Latest

ಕಾಶಿ ಜಗದ್ಗುರು ಪೀಠದಿಂದ ಪಿ.ಎಂ. ಕೇರ್ಸ್ ಫಂಡ್‌ಗೆ 5 ಲಕ್ಷ ರೂ. ದೇಣಿಗೆ

ಪ್ರಗತಿವಾಹಿನಿ ಸುದ್ದಿ; ಧಾರವಾಡ : ಕೋವಿಡ್-19 ನಿಯಂತ್ರಣದ ವ್ಯಾಕ್ಸಿನೇಷನ್ ನಿರ್ವಹಣೆಗಾಗಿಯೇ ವೀರಶೈವ ಧರ್ಮದ ಸನಾತನ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜಗದ್ಗುರು ಪೀಠದಿಂದ ಪ್ರಧಾನಮಂತ್ರಿಗಳ ಕೇರ್ಸ್ ಫಂಡಿಗೆ 5 ಲಕ್ಷ ರೂ.ಗಳ ದೇಣಿಗೆಯನ್ನು ವಾರಣಾಸಿಯ ವಿಭಾಗಾಧಿಕಾರಿಗಳ ಮೂಲಕ ಸಮರ್ಪಿಸಲಾಯಿತು.

ವಾರಣಾಸಿ ವಿಭಾಗಾಧಿಕಾರಿ ದೀಪಕ್ ಅಗ್ರವಾಲ್ ಅವರಿಗೆ ಪ್ರಧಾನ ಮಂತ್ರಿಗಳ ಹೆಸರಿನ 5 ಲಕ್ಷ ರೂ.ಗಳ ಚೆಕ್ ನೀಡಿ ಮಾತನಾಡಿದ ಕಾಶಿ ಜ್ಞಾನ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ದೇಶದ ಜನಮನವನ್ನು ತಲ್ಲಣಗೊಳಿಸಿರುವ ಕರೋನಾದಿಂದ ಆಗಿರುವ ಸಾವು-ನೋವುಗಳ ಸಂಖ್ಯೆ ಅಧಿಕಗೊಂಡು ಜನರು ಭಯಭೀತಗೊಂಡಿದ್ದಾರೆ. ಸರ್ವರನ್ನು ರಕ್ಷಿಸುವ ವೈದ್ಯಕೀಯ ಸಂಶೋಧನೆಯ ವೈಜ್ಞಾನಿಕ ರಕ್ಷಾಕವಚ ಅಂದರೆ ಅದು ಕೋವಿಡ್-19 ವಿರುದ್ಧದ ವ್ಯಾಕ್ಸಿನೇಷನ್ ಮಾತ್ರ. ಭಾರತೀಯ ವಿಜ್ಞಾನಿಗಳು ಮತ್ತು ವೈದ್ಯರ ತಂಡಗಳು ಸತತ ಪರಿಶ್ರಮವಹಿಸಿ ‘ಕೋವಿಶೀಲ್ಡ್’ ಮತ್ತು ‘ಕೋವ್ಯಾಕ್ಸಿನ್’ ಲಸಿಕೆಯನ್ನು ಜನರ ಜೀವ ರಕ್ಷಣೆಗಾಗಿ ಒದಗಿಸಿದ್ದಾರೆ. ಪ್ರಸ್ತುತ ಧಾರವಾಡದಲ್ಲಿ ರಷ್ಯಾ ಮೂಲದ ವೈದ್ಯಕೀಯ ಚಿಂತನೆಯ ಸಹಯೋಗದಲ್ಲಿ ‘ಸ್ಪುಟ್ನಿಕ್ ಲಸಿಕೆ’ಯೂ ಕೋವಿಡ್-19 ನಿಯಂತ್ರಣಕ್ಕೆ ಸಿದ್ಧಗೊಳ್ಳುತ್ತಿದೆ ಎಂದರು.

