ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಜಿಲ್ಲೆಯಲ್ಲಿ ಈಗಾಗಲೇ ಅನುಮತಿ ನೀಡಲಾಗಿರುವ ಎಂ.ಸ್ಯಾಂಡ್ ಘಟಕಗಳನ್ನು ಆದಷ್ಟು ಬೇಗನೇ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಜು.೨) ನಡೆದ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಂ.ಸ್ಯಾಂಡ್ ಗುಣಮಟ್ಟದ ಬಗ್ಗೆ ನಿರಂತರ ಪರಿಶೀಲನೆ ಕೈಗೊಳ್ಳಬೇಕು. ಅದೇ ರೀತಿ ಘಟಕಗಳು ಪ್ರತಿ ತಿಂಗಳು ಸ್ವಯಂಪ್ರೇರಣೆಯಿಂದ ತಮ್ಮ ಉತ್ಪಾನೆಯ ಗುಣಮಟ್ಟವನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಘಟಕಗಳಿಗೆ ಸೂಚನೆ ನೀಡುವಂತೆ ಸಚಿವರು ತಿಳಿಸಿದರು. ಅಕ್ರಮ ಸಾಗಾಣಿಕೆ ತಡೆಗಟ್ಟಲು ಎಲ್ಲ ಮಾರ್ಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ತಿಳಿಸಿದರು.
ಕ್ರಷರ್ ೬೭ ನವೀಕರಣಕ್ಕೆ ಅರ್ಜಿ ಬಂದಿವೆ. ೬೧ ಅರ್ಜಿ ವಿಲೇವಾರಿ ಬಾಕಿ ಉಳಿದಿವೆ. ಒಂದು ತಿರಸ್ಕೃತಗೊಂಡಿದ್ದು, ಒಂದು ಘಟಕಕ್ಕೆ ಅನುಮತಿ ನೀಡಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕರು ವಿವರಣೆ ನೀಡಿದರು.
ಎಂ.ಸ್ಯಾಂಡ್ ೪೮ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಕೇಬಲ ಎಂ.ಸ್ಯಾಂಡ್ ತಯಾರಿಗೆ ಮಾತ್ರ ಎಂಟು ಘಟಕ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.
೨೭ ಘಟಕಗಳ ಆರಂಭಕ್ಕೆ ಮರು ಟೆಂಡರ್ ಮಾಡುವ ಅಗತ್ಯವಿದೆ. ತಕ್ಷಣವೇ ಮರು ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೂಚನೆ ನೀಡಿದರು. ಕ್ರಷರ್ ಮತ್ತು ಕ್ವಾರಿಗಳ ಸುತ್ತಮುತ್ತಲೂ ಸಸಿಗಳನ್ನು ನೆಡಲು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮುಂದಾಗಬೇಕು ಎಂದರು.
ಉತ್ಪಾದನೆ ಮೇಲೆ ನಿಗಾ ವಹಿಸಲು ಸೂಚನೆ:
ಅನುಮತಿ ಪಡೆದೂ ಎಂ.ಸ್ಯಾಂಡ್ ಉತ್ಪಾದನೆ ಆರಂಭಿಸದ ೯ ಘಟಕಗಳಿಗೆ ನೋಟಿಸ್ ನೀಡಬೇಕು. ಕ್ವಾರಿ ಮತ್ತು ಕ್ರಷರ್ ಸೇರಿದಂತೆ ವಿವಿಧ ಘಟಕಗಳಿಗೆ ನಿಗದಿಪಡಿಸಿದ ಪ್ರಮಾಣದಲ್ಲಿಯೇ ಉತ್ಪಾದನೆ ಮಾಡಲಾಗುತ್ತಿದೆಯೇ ಎಂಬುದರ ಮೇಲೆ ನಿರಂತರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.
