Kannada NewsKarnataka NewsLatest

 ಕೆಂಪೇಗೌಡರ ಜಯಂತಿಯತ್ತ ಸುಳಿಯದ ಜನಪ್ರತಿನಿಧಿಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ರಾಜ್ಯ ಸರಕಾರದ ಆದೇಶದಂತೆ ಬೆಳಗಾವಿಯಲ್ಲಿ ಇಂದು ನಾಡಪ್ರಭು ಕೆಂಪೇಗೌಡ ಜಯಂತಿ ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಹಾಗೂ ರಾಜ್ಯ ಸಚಿವರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆದರೆ ಯಾವೊಬ್ಬ ಜನಪ್ರತಿನಿಧಿಯೂ ಕಾರ್ಯಕ್ರಮದತ್ತ ಸುಳಿಯಲಿಲ್ಲ. ಅಧಿಕಾರಿಗಳೇ ಕಾರ್ಯಕ್ರಮ ಮಾಡಿ ಮುಗಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಳಗಾವಿ ಉತ್ತರ ವಲಯ ಆರಕ್ಷಕ ಮಹಾನಿರೀಕ್ಷಕ  ಎಚ್.ಜಿ.ರಾಘವೇಂದ್ರ ಸುಹಾಸ,  ಒಂದು ರಾಜ್ಯ ಸುಸೂತ್ರವಾಗಿ ನಡೆಯಬೇಕಾದರೆ ಆ ರಾಜ್ಯದ ಆಡಳಿತಾತ್ಮಕ ವ್ಯವಸ್ಥೆ ಸರಿಯಾಗಿರಬೇಕು ಎಂದು  ಹೇಳಿದರು.
ಕನ್ನಡ ಭೂಮಿಯಲ್ಲಿ ಹುಟ್ಟಿದಕ್ಕೆ ನಾವು ಹೆಮ್ಮ ಮತ್ತು ಗೌರವ ಪಡಬೇಕು ಹಾಗೂ ಕನ್ನಡ ಭಾಷೆ ಒಂದು ಶತಮಾನದಲ್ಲಿ ೮೦ಕ್ಕಿಂತ ಹೆಚ್ಚಿನ ಮಹಾನ್ ಗ್ರಂಥಗಳನ್ನು ರಚಿಸಿರುವುದು ನಮ್ಮ ರಾಜ್ಯದ ಹೆಗ್ಗಳಿಕೆ.  ಸಾಮಾಜಿಕವಾಗಿ, ಆಡಳಿತಾತ್ಮಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಸುಧಾರಣೆಗಳಾಗಿದ್ದು, ಇವೆಲ್ಲವೂ ಕಳೆದ ೧೨ ಮತ್ತು ೧೩ನೇ ಶತಮಾನಗಳಲ್ಲಿ ಮುಂದುವರೆದುದು ನಮ್ಮ ರಾಜ್ಯ ಸುಧಾರಣೆ ಪಥದ ಮೇಲೆ ನಿಂತಿದೆ.
ಈ ರಾಜ್ಯವನ್ನು ಸರಿಯಾದ ಮಾರ್ಗದಲ್ಲಿ ಸರಿಯಾದ ಆಲೋಚನೆ, ವಿವೇಚನೆಯಿಂದ ನಡೆಯುವಂತಹ ಜನರು ಇರುವಂತಹ ನಾಡನ್ನು ಕಟ್ಟುತ್ತೇನೆ ಎಂದು ಕೆಂಪೇಗೌಡರು ಹೇಳಿದ್ದರು ಎಂದು ಎಚ್.ಜಿ.ರಾಘವೇಂದ್ರ ಸುಹಾಸ ಅವರು ಹೇಳಿದರು.
ರೆವಿನ್ಯೂ ಕಾನೂನು ನಮ್ಮ ದೇಶದಲ್ಲಿ ಮುಂದುವರೆದಂತಹ ಒಂದು ಸಾಮಾಜಿಕ ಕಳಕಳಿಯನ್ನು ಹೊಂದಿರುವಂತಹ ವ್ಯವಸ್ಥೆ. ಕಾನೂನು ಮಾಡುವಲ್ಲಿ, ಆಡಳಿತ, ಸಾಹಿತ್ಯ, ವಿಜ್ಞಾನ, ಸಾಂಸ್ಕ್ರತಿಯಲ್ಲಿ ನಾವು ಇಂದು ಮುಂಚೂಣಿಯಲ್ಲಿದ್ದೇವೆ ಎನ್ನುವುದು ನಾವು ಹೆಮ್ಮೆ ಪಡುವಂತಹ ವಿಷಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಹುಬ್ಬಳ್ಳಿ ಕಾಡಸಿದ್ದೇಶ್ವರ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಕೆ.ಎಸ್. ಕೌಜಲಗಿ, ಕರ್ನಾಟಕ ವೀರಪರಂಪರೆ ಮುಕುಟ ಎಂದು ನಾಡಗೌಡ ಕೆಂಪೇಗೌಡರು ಬಣ್ಣಿಸಿದರು. ಒಕ್ಕಲಿಗ ಸಮಾಜದ ಕೇಂದ್ರ ಬಿಂದು ಆಗಿರುವ ನಾಡಗೌಡ ಕೆಂಪೇಗೌಡರು ದೇಶದ ಆಡಳಿತ ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ಹೇಗೆ ಮಾಡಬೇಕು ಎನ್ನುವುದಕ್ಕೆ ಜನಪ್ರತಿನಿಧಿಗಳಿಗೆ ಮಾದರಿಯಾಗಿರುವವರು.
