*ನಾನು ಆತ್ಮಹತ್ಯೆಗೆ ಶರಣಾದರೆ ಐಟಿ ಅಧಿಕಾರಿಗಳೇ ನೇರ ಹೊಣೆ: ಉದ್ಯಮಿ ಕೆಜಿಎಫ್ ಬಾಬು ಹೊಸ ಬಾಂಬ್*

ಪ್ರಗತಿವಾಹಿನಿ ಸುದ್ದಿ: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ, ಖ್ಯಾತ ಉದ್ಯಮಿ ಸಿ.ಜೆ.ರಾಯ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭಾರಿ ಚರ್ಚೆಗೆ ಕಾರಣವಾಗಿದೆ. ಐಟಿ ಅಧಿಕಾರಿಗಳ ಕಿರುಕುಳದಿಂದಲೇ ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಮತ್ತೋರ್ವ ಪ್ರಭಾವಿ ಉದ್ಯಮಿ ಕೆಜಿಎಫ್ ಬಾಬು ನನಗೇನಾದರೂ ಆದರೆ ಐಟಿ ಅಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೆಜಿಎಫ್ ಬಾಬು, ಉದ್ಯಮಿಗಳನ್ನು ಟಾರ್ಗೆಟ್ ಮಾಡಿಕೊಂಡು ನಡೆಯುತ್ತಿರುವ ಐಟಿ ದಾಳಿಗಳು ಖಂಡನೀಯ. ಐಟಿ ಅಧಿಕಾರಿಗಳ ಒತ್ತಡಕ್ಕೆ ಸಿ.ಜೆ.ರಾಯ್ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಂಡಿರಬಹುದು ಎಂದಿದ್ದಾರೆ.
ಒಂದು ವೇಳೆ ನಾನೇನಾದರೂ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಐಟಿ ಅಧಿಕಾರಿಗಳೇ ನೇರ ಹೊಣೆ. ಐಟಿ ಅಧಿಕಾರಿಗಳು ನನಗೂ ನೋಟಿಸ್ ನೀಡಿ ಹಿಂಸಿಸಿದ್ದಾರೆ. ಈ ಹಿಂದೆ ನಾನೂ ಕೂಡ ಆತ್ಮಹತ್ಯೆ ಬಗ್ಗೆ ಯೋಚಿಸಿದ್ದೆ. ಆದರೆ ಹೆಂಡತಿ, ಮಕ್ಕಳ ಮುಖ ನೋಡಿ ಸುಮ್ಮನಿದ್ದೇನೆ ಎಂದಿದ್ದಾರೆ.
ನಾನು 7000 ಕೋಟಿ ಒಡೆಯನಾಗಿರಬಹುದು. ಆದರೆ ನನಗೂ ಈಗ ನೆಮದಿ ಎಂಬುದು ಇಲ್ಲದಂತಾಗಿದೆ. ಐಟಿ ಅಧಿಕಾರಿಗಳು ನೀಡುವ ಹಿಂಸೆಯಿಂದಾಗಿ ನನಗೆ ಜೀವನವೇ ಬೇಸತ್ತು ಹೋಗಿದೆ. ತನಿಖೆ ಹೆಸರಲ್ಲಿ ಅಧಿಕಾರಿಗಳು ಮಾನಸಿಕ ಕಿರುಕುಳ ನೀಡುತ್ತಾರೆ. ಇದರಿಂದ ಸಾಕಾಗಿದೆ ಎಂದು ಹೇಳಿದ್ದಾರೆ.