ನೋಟಿಸ್ ನೀಡಲು ಸೂಚನೆ:
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಜಮೀನು ಪಡೆದುಕೊಂಡು ಇದುವರೆಗೂ ಕೈಗಾರಿಕೆ ಆರಂಭಿಸದಿರುವವರಿಗೆ ನೋಟಿಸ್ ನೀಡುವಂತೆ ಸಭೆಯಲ್ಲಿ ತಿಳಿಸಲಾಯಿತು. ಕಿತ್ತೂರು ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ಸಚಿವರು ಸಲಹೆ ನೀಡಿದರು.
ನಿಗದಿತ ಪ್ರದೇಶದಲ್ಲಿ ಕೈಗಾರಿಕಾ ಸ್ಥಾಪನೆಗೆ ಯಾರಾದರೂ ಮುಂದೆ ಬಂದರೆ ಮಾತ್ರ ಜಮೀನು ಗುರುತಿಸಿ ಅವರಿಗೆ ಹಸ್ತಾಂತರಿಸಬೇಕು. ನಿರ್ದಿಷ್ಟ ಉದ್ದೇಶವಿಲ್ಲದೇ ಸಾವಿರಾರು ಎಕರೆ ಬ್ಲಾಕ್ ಮಾಡದಂತೆ ತಿಳಿಸಿದರು. ಜಿಲ್ಲೆಯ ನೇಸರಗಿ ಭಾಗದಲ್ಲಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅಧಿಕಾರಿಗಳು ಮುಂದಾಗಬೇಕು. ೨೨೦ ಕೆ.ವಿ. ವಿದ್ಯುತ್ ಸ್ಟೇಷನ್ ಸ್ಥಾಪನೆಗೆ ಅಗತ್ಯವಿರುವ ಜಮೀನನ್ನು ಗುರುತಿಸಿ, ಅದನ್ನು ವಿದ್ಯುತ್ ಇಲಾಖೆಗೆ ಒದಗಿಸುವಂತೆ ಸಚಿವರು ತಿಳಿಸಿದರು.
ಮಾಲಿನ್ಯ ನಿಯಂತ್ರಣ ಮಂಡಳಿ:
ವಿವಿಧ ಕಾರ್ಖಾನೆಗಳಿಂದ ೬೬೪೦ ಮಾದರಿಗಳನ್ನು ಹಾಗೂ ನದಿ ನೀರು ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಗೋಪಾಲಕೃಷ್ಣ ವಿವರಣೆ ನೀಡಿದರು.
ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ಬಗೆಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಚಿಕ್ಕೋಡಿ ಪ್ರಾದೇಶಿಕ ಕಚೇರಿಯ ಅಧಿಕಾರಿ ಜಗದೀಶ್ ಮಾತನಾಡಿ, ೩೨೫ ಉದ್ಯಮಗಳಿದ್ದು, ಸೂಕ್ತ ಕಾರ್ಯನಿರ್ವಹಣೆಗೆ ಸಿಬ್ಬಂದಿ ಕೊರತೆಯಿಂದ ಅನಾನುಕೂಲವಾಗುತ್ತಿದೆ ಎಂದರು.
ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಸಲಹೆ:
ಬೆಳಗಾವಿ ನಗರ ಬೆಳೆಯುತ್ತಿರುವುದರಿಂದ ಮತ್ತೊಂದು ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಯ ಅಗತ್ಯವಿದ್ದು, ಈ ಬಗ್ಗೆ ಪ್ರಸ್ತಾವ ತಯಾರಿಸುವಂತೆ ಸಚಿವ ಸತೀಶ್ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಬೆಳಗಾವಿ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಸ್ಥಾಪನೆ ಮಾಡುವುದರಿಂದ ತ್ಯಾಜ್ಯ ಸಾಗಾಣಿಕೆಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸವದತ್ತಿ ಮತ್ತು ಬೆಳಗಾವಿಯಲ್ಲಿರುವ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಘಟಕಗಳ ಸಮರ್ಪಕ ನಿರ್ವಣೆಗಾಗಿ ಏರಿಯಾ ಹಂಚಿಕೆ ಮಾಡುವಂತೆ ತಿಳಿಸಿದರು.
