯೆ ಇರುತ್ತೆ. ಪೊಲೀಸ್ ತನಿಖೆ ಬಳಿಕ ಸತ್ಯಾಂಶ ಹೊರ ಬಂದೇ ಬರುತ್ತೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಈಗ ಬೊಮ್ಮಾಯಿಯವರು ಹಿಂದೆ ಕಾವೇರಿ ನೀರು ಬಿಟ್ಟಿದ್ದರು. ಈಗ ನಿನ್ನೆ ಅವರೇ ಹೋಗಿ ಭಾಷಣ ಮಾಡ್ತಾರೆ. ನೀವು ಅವರನ್ನು ಪ್ರಶ್ನೆ ಮಾಡಲ್ಲ. ಕುಮಾರಸ್ವಾಮಿ ಕಾಲದಲ್ಲೂ ನೀರು ಬಿಟ್ಟಿದ್ದಾರೆ. ಶಿವಮೊಗ್ಗದಲ್ಲಿ ಘಟನೆ ಆಗಿರೋದು ನಿಜ. ಆದರೆ ಎಲ್ಲೋ ಒಂದು ಮೂಲೆ ಭಾಗದಲ್ಲಿ ಆಗಿದ್ದು, ಇಡೀ ಶಿವಮೊಗ್ಗಕ್ಕೆ ಸಂಬಂದಪಟ್ಟದ್ದಲ್ಲ. ಇದನ್ನು ಎಸ್‌ಪಿಯವರು ಹೇಳಿದ್ದಾರೆ. ಉದ್ಯಮ ಸಂಘದ ಅಧ್ಯಕ್ಷರೂ ಹೇಳಿದ್ದಾರೆ. ಅದನ್ನು ಪೊಲೀಸರು ನೋಡಿಕೊಳ್ಳುತ್ತಾರೆ ಎಂದರು.
ಸಂಕ್ರಾಂತಿ ನಂತರ ಸರ್ಕಾರ ಪತನವಾಗುತ್ತೆ ಎಂಬ ಸಿ.ಪಿ. ಯೋಗೀಶ್ವರ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಅವರು, ನೋಡೋಣ ಅಲ್ಲಿಯವರೆಗೂ ನಾವು ಇರುತ್ತೇವಲ್ಲ. ಸಂಕ್ರಾಂತಿವರೆಗಾದ್ರೂ ನಾವು ಇರುತ್ತೇವಲ್ಲ ಎಂದು ಮಾಧ್ಯಮಗಳ ಪ್ರಶ್ನೆಗೆ ಹಾಸ್ಯ ಚಟಾಕಿ ಹಾರಿಸಿದರು. ನಾವು ಮಾಜಿ ಆದ ಬಳಿಕ ಕೇಳಿ ಆಗ ಉತ್ತರಿಸುತ್ತೇವೆ ಎಂದು ಹೇಳಿದರು.
ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವ ವಿಚಾರಕ್ಕೆ ಶಿಫಾರಸ್ಸು ಮಾಡುವುದಷ್ಟೇ ರಾಜ್ಯ ಸರ್ಕಾರದ ಕೆಲಸ. ಅಂತಿಮವಾಗಿ ಇದನ್ನು ಅನುಷ್ಠಾನಕ್ಕೆ ತರುವುದು ಕೇಂದ್ರ ಸರ್ಕಾರದ ಕೆಲಸ ಎಂದರು. ರಮೇಶ್ ಕತ್ತಿ ಕಾಂಗ್ರೆಸ್ ಸೇರ್ಪಡೆ ವಿಚಾರದ ಕುರಿತು, ಅದರ ಬಗ್ಗೆ ಮಾಹಿತಿ ಇಲ್ಲ. ಆದರೆ, ಪಕ್ಷಕ್ಕೆ ಯಾರೇ ಬಂದರೂ ಸ್ವಾಗತಿಸುತ್ತೇವೆ ಎಂದರು. ಇನ್ನು ಬಿಜೆಪಿ ಟಿಕೆಟ್ ಸಿಗದಿದ್ದರೆ ರಮೇಶ ಕತ್ತಿ ಕಾಂಗ್ರೆಸ್ಗೆ ಬರುತ್ತಾರಾ ಎಂಬ ಪ್ರಶ್ನೆಗೆ, ಆ ರೀತಿ ಏನಿಲ್ಲ. ವಿಧಾನಸಭೆ ಚುನಾವಣೆಯಂತೆ ಮುಂಚೆಯೇ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸುತ್ತೇವೆ ಎಂದು ಹೇಳಿದರು.
ಜೀವ ಬೆದರಿಕೆ ಪತ್ರ ಬಂದಿರುವ ಕುರಿತು ಈ ರೀತಿ ಪತ್ರಗಳು ಬರುತ್ತಿರುತ್ತವೆ. ಇದೇನು ಹೊಸದಲ್ಲ. ಯಾರೋ ಒಬ್ಬರು ಪತ್ರ ಬರೆದಿದ್ದಕ್ಕೆ ಜೀವ ಬೆದರಿಕೆ ಎನ್ನಲು ಬರುವುದಿಲ್ಲ. ಆದರೆ, ಸ್ವಾಮೀಜಿಗಳು, ಸಾಹಿತಿಗಳಿಗೆ ಪತ್ರ ಬಂದಿರುವುದನ್ನು ಸರ್ಕಾರ ಗಮನಿಸುತ್ತದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