*60 ದಿನಗಳಲ್ಲಿ ಚುನಾವಣೆ; ಬಿಜೆಪಿ ಭ್ರಷ್ಟಾಚಾರದ ಕಳಂಕ ತೊಡೆದು ಹಾಕಲು ಕಾಂಗ್ರೆಸ್ ಗೆ ಅಧಿಕಾರ ನೀಡಿ; ಡಿ.ಕೆ.ಶಿವಕುಮಾರ್ ಕರೆ*
ಪ್ರಗತಿವಾಹಿನಿ ಸುದ್ದಿ; ಕೋಲಾರ: ಈ ದೇಶದ ಸಮಸ್ಯೆ ಜತೆಗೆ ರಾಜ್ಯದ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ರಾಜ್ಯದ ಜನರ ನೋವು, ಸಮಸ್ಯೆ ಕೇಳಿ ಅವರಿಗೆ ಪರಿಹಾರ ನೀಡಲು ಈ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದೇವೆ. ಇಡೀ ದೇಶ ರಾಜ್ಯದತ್ತ ನೋಡುತ್ತಿದೆ. ಈ ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ನಮ್ಮವರು ಪ್ರಾಣತ್ಯಾಗ ಮಾಡಿದ್ದಾರೆ. ಆಗ ಬುಲೆಟ್ ಏಟು ತಿಂದಿದ್ದರು. ಪ್ರಜಾಪ್ರಭುತ್ವ ಬಂದ ನಂತರ ಬುಲೆಟ್ ಬ್ಯಾಲೆಟ್ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕೆಜಿಎಫ್ ನಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, 60 ದಿನಗಳಲ್ಲಿ ಚುನಾವಣೆ ಬರುತ್ತಿದೆ. ಬಿಜೆಪಿ ಆಡಳಿತ ಹೇಗಿದೆ, ಕಾಂಗ್ರೆಸ್ ಆಡಳಿತ ಹೇಗಿತ್ತು ಎಂದು ನೀವು ಅವಲೋಕಿಸಬೇಕು. ನಾವು ಉತ್ತಮ ಆಡಳಿತ ನೀಡಿದರೂ ಜನ ನಮಗೆ ಆಶೀರ್ವಾದ ಮಾಡಲಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜೆಡಿಎಸ್ ಗೆ ಬೆಂಬಲ ನೀಡಿದರೂ ಅವರು ಅದನ್ನು ಉಳಿಸಿಕೊಳ್ಳಲಿಲ್ಲ.
ಡಬಲ್ ಇಂಜಿನ್ ಸರ್ಕಾರ ಇದ್ದರೆ ಉತ್ತಮ ಆಡಳಿತ ನೀಡುವುದಾಗಿ ಹೇಳಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಜನಧನ್ ಮೂಲಕ ಕಪ್ಪು ಹಣ ತಂದು ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿದ್ದರು. ನಿಮ್ಮ ಖಾತೆಗೆ ಹಣ ಬಂದಿದೆಯಾ? ಇನ್ನು ಇಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಇದ್ದ ಕಾರ್ಖಾನೆ ಮುಚ್ಚಿ ಹೋಗಿದೆ. ಕೇಂದ್ರ ಸರ್ಕಾರ ಖಾಸಗಿಕರಣ ಮಾಡುತ್ತಿದೆ. ಈ ಸರ್ಕಾರ ಜನರಿಗೆ ಹೇಗೆ ದ್ರೋಹ ಬಗೆಯುತ್ತಿದೆ ಎಂದು ನಮ್ಮ ನಾಯಕರು ಹೇಳಿದ್ದಾರೆ ಎಂದರು.
