Kannada NewsKarnataka News

ಕರ್ನಾಟಕದ ಹೆಮ್ಮೆಯ ನಾಡಹಬ್ಬ-ಕನ್ನಡ ರಾಜ್ಯೋತ್ಸವ 

ಭಾರಿಸು ಕನ್ನಡ ಡಿಂಡಿಮವ

ಓ ಕರ್ನಾಟಕ ಹೃದಯ ಶಿವ

ಬಾರಿಸು ಕನ್ನಡ ಡಿಂಡಿಮವ

ಸತ್ತಂತಿಹರನು ಬಡಿದೆಚ್ಚರಿಸು

ಕಚ್ಚಾಡುವರನು ಕೂಡಿಸಿ ಒಲಿಸು

ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು

ಒಟ್ಟಿಗೆ ಬಾಳುವ ತೆರದಲಿ ಹರಸು

ಬಾರಿಸು ಕನ್ನಡ ಡಿಂಡಿಮವ ||

ಚೈತ ಶಿವೇತರ ಕೃತಿ ಕೃತಿಯಲ್ಲಿ

ಮೂಡಲಿ ಮಂಗಳ ಮತಿ ಮತಿಯಲ್ಲಿ

ಕವಿ ಋಷಿ ಸಂತರ ಆದರ್ಶದಲಿ

ಸರ್ವೋದಯವಾಗಲಿ ಸರ್ವರಲಿ

ಬಾರಿಸು ಕನ್ನಡ ಡಿಂಡಿಮವ ||

  -ಕುವೆಂಪು.

ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ  ಕನ್ನಡ ಭಾಷೆ -ಮಾತನಾಡುವ ಎಲ್ಲಾ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ರಜಾದಿನವೆಂದು ಘೋಷಣೆ ಮಾಡಲಾಗಿದೆ ಮತ್ತು ವಿಶ್ವದಾದ್ಯಂತ ಕನ್ನಡಿಗರು ಈ ಕನ್ನಡದ ಹಬ್ಬವನ್ನು  ಆಚರಿಸುತ್ತಾರೆ.

ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಕಾರ್ಯಕ್ರಮದ ಜೊತೆಜೊತೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ನಡೆಸಲಾಗುತ್ತದೆ. ವಿಶ್ವದಾದ್ಯಂತ ಕನ್ನಡ ರಾಜ್ಯೋತ್ಸವ ಆಚರಣೆ ಹೆಮ್ಮೆಯಿಂದ ಹಮ್ಮಿಕೊಳ್ಳಲಾಗುತ್ತದೆ.

ಕರ್ನಾಟಕ ರಾಜ್ಯದ ದಕ್ಷಿಣ ಭಾರತದ ಕನ್ನಡ-ಮಾತನಾಡುವ ಪ್ರದೇಶಗಳ ಏಕೀಕರಣ ಮಾಡಿದ ದಿನದ ಸಂಭ್ರಮವೇ ನಾಡಹಬ್ಬ ಕರ್ನಾಟಕ ರಾಜ್ಯೋತ್ಸವ ಆಚರಣೆಯ ಉದ್ಧೇಶ.

ಆಚರಣೆಗಳು:

ನವೆಂಬರ್ ೧ ರಂದು ಅಧಿಕೃತವಾಗಿ ರಾಜ್ಯೋತ್ಸವವು ಆಚರಣೆಯಾಗುತ್ತದೆ. ನವಂಬರ್ ತಿಂಗಳ ಪೂರ್ತಿ ರಾಜ್ಯೋತ್ಸವವನ್ನು ಹಲವು ಕಡೆ ಆಚರಿಸಲಾಗುತ್ತದೆ. ಈ ದಿನಗಳಲ್ಲಿ ಕನ್ನಡ ಧ್ವಜ  ಹಾರಾಡುತ್ತಿರುತ್ತದೆ

ನಾಡಿನಾದ್ಯಂತ ಕರ್ನಾಟಕ ಧ್ವಜಾರೋಹಣ , ಮೆರವಣಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು , ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ,  ಆಟೋರಿಕ್ಷಾಗಳ ಮೇಲೆ ಕನ್ನಡದ ಧ್ವಜ ರಾರಾಜಿಸುತ್ತದೆ. ಕನ್ನಡ ಕವಿಗಳ ನುಡಿ ಗುಚ್ಛಗಳು ಎಲ್ಲೆಂದರಲ್ಲಿ ವಿಜೃಂಭಿಸುತ್ತವೆ. ಕನ್ನಡ ಕುರಿತ ಚರ್ಚೆ ಭಾಷಣಗಳು ಜರಗುತ್ತವೆ.