ಈ ರೀತಿಯ ಇನ್ನೊಂದು ಘಟಕ ಸ್ಥಾಪಿಸುವ ಬಗ್ಗೆ ಪರಿಶೀಲಿಸುವಂತೆ ನಿರ್ದೇಶನ ನೀಡಿದರು. ಜಿಲ್ಲೆಯ ಕೈಗಾರಿಕಾ ಕೇಂದ್ರಗಳಿಂದ ಹೊರಹೋಗುವ ಮಲೀನ ನೀರು ನೇರವಾಗಿ ನದಿ ಸೇರಿದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಪ್ಲಾಸ್ಟಿಕ್ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡದಿರುವ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಪರಿಸರ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ನೋಟಿಸ್‌ಗೆ ಸರಿಯಾಗಿ ಸ್ಪಂದಿಸದಿದ್ದರೆ ಪ್ರಕರಣ ದಾಖಲಿಸುವಂತೆ ತಿಳಿಸಿದರು.
ನದಿ ನೀರು ಕಲುಷಿತಕ್ಕೆ ಕಾರಣವಾಗುತ್ತಿರುವ ಬಗ್ಗೆ ಸಮಗ್ರ ಸಮೀಕ್ಷೆ ಕೈಗೊಂಡರೆ ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.
ಸಣ್ಣ ಕೈಗಾರಿಕೆ ಪ್ರದೇಶ ಅಭಿವೃದ್ಧಿಗೆ ಸೂಚನೆ:
ಸ್ಥಳೀಯ ಜನರಿಗೆ ಉದ್ಯಮ ಸ್ಥಾಪನೆಗೆ ಅನುಕೂಲವಾಗುವಂತೆ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ೨೦ ರಿಂದ ೩೦ ಎಕರೆ ಜಮೀನು ಅಭಿವೃದ್ಧಿಪಡಿಸಿ ಕೈಗಾರಿಕಾ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಸಣ್ಣ ಕೈಗಾರಿಕೆ ಅಭಿವೃದ್ಧಿಗೆ ಉದ್ಯಮಬಾಗದಿಂದ ಐದು ಕಿ.ಮೀ. ದೂರದ ಬಸ್ತವಾಡ ಬಳಿ ನೂರು ಎಕರೆ ಗುರುತಿಸಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜ್ ವಿವರಿಸಿದರು.
ಪ್ರವಾಸೋದ್ಯಮ- ಮಾಸ್ಟರ್ ಪ್ಲ್ಯಾನ್ ರೂಪಿಸಿ:
ಬರೀ ದೇವಸ್ಥಾನಗಳ ಆವರಣದಲ್ಲಿ ಯಾತ್ರಿ ನಿವಾಸಗಳನ್ನು ಸ್ಥಾಪಿಸುವ ಬದಲು ಗೋಕಾಕ, ಗೊಡಚಿನಮಲ್ಕಿ, ಸೊಗಲ ಮತ್ತಿತರ ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ರೂಪಿಸುವಂತೆ ಸಚಿವರು ಸೂಚನೆ ನೀಡಿದರು.
ಖಾಲಿ ಇರುವ ಸಮುದಾಯ ಭವನಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ನಡೆಸುವಂತೆ ತಿಳಿಸಲಾಯಿತು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿ, ನರೇಗಾ ಯೋಜನೆಯಡಿ ಪ್ರತಿದಿನ ೪೫ ಸಾವಿರ ಜನರಿಗೆ ಉದ್ಯೋಗ ನೀಡಲಾಗುತ್ತಿದೆ ಎಂದು ವಿವರಿಸಿದರು.
ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಶಶಿಧರ್ ಕುರೇರ್, ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ. ಉಪಸ್ಥಿತರಿದ್ದರು.
ಗಣಿ ಮತ್ತು ಭೂವಿಜ್ಞಾನ, ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕುಡಿಯುವ ನೀರು ಮತ್ತು ಒಳಚರಂಡಿ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