*ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಕರ್ನಾಟಕದ ಕೊಡುಗೆ ಅಪಾರ: ಪ್ರೋ ವಿದ್ಯಾಶಂಕರ್ ಎಸ್*

ವಿ ಟಿ ಯುನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸನ್ಮಾನ ಹಾಗೂ ಕನ್ನಡ ಕಾರ್ಯಕ್ರಮ
ವಿಟಿಯುನಲ್ಲಿ ಸ್ವಚ್ಛತಾ ಸಿಬ್ಬಂದಿಗೆ ಸನ್ಮಾನದ ಹೃದಯಸ್ಪರ್ಶಿ ಕಾರ್ಯಕ್ರಮ.
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಬೆಳಗಾವಿಯಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ರಾಜಶ್ರೀ ಹಲಗೆಕರ್, ಪುಂಡಲೀಕ ಶಾಸ್ತ್ರಿ ಮತ್ತು ಸನ್ನಿಂಗಪ್ಪ ಮುಷೆನಗೋಳ ಅವರಿಗೆ ಸನ್ಮಾನಿಸುವ ಮುಖಾಂತರ ವಿ ಟಿ ಯು ಕನ್ನಡ ಹಬ್ಬವನ್ನು ಆಚರಿಸಲಾಯಿತು.
ಸರ್ ಎಂ ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಪುಷ್ಪಾರ್ಪಣೆ ಮೂಲಕ ಸಾಂಕೇತಕವಾಗಿ ಆರಂಭವಾದ ಹಬ್ಬ ನಂತರ ಡೊಳ್ಳು ಕುಣಿತ ಮತ್ತು ವೀರಗಾಸೆ ಕಲಾ ತಂಡಗಳ ಪ್ರದರ್ಶನದೊಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನ ಮುಖ್ಯ ವೇದಿಕೆಗೆ ಕರೆತರಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿ ಟಿ ಯು ಕುಲಪತಿ ಪ್ರೊ ವಿದ್ಯಾಶಂಕರ ಎಸ್ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯಕಾರಿ ಪರಿಷತ್ ಸದಸ್ಯರಾದ ಪ್ರೊ ಎಂ ಎಸ್ ಶಿವಕುಮಾರ್, ಕುಲಸಚಿವರಾದ ಪ್ರೊ ಪ್ರಸಾದ್ ರಾಂಪುರೆ, ಮೌಲ್ಯಮಾಪನ ಕುಲಸಚಿವರಾದ ಪ್ರೊ ಯು ಜೆ ಉಜ್ವಲ್, ವಿದ್ಯಾರ್ಥಿ ಕಲ್ಯಾಣ ವಿಭಾಗದ ಮುಖ್ಯಸ್ಥರಾದ ಪ್ರೊ ಪ್ರಲ್ಹಾದ ರಾಥೋಡ, ವಿ ಟಿ ಯು ಸಿಬ್ಬಂದಿ ಮತ್ತು ಅವರ ಕುಟುಂಬಸ್ಥರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿ ಟಿ ಯು ಕುಲಪತಿ ಪ್ರೊ ವಿದ್ಯಾಶಂಕರ ಎಸ್ ಅವರು
ವಿ ಟಿ ಯು ಸಂಸ್ಕೃತಿಯಂತೆ ಬೆಳಗಾವಿ ಜಿಲ್ಲೆಯ ವತಿಯಿಂದ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಮಹನೀಯರನ್ನ ಸತ್ಕರಿಸುವ ಮೂಲಕ
ವಿ ಟಿ ಯು ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದರು.
ಇಂದು ನಾವೆಲ್ಲರೂ ನಮ್ಮ ಪ್ರೀತಿಯ ಮತ್ತು ಹೆಮ್ಮೆಯ ಕನ್ನಡನಾಡಿನ ಸಾಹಿತ್ಯ, ಸಂಸ್ಕೃತಿ, ಆಧ್ಯಾತ್ಮಿಕತೆ, ಸೃಜನಶೀಲತೆ, ಸಂಸ್ಕೃತಿ ಮತ್ತು ಪ್ರಗತಿಯ ಮಹೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದರು.