ಕನ್ನಡ ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯಾದ್ಯಂತ ಮಹದಾನಂದ ಮತ್ತು ಚುರುಕಿನ  ಚಟುವಟಿಕೆಯಿಂದ ಆಚರಿಸಲಾಗುತ್ತದೆ. ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳು ರಾಜ್ಯದ ಎಲ್ಲೆಡೆ ಹಾರಿಸಲ್ಪಡುತ್ತವೆ. ಕನ್ನಡ ನಾಡಗೀತೆ (“ಜಯ ಭಾರತ ಜನನಿಯ ತನುಜಾತೆ”)ಯನ್ನು ಹಾಡಲಾಗುತ್ತದೆ. ಸರ್ಕಾರಿ ಕಚೇರಿ ಮತ್ತು ಹಲವಾರು ಪ್ರಮುಖ ಪ್ರದೇಶಗಳಲ್ಲಿ ವಾಹನಗಳ ಮೇಲೆ ಭುವನೇಶ್ವರಿ ದೇವಿಯ ಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಗುತ್ತದೆ.

ರಾಜ್ಯೋತ್ಸವವನ್ನು ಕರ್ನಾಟಕದಲ್ಲಿರುವ ಬಹುತೇಕ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಧರ್ಮಬೇಧವಿಲ್ಲದೆ ಆಚರಿಸುತ್ತಾರೆ ಹಾಗೂ  ವಾಹನಗಳನ್ನು ಕನ್ನಡ ಧ್ವಜದ ಬಣ್ಣಗಳಾದ ಕೆಂಪು ಮತ್ತು ಹಳದಿ ವರ್ಣಗಳ ಬಾವುಟ ದೊಂದಿಗೆ ಅಲಂಕರಿಸಲಾಗಿರುತ್ತವೆ.

ಕನ್ನಡ ರಾಜ್ಯೋತ್ಸವ ಇತಿಹಾಸ:

ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್, ಕರ್ನಾಟಕ ಏಕೀಕರಣ ಚಳುವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು. ೧೯೫೦ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪು ಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು.

೧೯೫೬ ರ ನವೆಂಬರ್ ೧ ರಂದು, ಮದ್ರಾಸ್, ಮುಂಬಯಿ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪು ಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.

ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕರಡು ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲೆಂದು “ಮೈಸೂರು” ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ಒತ್ತಾಸೆ ಹಾಗೂ ತರ್ಕ ಮಾನ್ಯತೆಗಾಗಿ, ದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ಹೆಸರು ನವೆಂಬರ್ ೧, ೧೯೭೩ ರಂದು “ಕರ್ನಾಟಕ” ಎಂದು ಬದಲಾಯಿತು.

ಕರ್ನಾಟಕ ಏಕೀಕರಣದ ಮನ್ನಣೆ ಅನಕೃ, ಕೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಕೃಷ್ಣರಾವ್ ಮತ್ತು ಬಿ.ಎಂ.ಶ್ರೀಕಂಠಯ್ಯ  ಇತರ ವ್ಯಕ್ತಿಗಳಿಗೂ ಸೇರುತ್ತದೆ.

ಅಲ್ಲಲ್ಲಿ ಚದುರಿದ್ದ ಕನ್ನಡವನ್ನೆಲ್ಲ ಒಂದು ಗೂಡಿಸಿ ಅದಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ದಿನ. ಇಂದಿನ ಕರ್ನಾಟಕ ಮೊದಲಿಗೆ ಮೈಸೂರು ಹೆಸರಿನಿಂದ ಗುರುತಿಸಿಕೊಂಡಿತ್ತು.