ನಮ್ಮ ಆಡಳಿತವರ್ಗದವರು, ಜನಪ್ರತಿನಿಧಿಗಳು, ಯುವತಿಯರು ಹಾಗೂ ಯುವಕರು ಇತಿಹಾಸವನ್ನು ತಿಳಿಯುವ ಅವಶ್ಯಕತೆಯಿದೆ. ಬೆಂಗಳೂರು ಎಂಬ ನಗರ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವುದಕ್ಕೆ ನಾಂದಿ ಹಾಕಿದವರು ನಾಡಗೌಡ ಕೆಂಪೇಗೌಡರು ಎಂದು ಅವರ ಸಮಗ್ರ ಜೀವನ ಚರಿತ್ರೆಯನ್ನು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬೆಳಗಾವಿ ನಗರ ಪೋಲೀಸ ಆಯುಕ್ತರಾದ ಡಾ.ಬಿ.ಎಸ್. ಲೋಕೇಶಕುಮಾರ್ ಅವರು ನಾಡಗೌಡ ಕೆಂಪೇಗೌಡರು ಕಟ್ಟಿದ ಬೆಂಗಳೂರು ಅಂದರೆ ಪ್ರತಿಯೊಬ್ಬ ಯುವಕ ಮತ್ತು ಯುವತಿಯರಿಗೆ ಒಂದು ಆಶಾಗೋಪುರ. ನಾನು ಚೆನ್ನಾಗಿ ಓದಿ ಡಾಕ್ಟರ್, ಲಾಯರ್, ಇಂಜಿನೀಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಬೆಂಗಳೂರು ಈ ಮಟ್ಟದ ಬೆಳವಣಿಗೆ ಹೊಂದಲು ಕಾರಣೀಭೂತರು ನಾಡಗೌಡ ಕೆಂಪೇಗೌಡರು ಎಂದು ಅವರು ತಿಳಿಸಿದರು.
ನಾಡಗೌಡ ಕೆಂಪೇಗೌಡರು ದೂರದೃಷ್ಟಿ ಇಟ್ಟುಕೊಂಡು ಈ ನಾಡಿಗೆ ಉತ್ತಮ ನಗರದ ಅವಶ್ಯಕತೆಯಿದೆ ಎಂದು ಕಟ್ಟಿರುವ ಸಿಲಿಕಾನ್ ಸಿಟಿ ಎಂದೇ ಹೆಸರುವಾಸಿಯಾಗಿರುವ ಬೆಂಗಳೂರು ಈಗಿನ ಕಾಲದ ಯುವಕ ಯುವತಿಯರಿಗೆ ಆಶಾಕಿರಣವಾಗಿದೆ, ಲಕ್ಷಾಂತರ ವಿದ್ಯಾವಂತರಿಗೆ ಆಶ್ರಯನೀಡಿದೆ ಹಾಗೂ ಇವತ್ತು ಅವರ ಜನ್ಮದಿನ ಎಲ್ಲರೂ ಅವರನ್ನು ನೆನೆಯಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಬೂದೆಪ್ಪ ಹೆಚ್.ಬಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಪ್ರೀತಮ್ ನಸಲಾಪುರೆ, ಉಪ ವಿಭಾಗಾಧಿಕಾರಿಗಳಾದ ಕವಿತಾ ಯೋಗಪ್ಪನ್ನವರ, ತಹಶೀಲ್ದಾರ ಮಂಜುಳಾ ನಾಯಕ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಗಂಗಾಧರ, ನಾಡಪ್ರಭು ಕೆಂಪೇಗೌಡರ ಗ್ರಂಥಕರ್ತರಾದ ಮೋಹನ ಗೂಂಡ್ಲೂರ,  ವಿಜಯಾ ಹೀರೆಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಸಿ.ಬಿ.ರಂಗಯ್ಯ, ಹಿರಿಯ ಅಧಿಕಾರಿಗಳು, ಪದವಿ ಮಹಾವಿದ್ಯಾಲಯಗಳ ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಶಿಕ್ಷಕರಾದ ಎಸ್.ಪಿ.ಕಂಕಣವಾಡಿ ಅವರು ನಿರೂಪಿಸಿದರು. ರಸೂಲ ಜೆ.ಮೋಮಿನ ಅವರ ಮಾಯಾ ಸಂಗೀತ ನೃತ್ಯ ನಾಟಕ ಅಕಾಡೆಮಿ ಅವರಿಂದ ಮನರಂಜಿತ ನೃತ್ಯ, ಪ್ರಿಯಾಂಕ ಅರಸಿದ್ದಿ ಹಾಗೂ ಸಂಗಡಿಗರು ನಾಡಗೀತೆಯನ್ನು ಹಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button