ನಮ್ಮೆಲ್ಲರಿಗೂ ಗೊತ್ತಿದೆ 1956ರ ನವೆಂಬರ್ 1ರಂದು ಕರ್ನಾಟಕ ರಾಜ್ಯವು ಪುನರ್ ರಚನೆಯಾಗಿ ಒಂದು ಸಾಂಸ್ಕೃತಿಕ ಮತ್ತು ಭೌಗೋಳಿಕ ಏಕತೆಯ ರೂಪ ಪಡೆದಿತು. ಈ ಏಕತೆ ಕೇವಲ ನಾಡಿನ ಜನರ ಆಶಯವಲ್ಲ, ಅದು ಶ್ರಮ, ಶಿಸ್ತು ಮತ್ತು ಸಂಸ್ಕೃತಿಯ ಸಮನ್ವಯದ ಪ್ರತೀಕವಾಗಿದೆ.
ಕರ್ನಾಟಕವು ಕೇವಲ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ನೆಲವಲ್ಲ, ಇದು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ದೇಶಕ್ಕೆ ದಾರಿ ತೋರಿಸಿರುವ ಅದ್ಭುತ ನೆಲೆಯಾಗಿದೆ ಎಂದು ಹೇಳಿದರು.
ಸರ್ ಎಂ. ವಿಶ್ವೇಶ್ವರಯ್ಯ, ಪ್ರೊ. ಸಿ. ಎನ್. ಆರ್. ರಾವ್, ಇಂಜಿನಿಯರ್ ಎಸ್ ಜಿ ಬಾಳೇಕುಂದ್ರಿ ಹಾಗೂ ಇನ್ನೂ ಅನೇಕ ವಿಜ್ಞಾನಿಗಳು, ಇಂಜಿನಿಯರ್‌ಗಳು ಈ ನಾಡಿನ ಸಂಪತ್ತು ಅವರ ಸ್ಫೂರ್ತಿ ನಮ್ಮ ವಿಶ್ವವಿದ್ಯಾಲಯದ ಪ್ರತಿ ವಿದ್ಯಾರ್ಥಿಯೊಳಗೆ ಜೀವಂತವಾಗಿರುತ್ತದೆ ಎಂದು ಹೇಳಿ ನಾವು ಇತಿಹಾಸವನ್ನು ಗಮನಿಸಿದರೆ ರಾಷ್ಟ್ರದ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು 1998ರಲ್ಲಿ ಸ್ಥಾಪನೆಯಾಗಿ, ಇಂದು ದೇಶದ ಅತಿದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ನಮ್ಮ ವಿಶ್ವವಿದ್ಯಾಲಯವು ಶಿಕ್ಷಣದಲ್ಲಿ ಗುಣಮಟ್ಟ, ಪಾರದರ್ಶಕತೆ, ನವೀನತೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೇಲೆ ನಿಂತಿದೆ.
ಕರ್ನಾಟಕ ರಾಜ್ಯೋತ್ಸವದ ಈ ಪವಿತ್ರ ಸಂದರ್ಭದಲ್ಲಿ, ನಾನು ಎಲ್ಲ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಕೇಳಿಕೊಳ್ಳುವುದೆಂದರೆ ನಾವು ಎಲ್ಲರೂ “ನಮ್ಮ ನಾಡು, ನಮ್ಮ ಭಾಷೆ, ನಮ್ಮ ವಿಶ್ವವಿದ್ಯಾಲಯ” ಎಂಬ ಭಾವದಿಂದ, ಜ್ಞಾನ, ಸಂಶೋಧನೆ ಮತ್ತು ನಿಸ್ವಾರ್ಥ ಸೇವೆಯ ಮೂಲಕ ನಾಡಿನ ಪ್ರಗತಿಗೆ ಕೊಡುಗೆ ನೀಡಬೇಕೆಂದು ವಿನಂತಿಸುತ್ತೇನೆ.