ಸ್ವಾತಂತ್ರ್ಯದ ನಂತರ, ಒಡೆಯರ್ ಮಹಾರಾಜ ಭಾರತದ ಭಾಗವಾಗಲು ಸಮ್ಮತಿಸಿದರು. ೧೯೫೦ ರಲ್ಲಿ , ಮೈಸೂರು ಭಾರತದ ರಾಜ್ಯವಾಯಿತು, ಹಾಗು ಪೂರ್ವ ಮಹಾರಾಜ ೧೯೫೭ ರ ವರೆಗೆ ರಾಜ್ಯಪಾಲರಾದರು.

”ಏಕೀಕರಣ” ಚಳುವಳಿ ೧೯ ನೆಯ ಶತಮಾನದ ಎರಡನೇ ಭಾಗದಲ್ಲಿ ಪ್ರಾರಂಭವಾಗಿ ೧೯೫೬  ರಾಜ್ಯ ಪುನರ್ ಸಂಘಟನೆ ಕಾಯಿದೆಯೊಂದಿಗೆ ಮುಕ್ತಾಯವಾಯಿತು, ಇದರಿಂದ ಕೂರ್ಗ್, ಮದ್ರಾಸ್, ಹೈದರಾಬಾದ್, ಹಾಗು ಬಾಂಬೆ ರಾಜ್ಯದ ಭಾಗಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡಿಸಲಾಯಿತು. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಪುನರ್ನಾಮಕರಣ ಮಾಡಲಾಯಿತು.

ಕರ್ನಾಟಕ ರಾಜ್ಯ ರೂಪುಗೊಂಡಾಗ ಒಟ್ಟು ೧೯  ಜಿಲ್ಲೆಗಳನ್ನು ಒಳಗೊಂಡಿತ್ತು. ಅಂದಿನಿಂದ ನವೆಂಬರ್ ೧ ನ್ನು ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.

ಕರ್ನಾಟಕ ಹೆಸರು:

ಕರ್ನಾಟಕ ಪದದ ಮೂಲದಬಗ್ಗೆ ಹಲವು ಅಭಿಪ್ರಾಯಗಳಿದ್ದರೂ ಸಾಮಾನ್ಯವಾಗಿ “ಕರು” ಮತ್ತು “ನಾಡು” ಸೇರಿ “ಎತ್ತರದ ಭೂಮಿ” ಎಂಬರ್ಥದ ಕರುನಾಡು ಪದದಿಂದ ಉಗಮವಾಗಿದೆ ಎನ್ನಲಾಗಿದೆ. ಕರು ಎಂದರೆ ಕಪ್ಪು, ನಾಡು ಎಂದರೆ ಪ್ರದೇಶ ಎಂದು ಅರ್ಥೈಸಿಕೊಂಡರೆ ಬಯಲು ಸೀಮೆಯ ಕಂಡು ಕಪ್ಪು ಹತ್ತಿ ಮಣ್ಣಿನಿಂದಾಗಿ ಹೆಸರು ಬಂದಿದೆ ಎಂದೂ ಹೇಳಲಾಗುತ್ತದೆ. ಕೃಷ್ಣಾ ನದಿಯ ದಕ್ಷಿಣಕ್ಕೆ ಎರಡೂ ಕಡೆ ಜಲಾವೃತವಾದ ಪ್ರದೇಶವಾದ್ದರಿಂದ ಬ್ರಿಟಿಷರ ಕಾಲದಲ್ಲಿ ಕಾರ್ನಾಟಿಕ್ ಅಥವಾ ಕರ್ನಾಟಕ ಹೆಸರು ಬಳಕೆಗೆ ಬಂತು.

