Latest

ವಿದ್ಯಾರ್ಥಿನಿಯೊಬ್ಬಳನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಲು 70 ಸೀಟ್ ಬೋಟ್ ಓಡಿಸಿದ ಕೇರಳ ಸರ್ಕಾರ

ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ಲಾಕ್‍ಡೌನ್‍ನಿಂದಾಗಿ ಮುಂದೂಡಲ್ಪಟ್ಟ ಪರೀಕ್ಷೆಗಳು ಆರಂಭವಾಗಿದ್ದು, ಈ ನಡುವೆ 12ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಪರೀಕ್ಷಾ ಕೇಂದ್ರಕ್ಕೆ ತೆರಳಲು 70 ಆಸನ ಸಾಮರ್ಥ್ಯದ ಬೋಟನ್ನು ಓಡಿಸಿ ಆಕೆಗೆ ಸಹಾಯ ಮಾಡಿರುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯ ಕಾಂಜಿರಮ್‍ನಲ್ಲಿ ನಡೆದಿದೆ.

ಕೇರಳ ಜಲಸಾರಿಗೆ ವಿಭಾಗ (ಎಸ್‍ಡಬ್ಲ್ಯೂಟಿಡಿ)ದ ಅಧಿಕಾರಿಗಳ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಂದ್ರ ಬಾಬು ಜಲಸಾರಿಗೆ ಅಧಿಕಾರಿಗಳ ಸಹಾಯದಿಂದ ಪರೀಕ್ಷೆ ಬರೆದ ವಿದ್ಯಾರ್ಥಿನಿ.

ಸಂದ್ರ ಕೂಲಿ ಕಾರ್ಮಿಕ ದಂಪತಿಯ ಮಗಳು. ಕಳೆದ ಒಂದು ವರ್ಷದಿಂದ ಸಂದ್ರ ಬಾಬು ಕೊಟ್ಟಾಯಂ ಜಿಲ್ಲೆಯ ಕಾಂಜಿರಾಮ್‍ನ ಎಸ್‍ಎನ್‍ಡಿಪಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿದ್ದಾಳೆ. ವಿದ್ಯಾರ್ಥಿನಿ ಆಲಪ್ಪುಳದಲ್ಲಿರುವ ಎಂಎನ್ ಬ್ಲಾಕ್‍ನಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಳು.

ವಿದ್ಯಾರ್ಥಿನಿ ಎಂಎನ್ ಬ್ಲಾಕ್‍ನಿಂದ ತನ್ನ ಶಾಲೆಗೆ ತಲುಪಲು ಕೊಟ್ಟಾಯಂ ಜಿಲ್ಲೆಯ ಗಡಿ ಗ್ರಾಮವಾದ ಕಾಂಜಿರಮ್‍ಗೆ ಸರ್ಕಾರಿ ಬೋಟ್ ಸೇವೆ ಇದೆ. ಕೊರೊನಾ ಲಾಕ್‍ಡೌನ್‍ನಿಂದಾಗಿ ಕುಟ್ಟನಾಡ್ ಪ್ರದೇಶದ ನಾನ ಕಡೆ ಸಂಪರ್ಕ ಕಲ್ಪಿಸುವ ಪ್ರಯಾಣಿಕರ ಬೋಟ್‍ಗಳ ಸಂಚಾರ ನಿಂತಿವೆ. ಈ ಮಧ್ಯೆ ಕೇರಳ ಸರ್ಕಾರ 12ನೇ ತರಗತಿ ಪರೀಕ್ಷೆ ದಿನಾಂಕವನ್ನು ನಿಗದಿಪಡಿಸಿತ್ತು. ಹೀಗಾಗಿ ಬೋಟ್ ಸಂಚಾರವಿಲ್ಲದೆ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರಕ್ಕೆ ಹೋಗಲು ಸಾಧ್ಯವಿರಲಿಲ್ಲ. ಈ ವೇಳೆ ಕೇರಳ ಜಲಸಾರಿಗೆ ಇಲಾಖೆ ವಿದ್ಯಾರ್ಥಿನಿ ನೆರವಿಗೆ ಬಂದಿದ್ದು, ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಸಹಾಯ ಮಾಡಿದೆ.

