Latest

ಪ್ರಧಾನಿ ಮೋದಿ ಅವರನ್ನು ಗುರುಕುಲ ಶತಮಾನೋತ್ಸವಕ್ಕೆ ಆಹ್ವಾನಿಸಿದ ಕಾಶಿ ಜಗದ್ಗುರು

ಪ್ರಗತಿವಾಹಿನಿ ಸುದ್ದಿ, ನವದೆಹಲಿ : ಕಾಶಿ ಪೀಠದಲ್ಲಿ ನಡೆಯುವ ಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಆಹ್ವಾನಿಸಿದ್ದಾರೆ.
ದೆಹಲಿಯ  ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ತೆರಳಿದ ಸ್ವಾಮಿಗಳು ಮೋದಿಗೆ ಅಧಿಕೃತ ಆಹ್ವಾನ ನೀಡಿದರು. 2020ರ ಜನವರಿ-ಫೆಬ್ರುವರಿಯಲ್ಲಿ ಶತಮಾನೋತ್ಸವ ನಡೆಯಲಿದೆ.
 ಕಾಶಿ ಜಗದ್ಗುರುಗಳು ಶ್ರೀಸಿದ್ಧಾಂತ ಶಿಖಾಮಣಿಯ ಗುಜರಾತಿ ಗ್ರಂಥ ಹಾಗೂ ವಿಶೇಷ ರುದ್ರಾಕ್ಷಿ ಮಾಲೆಯನ್ನು ನೀಡಿ ಪ್ರಧಾನಿ ಮೋದಿಯವರನ್ನ ಆಶೀರ್ವದಿಸಿದರು.
 ಪಂಚಪೀಠಗಳ ಪರಂಪರೆ ಮತ್ತು ಕಾಶಿ ಪೀಠದ ಇತಿಹಾಸ ಹಾಗೂ ಶ್ರೀಸಿದ್ಧಾಂತ ಶಿಖಾಮಣಿ ಧರ್ಮಗ್ರಂಥದ ಕುರಿತು ಜಗದ್ಗುರುಗಳು ಪ್ರಧಾನಿ ಮೋದಿಗೆ ವಿವರಿಸಿದರು. ಸಮಾರಂಭಕ್ಕೆ ಆಗಮಿಸುವುದಾಗಿಯೂ, 19 ಭಾಷೆಗಳಿಗೆ ಭಾಷಾಂತರವಾಗಿರುವ ಶ್ರೀಸಿದ್ಧಾಂತ ಶಿಖಾಮಣಿಯನ್ನು  ಲೋಕಾರ್ಪಣೆ ಮಾಡುವುದಾಗಿ ಪ್ರಧಾನಿ ತಿಳಿಸಿದರು.
ತಾವು ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿರುವ  ಕಾಶಿ ಪೀಠದ ಜಗದ್ಗುರುಗಳು ತಮ್ಮ ಕಚೇರಿಗೆ  ಆಗಮಿಸುವ ಮೂಲಕ ತಮ್ಮ ಕಚೇರಿಯನ್ನು ಪಾವನಗೊಳಿಸಿದ್ದಾರೆ ಎಂದು ಈ ವೇಳೆ  ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಈ ಸಂದರ್ಭದಲ್ಲಿ ಕಾನೂನು ಮತ್ತು ಸಂಸದೀಯ ಸಚಿವ ಪ್ರಹ್ಲಾದ ಜೋಷಿ, ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮತ್ತು ಸೊಲ್ಲಾಪುರ ಸಂಸದರಾದ ಶ್ರೀ ಡಾ.ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button