ಕನ್ನಡ ಭಾವುಟ:

ಕರ್ನಾಟಕಕ್ಕೆ ತನ್ನದೇ ಆದ ಪ್ರತ್ಯೇಕ ಬಾವುಟವಿದೆ. ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳು ರಾಜ್ಯೋತ್ಸವ ದಿನದಂದು ಕರ್ನಾಟಕ ರಾಜ್ಯಾದ್ಯಂತ ಮಹದಾನಂದ ಮತ್ತು ಚಟುವಟಿಕೆಯಿಂದ ಆಚರಿಸಲಾಗುತ್ತದೆ.

ಕನ್ನಡಕ್ಕೊಂದು ಭಾವುಟ ಅವಶ್ಯಕತೆಯನ್ನು ಮನಗೊಂಡ ಕನ್ನಡದ ಹೋರಾಟಗಾರರಾದ ಎಂ ರಾಮಮೂರ್ತಿಗಳು ಹಳದಿ ಹಾಗೂ ಕೆಂಪು ಬಣ್ಣ ಬಳಸಿ, ಭಾವುಟವನ್ನು ಸಿದ್ದಪಡಿಸಿದರು. ಮೂಲತಃ ಹಳದಿ ಬಣ್ಣವು ಕನ್ನಡಾಂಬೆಯ ಆರಿಶಿನ ಮತ್ತು ಕುಂಕುಮವನ್ನು ಸೂಚಿಸುತ್ತದೆ. ಹಳದಿ ಬಣ್ಣವು ಶಾಂತಿ, ಸೌಹಾರ್ದತೆ ಸೂಚಿಸಿದರೆ ಕೆಂಪು ಬಣ್ಣ ಕ್ರಾಂತಿಯ ಸಂದೇಶ ನೀಡುತ್ತದೆ. ಕನ್ನಡಿಗರೂ ಶಾಂತಿಗೆ ಬದ್ಧ, ಯುದ್ಧಕ್ಕೂ ಸಿದ್ಧ ಎಂಬ ಸಂದೇಶವನ್ನು ನೀಡುತ್ತದೆ .

ಆರಂಭದಲ್ಲಿ ಕನ್ನಡ ಭಾವುಟ ಸಿದ್ಧಗೊಂಡಾಗ ಭಾವುಟದ ಮಧ್ಯೆ ಕರ್ನಾಟಕದ ಭೂಪಟ ಮತ್ತು ಅದರ ನಡುವಿನಲ್ಲಿ ಏಳು ಕವಲುಗಳುಳ್ಳ ತೆನೆಯ ಚಿತ್ರವಿತ್ತು. ಮುದ್ರಿಸಲು ಸ್ವಲ್ಪ ಕಷ್ಟವಾಗುತ್ತಿದ್ದರಿಂದ ಅದನ್ನು ತೆಗೆದು ಕೇವಲ ಹಳದಿ ಮತ್ತು ಕೆಂಪು ಬಣ್ಣವನ್ನು ಮಾತ್ರ ಉಳಿಸಿಕೊಳ್ಳಲಾಯಿತು.

ರಾಜ್ಯೋತ್ಸವ ಆಚರಣೆ:

ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವದ ದಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರಕಟ ಪಡಿಸಲಾಗುತ್ತದೆ. ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾಡು ಹಾಗೂ ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗುತ್ತದೆ.ರಾಜ್ಯದ ವಿವಿಧ ಕ್ಷೇತ್ರಗಳಾದ ಮಾಧ್ಯಮ, ಸಾಹಿತ್ಯ, ಸಂಗೀತ, ಜಾನಪದ, ಸಾಮಾಜಿಕ ಕಾರ್ಯ, ಪರಿಸರ, ಕೃಷಿ ಮುಂತಾದ ಕ್ಷೇತ್ರಗಳ ಸಾಧಕರಿಗೆ ಮುಖ್ಯಮಂತ್ರಿ   ರಾಜ್ಯೋತ್ಸವ ಪ್ರಶಸ್ತಿಗಳನ್ನು ವಿತರಿಸುತ್ತಿದ್ದಾರೆ.

