Latest

ಗರ್ಭಿಣಿ ಆನೆ ಹತ್ಯೆ ಪ್ರಕರಣ: ಮೂವರು ಶಂಕಿತರ ಬಂಧನ

ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ಅನಾನಸ್ ಹಣ್ಣಿನಲ್ಲಿ ಪಟಾಕಿ ಇಟ್ಟು ಗರ್ಭಿಣಿ ಆನೆ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಂಕಿತ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕೇರಳದ ಮಲಪ್ಪುರಂ ಜಿಲ್ಲೆಯ ಮನ್ನಾರ್ಕಡ್ ಅರಣ್ಯ ಪ್ರದೇಶದ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದ ದುರಂತದಲ್ಲಿ ಗರ್ಭಿಣಿ ಆನೆ ಮೃತಪಟ್ಟಿದೆ. ಈ ಸಂಬಂಧ ಅನೇಕರು ನಮಗೆ ದೂರು ನೀಡಿದ್ದಾರೆ. ನಿಮ್ಮ ಕಾಳಜಿ ಯಾವುದೇ ಕಾರಣಕ್ಕೂ ವ್ಯರ್ಥವಾಗುವುದಿಲ್ಲ ಎಂದು ಭರವಸೆ ನೀಡುತ್ತೇನೆ. ನ್ಯಾಯ ಮೇಲುಗೈ ಸಾಧಿಸುತ್ತದೆ ಎಂದು ತಿಳಿಸಿದ್ದಾರೆ.

ಮೂವರು ಶಂಕಿತರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಪೊಲೀಸ್ ಮತ್ತು ಅರಣ್ಯ ಇಲಾಖೆಗಳು ಜಂಟಿಯಾಗಿ ಪ್ರಕರಣದ ತನಿಖೆ ನಡೆಸುತ್ತಿವೆ ಎಂದು ಹೇಳಿದ್ದಾರೆ.

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಹಲವು ದಿನಗಳಿಂದ ಆಹಾರಕ್ಕಾಗಿ ಅರಸುತ್ತಿದ್ದ ಗರ್ಭಿಣಿ ಆನೆಗೆ ಅನಾನಸ್ ನಲ್ಲಿ ಪಟಾಕಿ ಇಟ್ಟು ತಿನ್ನಿಸಿದ್ದರು. ಆನೆಯ ಬಾಯಿಯಲ್ಲಿ ಪಟಾಕಿ ಸಿಡಿದು ನೋವಿಂದ ಆನೆ ನರಳಿದೆ. ನೋವು ತಾಳಲಾರದೇ ರಸ್ತೆ ತುಂಬಾ ಓಡಾಡಿ ಬಳಿಕ ವೆಲ್ಲಿಯಾರ್ ನದಿಯಲ್ಲಿ ಮುಳುಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಆನೆಯನ್ನು ಮೇಲೆತ್ತಲು ಅರಣ್ಯ ಇಲಾಖೆ ಅಧಿಕಾರಿಗಳು ನೀಲಕಂಠನ್ ಹಾಗೂ ಸುರೇಂದ್ರನ್ ಎಂಬ ಎರಡು ಆನೆಗಳನ್ನು ಕರೆ ತಂದಿದ್ದು, ಅಷ್ಟೊತ್ತಿಗಾಗಲೇ ಸಂಜೆ 4ರ ಸುಮಾರಿಗೆ ಆನೆ ನದಿಯಲ್ಲೇ ಸಾವನ್ನಪ್ಪಿತ್ತು.

ಮಲಪ್ಪುರಂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಅರಣ್ಯಾಧಿಕಾರಿಯೊಬ್ಬರು ಆನೆ ನೋವಿನ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಕೇಂದ್ರ ಅರಣ್ಯ ಸಚಿವ ಪ್ರಕಾಶ್ ಜಾವಡೇಕರ್, ಕೇರಳದಲ್ಲಿ ಆನೆಯ ಹತ್ಯೆಯ ಪ್ರಕರಣವನ್ನು ಕೇಂದ್ರ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲು ಸೂಚಿಸಿದ್ದರು.

ಗರ್ಭಿಣಿ ಆನೆ ಹತ್ಯೆ ಖಂಡಿಸಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಹ್ಯುಮ್ಯಾನಿಟಿ ಇಸ್ ಡೆಡ್ ಎಂಬ ಹ್ಯಾಶ್ ಟ್ಯಾಗ್‍ನೊಂದಿಗೆ ಅಭಿಯಾನ ಆರಂಭವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button