ನಾನು ಇಲ್ಲಿಗೆ ಜೈಕಾರ, ಚಪ್ಪಾಳೆ ಹಾಕಿಸಿಕೊಳ್ಳಲು ಬಂದಿಲ್ಲ. ಕೆಜಿಎಫ್ ಮಹಾಜನತೆ ಕಳೆದ 50 ವರ್ಷಗಳಲ್ಲಿ ಕಾಂಗ್ರೆಸ್ ಶಾಸಕರನ್ನು ನೀಡಿರಲಿಲ್ಲ. ಆದರೆ ಕಾಂಗ್ರೆಸ್ ಗೆ ಮಹಿಳಾ ಶಾಸಕಿ ಆಯ್ಕೆ ಮಾಡಿ ಶಕ್ತಿ ತುಂಬಿದ್ದಾರೆ. ಅದಕ್ಕೆ ನಿಮಗೆ ಕೋಟಿ ನಮಸ್ಕಾರ ಹೇಳುತ್ತೇನೆ. ನಾವು ಈ ಭಾಗದಲ್ಲಿ ಸಮೀಕ್ಷೆ ಮಾಡಿಸಿದ್ದು, ರೂಪ ಶಶಿಧರ್ ಅವರು ಮಹಿಳೆಯರ ನೋವು ಅರಿತು ಅವರ ಬದುಕಿನಲ್ಲಿ ಬದಲಾವಣೆ ತರಬೇಕು ಎಂದು ಸ್ವಸಹಾಯ ಗುಂಪುಗಳನ್ನು ಆರಂಭಿಸಿ ಸಾಲ ಕೊಡಿಸಿದ್ದಾರೆ. ಇಡೀ ರಾಜ್ಯದಲ್ಲಿ ಎಲ್ಲ ಪಕ್ಷಕ್ಕೂ ಹೋಲಿಸಿದರೆ ಕೆಜಿಎಫ್ ನ ರೂಪಾ ಶಶಿಧರ್ ಮಾದರಿಯಾಗಿ ಕೆಲಸ ಮಾಡಿದ್ದಾರೆ.
ಇತ್ತೀಚೆಗೆ ಪ್ರಿಯಾಂಕಾ ಗಾಂಧಿ ಅವರು ರಾಜ್ಯಕ್ಕೆ ಬಂದಿದ್ದರು. ನಮ್ಮ ರಾಜ್ಯದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ ಮಾಡುತ್ತಿದ್ದೇವೆ. ಈ ಬಗ್ಗೆ ಸಲಹೆ ನೀಡಲು ಆಹ್ವಾನ ನೀಡಿದಾಗ ಸುಮಾರು 8 ಸಾವಿರ ಸಲಹೆಗಳು ಬಂದವು. ಮಹಿಳೆಯರಿಗೆ ನಾವು ವಿಶೇಷ ಸ್ಥಾನಮಾನ ನೀದಿದ್ದೇವೆ, ನೀಡಲಿದ್ದೇವೆ. ಹೀಗಾಗಿ ಕಾಂಗ್ರೆಸ್ ಪಕ್ಷ ಮಹಿಳೆಯರಲ್ಲಿ ನಾಯಕತ್ವ ಗುಣ ಬೆಳೆಸಲು ನಾ ನಾಯಕಿ ಸಮಾವೇಶ ಮಾಡಿತು. ಈ ಸಂದರ್ಭದಲ್ಲಿ ಮಹಿಳೆಯರು ಬೆಲೆ ಏರಿಕೆ ವಿಚಾರವಾಗಿ ತಮ್ಮ ನೋವು ಹಂಚಿಕೊಂಡರು.
