Latest

ಲಿಂಗಧಾರಣೆಯಿಂದ ದೇಹವೇ ದೇವಾಲಯ: ಶ್ರೀ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿ

ಪ್ರಗತಿವಾಹಿನಿ ಸುದ್ದಿ, ಪನಪೆಟ್ಟಿ,ಭರಣಿಕ್ಕಾವು ಕೊಲ್ಲಂ(ಕೇರಳ): ದೇಹದ ಮೇಲೆ ಇಷ್ಟ ಲಿಂಗವನ್ನು ಧರಿಸಿರುವ ದೇಹವು ದೇವಾಲಯದಷ್ಟು ಪವಿತ್ರವಾಗುತ್ತದೆ. ಎಂದು  ಶ್ರೀ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಅವರು, ಕೇರಳದ ರಾಜ್ಯದ ಕೊಲ್ಲಂ ಜಿಲ್ಲೆಯಲ್ಲಿರುವ ಭರಣಿಕ್ಕಾವು ಪನಪೆಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡು ಕಾಶಿ ಪೀಠದ ಶಾಖಾಮಠವಾದ ಕೇರಳ ವೀರಶೈವ ಮಠ, ಕಾಶಿ ಜಂಗಮವಾಡಿಮಠದಲ್ಲಿ ವಿಶ್ವನಾಥ ಮಹಾಲಿಂಗದ ಪ್ರಾಣ ಪ್ರತಿಷ್ಠಾಪನೆ ಹಾಗೂ ಇಷ್ಟಲಿಂಗ ದೀಕ್ಷಾ ಸಮಾರಂಭದ ಸಾನ್ನಿಧ್ಯ ವಹಿಸಿ  ಆಶೀರ್ವಚನ  ನೀಡಿದರು.

ಭೂಮಿಯ ಮೇಲೆ ಶಿವಲಿಂಗ ಪ್ರತಿಷ್ಠಾಪಿಸಿದರೆ ಆ ಭೂಮಿ ಒಂದು ಪವಿತ್ರವಾದ ಕ್ಷೇತ್ರ ವಾಗುವಂತೆ ದೇಹದ ಮೇಲೆ ಇಷ್ಟ ಲಿಂಗವನ್ನು ಧರಿಸಿದರೆ ಪ್ರತಿಯೊಬ್ಬರ ದೇಹವೂ ಒಂದು ಪವಿತ್ರವಾದ ದೇವಾಲಯವಾಗಿ ಪರಿಣಮಿಸುತ್ತದೆ. ಅಂತೆಯೇ ಸನಾತನ ವೀರಶೈವ ಧರ್ಮದ ಸಂಸ್ಥಾಪಕರಾದ ಶ್ರೀ ಜಗದ್ಗುರು ಪಂಚಾಚಾರ್ಯರು ಭೂಲೋಕದಲ್ಲಿ ಯುಗಯುಗಳಲ್ಲಿ ಅವತರಿಸಿ ಸಮಸ್ತ ದೇವ, ದಾನವ ಮತ್ತು ಮಾನವರಿಗೆ ದೀಕ್ಷೆಯನ್ನು ಮಾಡಿ ಇಷ್ಟಲಿಂಗವನ್ನು ಧರಿಸುವುದರ ಮೂಲಕ ಸರ್ವರಿಗೂ ಸಮಾನತೆ ಹಕ್ಕನ್ನು ದಯಪಾಲಿಸಿದ್ದಾರೆ ಎಂದರು.