ಭಾರತದ ಇನ್ನಿತರ ಪ್ರದೇಶಗಳಾದ ಮುಂಬಯಿ, ದೆಹಲಿ ಮುಂತಾದ ಕಡೆಯು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಇದಲ್ಲದೆ ಗುರಗಾಂವ್ ಮತ್ತು ಚೆನೈ, ಸಾಗರೋತ್ತರದಲ್ಲಿ ಕನ್ನಡ ಸಂಸ್ಥೆ, ಅಮೇರಿಕಾದ, ಸಿಂಗಾಪುರ್, ದುಬೈ , ಮಸ್ಕಟ್, ದಕ್ಷಿಣ ಕೊರಿಯಾ , ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಮೊದಲಾದ ಕಡೆಗಳಲ್ಲಿ ನೆಲೆಸಿರುವ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾರೆ.

ದೃಢ ಸಂಕಲ್ಪ:

ಕನ್ನಡಿಗರಾದ ನಾವೆಲ್ಲರೂ ನವೆಂಬರ್ ೧ ರಂದು ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸಿ ಸುಮ್ಮನೆ ಕೂತರೆ ಸಾಲದು. ನಿತ್ಯವೂ ಕನ್ನಡ ಅಭಿವೃದ್ಧಿಗೆ ಸತತ ಪ್ರಯತ್ನ ಮತ್ತು ನಮ್ಮ ಆಡಳಿತ, ವ್ಯವಹಾರ, ಸಂವಹನಗಳಲ್ಲಿ ಕನ್ನಡದ ಬಳಕೆ ಯಥೇಚ್ಛವಾಗಿ ನಡೆಯಬೇಕು. ಭಾಷೆ, ನೆಲ, ಜಲ ಜತನವಾಗಿಟ್ಟುಕೊಳ್ಳುವ ಛಲ ನಮ್ಮದಾಗಬೇಕು.ಇಂಗ್ಲಿಷ್ ವ್ಯಾಮೋಹದ ಪ್ರಭಾವಕ್ಕೆ ಒಳಗಾಗಿ ನಮ್ಮತನವನ್ನು ಕಳೆದುಕೊಂಡು ಪರ ಸಂಸ್ಕೃತಿಯ ಮೋಹಕ್ಕೆ ಬಲಿಯಾಗುತ್ತಿರುವುದು ದುರಂತ.

ಕನ್ನಡದ ಅಂಕಿಗಳು ಅವಸಾನದ ಅಂಚಿನಲ್ಲಿರುವುದು ಖೇದಕರ ವಿಷಯ. ಇಂದಿನ ಮಕ್ಕಳಿಗೆ ಕನ್ನಡ ಅಂಕಿಗಳನ್ನು ಕಲಿಸಲಾಗುತ್ತಿಲ್ಲ.ಬಹುಶಃ ಕಲಿಸುವವರಿಗೂ ಅವುಗಳ ಪರಕಲ್ಪನೆ ಇದ್ದಂತಿಲ್ಲ. ಹೀಗಾದರೆ ಕನ್ನಡ ಅಂಕಿ ಸಂಖ್ಯೆಗಳ ಭವಿಷ್ಯ ಅಂತ್ಯಗೊಂಡಂತೆಯೇ ಸರಿ. ಸರಕಾರ ಕನ್ನಡ ಅಂಕಿಗಳ ಬಳಕೆಗೆ ಕಡ್ಡಾಯ ಕಾನೂನು ತಂದು ಜಾರಿಗೊಳಿಸುವುದು ಇಂದಿನ ಆದ್ಯತೆ.

ಕನ್ನಡ ಉಳಿಸಲು, ಕನ್ನಡ ಬೆಳೆಸಲು ನಾವಿಂದು ದೃಢ ಸಂಕಲ್ಪ ಮಾಡಿದರೆ ಆಗ ಮಾತ್ರ ಕನ್ನಡ ರಾಜ್ಯೋತ್ಸವ ಸಾರ್ಥಕತೆ ಪಡೆಯಲು ಸಾಧ್ಯ.

-ಈಶ್ವರ ಜಿ.ಸಂಪಗಾವಿ, ಕಕ್ಕೇರಿ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button