ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ‘ಅಂತರಂಗ ಮತ್ತು ಬಹಿರಂಗವನ್ನು ಎರಡನ್ನು ಶುದ್ಧವಾಗಿಟ್ಟುಕೊಂಡು ಬದುಕನ್ನು ಆನಂದವಾಗಿಸಿಕೊಳ್ಳಬೇಕು’ ಎಂದು ಭಾಗೋಜಿಕೊಪ್ಪ ಮುನ್ಯಾಳ-ರಂಗಾಪುರದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯರು ಹೇಳಿದರು.
ಇಲ್ಲಿಯ ಗೃಹಸ್ಥಾಶ್ರಮ ಆಧ್ಯಾತ್ಮಿಕ ಕೇಂದ್ರದಲ್ಲಿ ಹುಣ್ಣಿಮೆಯ 27ನೇ ಶಿವಾನುಭವ ಗೋಷ್ಠಿಯ ಸಾನಿಧ್ಯವಹಿಸಿ ಮಾತನಾಡಿದ ಅವರು ಧ್ಯಾನ, ತಪಗಳ ಮೂಲಕ ಮನಸ್ಸಿಗೆ ಶಾಂತಿ, ನೆಮ್ಮದಿಯನ್ನು ಪ್ರಾಪ್ತಗೊಳಿಸಿಕೊಳ್ಳಬೇಕು ಎಂದರು.
ನಾಗನೂರಿನ ಮಾತೋಶ್ರೀ ಕಾವ್ಯಾ ಅಮ್ಮನವರು ಮತ್ತು ಕಂಕಣವಾಡಿ ಮಾರುತಿ ಶರಣರು ಮಾತನಾಡಿ ದೇವರು ಇರುವುದು ಬಿಡುವುದು ಮನುಷ್ಯನ ಅರಿವಿನ ಮೂಲಕ ಸಾಧ್ಯ. ಮನುಷ್ಯನ ಕಷ್ಟ, ಸುಖಗಳಿಗೆ ದೇವರ ಲೀಲೆಗಳೆ ಕಾರಣವಾಗಿದ್ದು, ದೇವರನ್ನು ಧ್ಯಾನಿಸುವ ಮೂಲಕ ಸನ್ಮಾರ್ಗದಲ್ಲಿ ಸಾಗಬೇಕು ಎಂದರು.
ಪುಣ್ಯ ಕ್ಷೇತ್ರಗಳ ದರ್ಶನ ಮುಗಿಸಿರುವ ಶಂಕರಪ್ಪ ತಾಂವಸಿ, ಶಂಕರಪ್ಪ ಸೋನವಾಲಕರ, ಬಾಬು ಸೋನವಾಲಕರ ಮತ್ತು ಕೆ.ಬಿ. ಪಾಟೀಲ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು.
ಅನ್ನಪ್ರಸಾದದ ಭಕ್ತಿ ಸೇವೆಗೈದ ವಿಲಾಸ ನಾಶಿ ದಂಪತಿಗಳಿಗೆ ಮತ್ತು ಕಾಣಿಕೆ ಭಕ್ತಿ ಸೇವೆ ಸಮರ್ಪಿಸಿದ ಮುತ್ತಪ್ಪ ಈರಪ್ಪನ್ನವರ ಅವರನ್ನು ಸನ್ಮಾನಿಸಿದರು.
ಬೋರಮ್ಮಾ ಮಠಪತಿ ಅವರ ಸುಶ್ರವ್ಯವಾದ ಭಕ್ತಿ ಗಾಯನವು ಗಮನಸೆಳೆಯಿತು.
ಸಂಚಾಲಕ ಶಿವಪುತ್ರಯ್ಯ ಮಠಪತಿ ಪ್ರಾಸ್ತಾವಿಕ ಮಾತನಾಡಿದರು.
ಡಿ.ಬಿ. ಪಾಟೀಲ, ಬಿ.ಬಿ. ಹಂದಿಗುಂದ, ಈಶ್ವರಪ್ಪ ಸತರಡ್ಡಿ, ಶಂಕರ ಚಿಪ್ಪಲಕಟ್ಟಿ ಇದ್ದರು.
ಮಹಾದೇವ, ಈಶ್ವರ ಮುಗಳಖೋಡ, ಮಲ್ಲಯ್ಯ ಹಿರೇಮಠ, ರಾಚಯ್ಯ ಹಿರೇಮಠ, ಮಲ್ಲಪ್ಪ ಬಳಿಗಾರ ಭಜನೆ ಮಾಡಿದರು.
ಬಾಲಶೇಖರ ಬಂದಿ ನಿರೂಪಿಸಿದರು, ಸದಾಶಿವ ಶೀಲವಂತ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