ಇಷ್ಟಲಿಂಗ ಧಾರಣೆಗೆ ವರ್ಣಾಶ್ರಮಗಳ, ಸ್ತ್ರೀ ಪುರುಷರ ಭೇದ ಭಾವವಿರುವುದಿಲ್ಲ. ಎಲ್ಲ ವರ್ಣಗಳ, ಎಲ್ಲ ಆಶ್ರಮಗಳ, ಎಲ್ಲ ದೇಶಗಳ ಜನರು ಅಪೇಕ್ಷೆ ಪಟ್ಟರೆ ಅವರಿಗೆ ವಿಧಿವತ್ತಾಗಿ ದೀಕ್ಷಾ ಸಂಸ್ಕಾರವನ್ನು ಕೊಟ್ಟು ಲಿಂಗ ದೀಕ್ಷೆಯನ್ನು ಮಾಡಿ ಇದೇ ಜನ್ಮದಲ್ಲಿ ಶಿವಯೋಗ ಸಾಧನೆಯಿಂದ ಶಿವ ಸ್ವರೂಪನಾಗುವ ಸದವಕಾಶವನ್ನು ವೀರಶೈವ ಧರ್ಮದಲ್ಲಿ ಅನುಗ್ರಹಿಸಲಾಗಿದೆ.
ಕೇರಳ ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವರಿದ್ದು ಇಲ್ಲಿವರೆಗೆ ಅವರಿಗೆಲ್ಲ ಮಾರ್ಗದರ್ಶನ ಮಾಡಲು ಒಂದು ಮಠವಿರಲಿಲ್ಲ ಆದರೆ  ಸುನೀ ತ್ ಮತ್ತು ರೇವೇಂದ್ರ ಅವರು ಶ್ರೀ ವೀರಶೈವ ಬಸವೇಶ್ವರ ವೆಲ್ಫೇರ್ ಚಾರಿಟೇಬಲ್   ಟ್ರಸ್ಟ್ ಸ್ಥಾಪಿಸಿ ಕೇರಳದ ಕೊಲ್ಲಂ ಜಿಲ್ಲೆಯ ಭರಣಿಕ್ಕಾವು ಪನಪೆಟ್ಟಿಯಲ್ಲಿ ಮೂರುವರೆ ಎಕರೆ ಜಮೀನು ಖರೀದಿಸಿ 50 ಜನ ಸದ್ಭಕ್ತರಿಂದ 3 ಕೋಟಿ ರೂ. ದೇಣಿಗೆ ಸಂಗ್ರಹಿಸುವುದರ ಜೊತೆಗೆ ಕೇರಳ ಸರ್ಕಾರದಿಂದ ಒಂದು ಕೋಟಿ 80 ಲಕ್ಷ ರೂ. ಅನುದಾನ ಪಡೆದು ಇಲ್ಲಿ ಸಾರ್ವಜನಿಕರಿಗಾಗಿ  ಮಠ ನಿರ್ಮಿಸಿದ್ದಾರೆ.

ಅಲ್ಲಿ ಕಾಶಿ ವಿಶ್ವೇಶ್ವರ ಶಿವಲಿಂಗವನ್ನು ಪ್ರತಿಷ್ಠಾಪಿಸುವುದರ ಜೊತೆಗೆ ಕೇರಳದ ಸಮಸ್ತ ಮನುಕುಲದ ಉದ್ಧಾರಕ್ಕಾಗಿ ಇಂದು ಶಿವದೀಕ್ಷಾ ಸಮಾರಂಭವನ್ನು ಹಮ್ಮಿಕೊಂಡಿರುವುದು ಅತ್ಯಂತ ಸಂತೋಷ ತಂದಿದೆ  ಎಂದು ಶ್ರೀಗಳು ಹೇಳಿದರು.

ಶ್ರೀ ಗಳ ಹಿಂದಿ ಭಾಷೆಯ ಆಶೀರ್ವಚನವನ್ನು  ಅರುಣ ಅಪ್ಪುಕುಟ್ಟನ್ ಅವರು ಮಲಯಾಳಂ ಭಾಷೆಗೆ ಅನುವಾದಿಸಿದರು.   ಬೆಂಗಳೂರು ವಿಭೂತಿಪುರ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು   ವೀರಶೈವ ಧರ್ಮ, ಪಂಚಪೀಠಗಳು ಹಾಗೂ ಮಹಾತ್ಮ ಬಸವೇಶ್ವರ ಬಗ್ಗೆ   ವಿವರಿಸಿದರು.

ಈ ಸಭೆಯಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಕೆರೂರ ಚರಂತಿಮಠದ ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು, ಗುಳೇದಗುಡ್ಡ ಅಮರೇಶ್ವರ ಮಠದ ಶ್ರೀ ಡಾ. ನೀಲಕಂಠ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು.

ಮಾತಿಗೆ ಮಾತು ಬೆಳೆದು ಬಸ್ ಕಂಟ್ರೋಲರ್ ಮೇಲೆ ಹಲ್ಲೆ; ಆರೋಪಿ ಪೊಲೀಸ್ ವಶಕ್ಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button