ಮೇ 29 ಮತ್ತು 30 ರಂದು ಎರಡು ದಿನ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರಕ್ಕೆ ಹೋಗಲು 70 ಆಸನಗಳ ಸಾಮರ್ಥ್ಯದ ಬೋಟನ್ನು ಓರ್ವ ವಿದ್ಯಾರ್ಥಿನಿಗಾಗಿ ಓಡಿಸಲಾಗಿದೆ. ಈ ಬೋಟ್‍ನಲ್ಲಿ ಚಾಲಕ, ನೇವಿಗೇಟರ್, ಬೋಟ್ ಮಾಸ್ಟರ್ ಮತ್ತು ಇಬ್ಬರು ಸಹಾಯಕರು ಸೇರಿ ಒಟ್ಟು ಐದು ಸಿಬ್ಬಂದಿಯನ್ನು ನೇಮಿಸಲಾಗಿತ್ತು.

ವಿದ್ಯಾರ್ಥಿನಿಯನ್ನ ಸೋಮವಾರ ಬೆಳಗ್ಗೆ 11.30ಕ್ಕೆ ಕೊಟ್ಟಾಯಂ ನಿಲ್ದಾಣದಿಂದ ಕಾಂಜಿರಮ್‍ನ ಎಸ್‍ಎನ್‍ಡಿಪಿ ಹೈಯರ್ ಸೆಕೆಂಡರಿ ಶಾಲೆಯ ಮುಂಭಾಗದಲ್ಲಿರುವ ಜೆಟ್ಟಿಯಲ್ಲಿ ಇಳಿಸಲಾಯಿತು. ಅಲ್ಲಿಯೇ ವಿದ್ಯಾರ್ಥಿನಿಗಾಗಿ ಬೋಟ್ ಕಾಯುತ್ತಿತ್ತು. ಮತ್ತೆ ವಿದ್ಯಾರ್ಥಿನಿ ಪರೀಕ್ಷೆ ಬರೆದು ಮುಗಿಸಿದ ಬಳಿಕ ಬೋಟ್ ಮೂಲಕ ಮನೆಗೆ ತಲುಪಿಸಿದ್ದೇವೆ ಎಂದು ಬೋಟ್ ಅಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ಸಂತಸ ಹಂಚಿಕೊಂಡಿರುವ ಸಂದ್ರ, ಇಲಾಖೆ ಸಚಿವ ಮತ್ತು ಎಸ್‍ಡಬ್ಲ್ಯೂಟಿಡಿ ನಿರ್ದೇಶಕ ಶಾಜಿ ವಿ.ನಾಯರ್ ಅವರು ಪರೀಕ್ಷೆ ಬರೆಯಲು ನನಗೆ ಸಹಾಯ ಮಾಡಿರುವುದು ಖುಷಿಯಾಗಿದೆ. ಮೊದಲು ನನ್ನ ಪೋಷಕರು ಸಾಮಾಜಿಕ ಕಾರ್ಯಕರ್ತರ ಸಹಾಯದಿಂದ ಸಾರಿಗೆ ಇಲಾಖೆಯನ್ನು ಸಂಪರ್ಕಿಸಿದ್ದರು. ಎಸ್‍ಡಬ್ಲ್ಯೂಟಿಡಿ ಸಚಿವರು ಸಹಾಯ ಮಾಡುವುದಾಗಿ ಭರವಸೆ ನೀಡಿದೆ. ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ದೊಡ್ಡ ಸಹಾಯವಾಗಿದೆ ಎಂದು ತಿಳಿಸಿದ್ದಾಳೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button