*ನಾವ್ಯಾರೂ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿಲ್ಲ ಎಂದ ಕೆಂಪಣ್ಣ ಹೇಳಿದ್ದೇನು?*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾವ್ಯಾರೂ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿಲ್ಲ. ಏಳು ತಿಂಗಳಿಂದ ಹಣ ಬಾಕಿ ಇದೆ. ಇದರಲ್ಲಿ ಸ್ವಲ್ಪ ಮಾತ್ರ ಬಿಡುಗಡೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಮನವಿ ಮಾಡಿದ್ದೇವೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಂಪಣ್ಣ, ನಾವ್ಯಾರೂ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬಾಕಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಈ ವೇಳೆ ಅವರು ಎಷ್ಟು ತಿಂಗಳಿದ ಬಿಲ್ ಬಾಕಿಯಿದೆ ಎಂದು ಕೇಳಿದರು. ಮೂರು ವರ್ಶ್ಜದಿಂದ ಅಂತ ಹೇಳಿದ್ದೇವೆ. ಅದಕ್ಕೆ ಅವರು ನಾನು ಬಂದು ಮೂರು ತಿಂಗಳಾಗಿದೆ ಎಂದು ಹೇಳಿದರು. ಆದರೆ ಕಾಂಟ್ರ್ಯಾಕ್ಟರ್ಸ್ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿ ಇದೆ ಎಂದು ಹೇಳಿದ್ದೇವೆ ಎಂದರು.
ಯಾವ ಸಚಿವರೂ ಕಮಿಷನ್ ಕೇಳಿಲ್ಲ. ನನ್ನ ಬಳಿಯೂ ಯಾರೂ ಬಂದು ದೂರು ನೀಡಿಲ್ಲ. ಯಾರೋ ಮೂರನೇ ವ್ಯಕ್ತಿ ಆರೋಪ ಮಾಡಿರಬಹುದು ಎಂದು ಕೆಂಪಣ್ಣ ಹೇಳಿದ್ದಾರೆ.
ನಾವು 40% ಕಮಿಷನ್ ಬಗ್ಗೆ ಮಾತ್ರ ಆರೋಪ ಮಾಡಿದ್ದೆವು. ನಮ್ಮ ಬಳಿ ದಾಖಲೆಗಳು ಇವೆ. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಲು ಸಾಕಷ್ಟು ಪ್ರಯತ್ನ ಮಾಡಿದ್ದೆವು. ಆದರೆ ಅವರು ನಮಗೆ ಭೇಟಿಗೆ ಅವಕಾಶ ನೀಡಲಿಲ್ಲ. ಅವರಿಗೆ ಚೀಟಿ ಕೊಟ್ಟೆವು, ಅದನ್ನು ಜೇಬಿಗೆ ಇಟ್ಟುಕೊಂಡರು ಹೊರತು ಕರೆದು ಮಾತನಾಡುವ ಕೆಲಸ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.
ಅವರಿಗೆ ಬೇಕಾದವರಿಗೆ ಮಾತ್ರ ಹಾ ಬಿಡುಗಡೆ ಮಾಡಿದ್ದಾರೆ. ಆದರೆ ನಮಗೂ ಈಗಲೂ ಅವರ ಮೇಲೆ ಗೌರವವಿದೆ. ಯಡಿಯೂರಪ್ಪನವರಿಗೂ ಪತ್ರ ಕೊಟ್ಟೆವು, ಪ್ರಧಾನಿ ಮೋದಿಯವರಿಗೂ ಪತ್ರ ಬರೆದೆವು. ಕುಮಾರಸ್ವಾಮಿಯವರಿಗೂ ಪತ್ರ ಕೊಟ್ಟೆವು. ಆದರೆ ಅವರು ನಮ್ಮ ಕೇಸ್ ತೆಗೆದುಕೊಳ್ಳಲಿಲ್ಲ ನಮ್ಮ ಪರಿಸ್ಥಿತಿ ಬಾಂಡ್ಲಿಯಿಂದ ಬೆಂಕಿಗೆ ಬಿದ್ದಂತಾಗಿದೆ. ನಮಗೆ ಪೇಮೆಂಟ್ ಕೊಡಿ ಸಾಕು. ಕಾಂಟ್ರ್ಯಾಕ್ಟರ್ ಗಳಿಗೂ ಭಾಗ್ಯ ಕೊಡಿ ಸ್ವಾಮಿ. ಸರ್ಕಾರ ಎಲ್ಲರಿಗೂ ಭಾಗ್ಯ ಕೊಡುತ್ತಿದೆ. ನಮಗೆ ಕೆಲಸ ಮಾಡಿರುವುದಕ್ಕೆ ಸಂಬಳ ಕೊಡಿ. ನಾವೇನೂ ಡೆಡ್ ಲೈನ್ ಕೊಡುತ್ತಿಲ್ಲ. ನಮಗೆ ಹಣ ಬಿಡುಗಡೆ ಮಾಡಿ. ಸಿಎಂ ಅವರಿಗೂ ಈಬಗ್ಗೆ ಪತ್ರ ಬರೆಯುತ್ತೇವೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