Kannada NewsKarnataka NewsLatestPolitics

*ಉಡುಪಿಯಲ್ಲಿ ಮಳೆ ಅನಾಹುತದಲ್ಲಿ 7 ಜನ ಸಾವು; ಕುಟುಂಬದವರನ್ನು ಭೇಟಿಯಾಗಿ, ಪರಿಹಾರದ ಚೆಕ್ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*

ಪ್ರಗತಿವಾಹಿನಿ ಸುದ್ದಿ; ಉಡುಪಿ: ಮಳೆ ಅವಾಂತರದಿಂದಾಗಿ ಸಂಭವಿಸಿದ ಅನಾಹುತದಲ್ಲಿ ಈವರೆಗೆ ಉಡುಪಿ ಜಿಲ್ಲೆಯಲ್ಲಿ 7 ಜನರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಳೆ ಅವಾಂತರದಲ್ಲಿ ಸಾವನ್ನಪ್ಪಿದ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಅಲ್ಲದೇ ಪರಿಹಾರದ ಚಕ್ ವಿತರಿಸಿದರು.

ಬೆಲ್ಮನ್ ನಲ್ಲಿ ಮರ ಬಿದ್ದು ಸಾವಿಗೀಡಾದ್ದ ಬೈಕ್ ಸವಾರ ಮಂಜುನಾಥ್ ಪ್ರವೀಣ್ ಆಚಾರ್ಯ ಅವರ ಕುಟುಂಬದವರಿಗೆ ಚೆಕ್ ವಿತರಿಸಿದರು.

ಇನ್ನು ಪಡುಬಿದ್ರೆ ಸೇರಿದಂತೆ ಹಲವೆಡೆ ಮಳೆ ಹಾನಿ, ಕಡಲ್ಕೊರೆತದಿಂದ ಹಾನಿಯಾದ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಮ್ದ 7 ಜನರು ಸಾವನ್ನಪ್ಪಿದ್ದಾರೆ. ಹಲವೆಡೆ ಮನೆ ಕುಸಿತವಾಗಿದೆ, ಕಡಲ್ಕೊರೆತವುಂಟಾಗಿದೆ. ಮನೆ ಹಾನಿ ಬಗ್ಗೆ ಪರಿಶೀಲಿಸಿ ಪರಿಹಾರ ವಿತರಣೆಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜೀವಹಾನಿಯಾದ ಕುಟುಂಬಗಳಿಗೆ 24 ಗಂಟೆಯಲ್ಲಿ 5 ಲಕ್ಷ ಪರಿಹಾರ ಒದಗಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಕಡಲ ಕೊರೆತ ತಡೆಗೆ ಶಾಶ್ವತ ಪರಿಹಾರ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್.

ಜಿಲ್ಲೆಯಲ್ಲಿ ಪ್ರತಿವರ್ಷ ಸಂಭವಿಸುವ ಕಡಲ ಕೊರೆತ ತಡೆಗೆ ತಮ್ಮ ಅವಧಿಯಲ್ಲಿ ಶಾಶ್ವತ ಪರಿಹಾರವನ್ನು ಕೈಗೊಳ್ಳಲು ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

ಅವರು ಇಂದು ಪಡುಬಿದ್ರೆಯ ಕಾಡಿ ಪಟ್ಣದಲ್ಲಿ , ಸಮುದ್ರ ಕೊರೆತ ಪ್ರದೇಶ ವೀಕ್ಷಿಸಿ ಮಾತನಾಡಿದರು .

ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಸಮುದ್ರ ಕೊರೆತ ಸಂಭವಿಸುತ್ತಿರುವುದು ಸಾಮಾನ್ಯವಾಗಿದ್ದು ಈ ಬಗ್ಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಶಾಶ್ವತ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ ಈ ಬಾರಿ ತಡವಾಗಿ ಮಳೆ ಆರಂಭಗೊಂಡಿದ್ದರು ಸಹ ಪ್ರಾಕೃತಿಕ ವಿಕೋಪದಿಂದ ಇದುವರೆಗೆ ಏಳು ಮಂದಿ ಮೃತಪಟ್ಟಿದ್ದು ಇವರ ಕುಟುಂಬದವರಿಗೆ ತಲಾ ರೂ. ಐದು ಲಕ್ಷಗಳ ಪರಿಹಾರವನ್ನು ವಿತರಿಸಲಾಗಿದೆ ಜಿಲ್ಲೆಯಲ್ಲಿ ಮಳೆಯಿಂದ ಜೀವ ಹಾನಿ ಸಂಭವಿಸದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಮಳೆಯಿಂದ ಮಾನವ ಜೀವ ಹಾನಿ,ಮನೆ ಹಾನಿ, ಜಾನುವಾರು ಹಾನಿಗೆ ಸಂಬಂಧಿಸಿದಂತೆ ತಕ್ಷಣವೇ ಸೂಕ್ತ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು ಜಿಲ್ಲೆಯಲ್ಲಿ ಕಾಲು ಸಂಕ ಗಳ ನಿರ್ಮಾಣ ಮತ್ತು ಕಿಂಡಿ ಅಣೆಕಟ್ಟು ನಿರ್ಮಾಣದ ಬಗ್ಗೆ ಮಾಹಿತಿ ಪಡೆದು ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿ.ಪಂ. ಸಿಇಓ ಪ್ರಸನ್ನ ಹೆಚ್, ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ, ತಹಸೀಲ್ದಾರ್ ಶ್ರೀನಿವಾಸ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button