‘ಕೋವಿಶೀಲ್ಡ್’, ‘ಕೋವ್ಯಾಕ್ಸಿನ್’ ಮತ್ತು ‘ಸ್ಪುಟ್ನಿಕ್ ಲಸಿಕೆ’ಯ ರಕ್ಷಾಕವಚವು ಭಾರತೀಯರಿಗೆ ದೊರೆಯಲೆಂಬ ಉದ್ದೇಶದಿಂದ ಕಾಶಿ ಜಗದ್ಗುರು ಪೀಠವು ತನ್ನ ಪಾಲಿನ ದೇಣಿಗೆಯನ್ನು ಪ್ರಧಾನಮಂತ್ರಿಗಳ ಫಂಡಿಗೆ ಕೊಡಮಾಡಿದೆ. ಈ ವ್ಯಾಕ್ಸಿನೇಷನ್ ಬಗ್ಗೆ ಅಲಕ್ಷ್ಯ ವಹಿಸದೇ ವಿಜ್ಞಾನಿಗಳ ಹಾಗೂ ವೈದ್ಯರ ಮೇಲೆ ವಿಶ್ವಾಸವನ್ನಿಟ್ಟು ಕೊರೋನಾ ನಿಯಂತ್ರಣದ ರಕ್ಷಾಕವಚವಾದ ವ್ಯಾಕ್ಸಿನೇಷನ್‌ಗೆ ಭಾರತೀಯರು ಮುಂದಾಗಬೇಕೆಂದು ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಜಗದ್ಗುರುಗಳು ಕರೆ ನೀಡಿದರು.

ರವಿವಾರ ಕಾಶಿ ಪೀಠದಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಪಿ.ಎಂ. ಕೇರ್ಸ ಫಂಡಿನ 5 ಲಕ್ಷ ರೂ.ಗಳ ಚೆಕ್ ಸ್ವೀಕರಿಸಿ ಮಾತನಾಡಿದ ವಾರಣಾಸಿ ಕಂದಾಯ ಇಲಾಖೆಯ ವಿಭಾಗೀಯ ಕಮಿಷನರ್ ದೀಪಕ್ ಅಗ್ರವಾಲ್, ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜಗದ್ಗುರು ಪೀಠವು ಈಗಾಗಲೇ ಮಹಾರಾಷ್ಟ್ರದ ಮಂಗಳವೆಡಾದಲ್ಲಿ 300 ಹಾಸಿಗೆಗಳ ಕರೋನಾ ಸುಶ್ರೂಷಾ ಕೇಂದ್ರವನ್ನು ತೆರೆಯುವ ಜೊತೆಗೆ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಕೊರೋನಾದಿಂದ ಅನಾಥರಾದ ಮಕ್ಕಳಿಗೆ ಉಚಿತ ಆಶ್ರಯ, ಊಟ ಹಾಗೂ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತಿರುವ ವಿಷಯ ನಿಜಕ್ಕೂ ಆದರ್ಶ ಪ್ರಾಯವಾದ ಸಾಮಾಜಿಕ ಸೇವೆ ಎಂದು ಪ್ರಶಂಶಿಸಿದರು.

ಇದೇ ಸಂದರ್ಭದಲ್ಲಿ ಕಾಶಿ ಜಗದ್ಗುರು ಪೀಠದಿಂದ ವಾರಣಾಸಿಯ ವಿಭಾಗಾಧಿಕಾರಿ ದೀಪಕ್ ಅಗ್ರವಾಲ್ ಅವರನ್ನು ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಜಗದ್ಗುರುಗಳು ಶಾಲು ಹೊದಿಸಿ ಸನ್ಮಾನಿಸಿದರು. ಕಾಶಿ ವೀರಶೈವ ವಿದ್ವತ್ ಸಂಘದ ಎಲ್ಲ ವಿದ್ಯಾರ್ಥಿಗಳು, ಮಠದ ವ್ಯವಸ್ಥಾಪಕರಾದ ನಲಿನೀ ಚಿರಮೆ ಮತ್ತು ಶಿವಾನಂದ ಹಿರೇಮಠ, ಶ್ರೀಪೀಠದ ಅಧಿಕೃತ ವಕ್ತಾರ ಉದಯಭಾನಸಿಂಗ್ ಸೇರಿದಂತೆ ಇತರರು ಇದ್ದರು.
ಸಿಎಂ ವಿರುದ್ಧ ಸಚಿವ ಎಂಟಿಬಿ ಅಸಮಾಧಾನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button