ಕನ್ನಡವೇ ನಮ್ಮ ಆತ್ಮ; ವಿಜ್ಞಾನ ಮತ್ತು ತಂತ್ರಜ್ಞಾನ ನಮ್ಮ ಶಕ್ತಿ. “ಆತ್ಮ ಮತ್ತು ಶಕ್ತಿ” ಎರಡನ್ನು ಒಗ್ಗೂಡಿಸಿ ತಾಂತ್ರಿಕ ಶಿಕ್ಷಣ ಎಂಬ “ಮಾರ್ಗ”ದಿಂದ ಮುಂದಿನ ಪೀಳಿಗೆಗೆ ದೃಢವಾದ ಭವಿಷ್ಯ ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯ.
ಈ ಪವಿತ್ರ ದಿನದಂದು, ನಮ್ಮ ನಾಡಿಗೆ, ನಮ್ಮ ಕನ್ನಡಕ್ಕೆ, ಮತ್ತು ನಮ್ಮ ವಿಶ್ವವಿದ್ಯಾಲಯದ ಪ್ರಗತಿಗೆ ಶ್ರಮಿಸೋಣ ಎಂಬ ಪ್ರತಿಜ್ಞೆ ಕೈಗೊಳ್ಳೋಣ ಎಂದು ಹೇಳಿದರು.
ನಾವೆಲ್ಲರೂ ಸೇರಿ ವಿಶ್ವೇಶ್ವರಯ್ಯರ ಕನಸಿನ ನವೀನ, ನೈತಿಕ ಮತ್ತು ನವ ಕರ್ನಾಟಕವನ್ನು ನಿರ್ಮಿಸೋಣ ಎಂದು ಹೇಳಿ ವಿ ಟಿ ಯು ಆವರಣವು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಅಷ್ಟೇ ಅಲ್ಲದೆ ಅದರ ಸ್ವಚ್ಛತೆ ಇಲ್ಲಿ ಆಗಮಿಸಿದ ರಾಷ್ಟ್ರದ ಪ್ರಮುಖ ವ್ಯಕ್ತಿಗಳ ಗಮನ ಸೆಳೆದಿದೆ ನಮ್ಮ ಆರೋಗ್ಯ ಬದುಕಿಗೆ ಸ್ವಚ್ಛತೆ ಮುಖ್ಯ ಅದನ್ನು ಕಾಪಾಡುವಲ್ಲಿ ನಿಸ್ವಾರ್ಥವಾಗಿ ದುಡಿಯುವ ಕೈಗಳೇ ನಮ್ಮ ಸ್ವಚ್ಛತಾ ಸಿಬ್ಬಂದಿಗಳು ಆ ಕಾರಣ ಇವತ್ತಿನ ಈ ವಿಶೇಷ ಸಂದರ್ಭದಲ್ಲಿ ವಿ ಟಿ ಯುನಲ್ಲಿ ಕೆಲಸ ಮಾಡುತ್ತಿರುವ ಸ್ವಚ್ಛತಾ ಸಿಬ್ಬಂದಿಗಳನ್ನ ಸನ್ಮಾನ ಮಾಡಲಾಗುತ್ತಿದೆ ಹಾಗೂ ಅವರಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸನ್ಮಾನಿತರ ಪರವಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಾಜಶ್ರೀ ಹಲಗೆಕರ್ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಕುಲಸಚಿವರಾದ ಪ್ರೊ ಪ್ರಸಾದ್ ರಾಂಪುರೆ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಮೌಲ್ಯಮಾಪನ ಕುಲಸಚಿವರಾದ ಪ್ರೊ ಯು ಜೆ ಉಜ್ವಲ್ ಅವರು ವಂದಿಸಿದರು.
ಈ ಸಂದರ್ಭದಲ್ಲಿ ವಿ ಟಿ ಯುನ ಎಲ್ಲ ಸ್ವಚ್ಛತಾ ಸಿಬ್ಬಂದಿಯನ್ನ ಸನ್ಮಾನಿಸಲಾಯಿತು. ವಿಟಿಯು ವಿಶೇಷಾಧಿಕಾರಿ ಡಾ ಹರೀಶ್ ಬೆಂಡಿಗೇರಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನ ಪರಿಚಯಿಸಿದರು. ನಂತರ ವಿಟಿಯು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.