ಹೀಗಾಗಿ ಕಾಂಗ್ರೆಸ್ ಪಕ್ಷ ರಾಜ್ಯದ ಜನರಿಗೆ 2 ಗ್ಯಾರಂಟಿ ಯೋಜನೆ ಪ್ರಕಟಿಸಿದ್ದೇವೆ. ಬೆಳಗಾವಿಯಲ್ಲಿ ಮೊದಲ ಗ್ಯಾರಂಟಿಯಾಗಿ ಗೃಹಜ್ಯೋತಿ ಯೋಜನೆ ಘೋಷಣೆ ಮಾಡಿದೆವು. ಈ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು. ಆ ಮೂಲಕ ಪ್ರತಿ ತಿಂಗಳಿಗೆ 1500ರಂತೆ ವರ್ಷಕ್ಕೆ 18 ಸಾವಿರ ಹಣವನ್ನು ಪ್ರತಿ ಕುಟುಂಬ ಉಳಿಸಬಹುದಾಗಿದೆ. ಕೋಲಾರ ಜಿಲ್ಲೆಯ ಒಟ್ಟು 3,20,916 ಮನೆಗಳಲ್ಲಿ ವಿದ್ಯುತ್ ಸಂಪರ್ಕವಿದ್ದು, 3,12,532 ಲಕ್ಷ ಮನೆಗಳು ಪ್ರತಿ ತಿಂಗಳು 200 ಯೂನಿಟ್ ಗಿಂತಲೂ ಕಡಿಮೆ ವಿದ್ಯುತ್ ಬಳಸುತ್ತವೆ. 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸುವ ಮನೆಗಳು ಕೇವಲ 8300 ಸಾವಿರ ಮಾತ್ರ. ಈ ಎಲ್ಲ ಮನೆಗಳಿಗೂ 200 ಯುನಿಟ್ ವಿದ್ಯುತ್ ನೀಡಲು ನಿರ್ಧರಿಸಿದ್ದೇವೆ.
ಇನ್ನು ಎರಡನೇ ಗ್ಯಾರಂಟಿ ಯೋಜನೆಯಾಗಿ ಮಹಿಳೆಯರಿಗೆ ನೆರವಾಗುವ ಉದ್ದೇಶದಿಂದ ಗೃಹಲಕ್ಷ್ಮಿ ಕಾರ್ಯಕ್ರಮ ಘೋಷಣೆ ಮಾಡಿದ್ದೇವೆ. ಬೆಲೆ ಏರಿಕೆಯಿಂದ ಜೀವನ ನಡೆಸುವುದು ಕಷ್ಟವಾಗಿರುವ ಸಂದರ್ಭದಲ್ಲಿ ಅವರಿಗೆ ನೆರವಾಗಲು ರಾಜ್ಯದ ಪ್ರತಿ ಕುಟುಂಬದ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು. ಆ ಮೂಲಕ ವರ್ಷಕ್ಕೆ 24 ಸಾವಿರ ನೆರವು ನೀಡಲಾಗುವುದು. ಹೀಗೆ ಈ ಎರಡೂ ಯೋಜನೆಯಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 42 ಸಾವಿರದಷ್ಟು ಆರ್ಥಿಕ ಹೊರೆ ತಗ್ಗಿಸಲು ಕಾಂಗ್ರೆಸ್ ಈ ಕಾರ್ಯಕ್ರಮ ರೂಪಿಸಿದೆ. ಐದು ವರ್ಷಗಳಲ್ಲಿ 2 ಲಕ್ಷ ಆರ್ಥಿಕ ನೆರವು ನೀಡಲಾಗುವುದು. 200 ಯುನಿಟ್ ವಿದ್ಯುತ್ ಉಚಿತ, 2 ಸಾವಿರ ರು. ಖಚಿತ. ಇದು ಕಾಂಗ್ರೆಸ್ ಪಕ್ಷದ ವಚನ. ಕಾಂಗ್ರೆಸ್ ಪಕ್ಷದ ಈ ಯೋಜನೆಗಳನ್ನು ಪಕ್ಷದ ಎಲ್ಲ ಕಾರ್ಯಕರ್ತರು ಪ್ರತಿ ಮನೆ, ಮನೆಗೆ ತಲುಪಿಸಬೇಕು.
ಬಿಜೆಪಿ ನುಡಿದಂತೆ ನಡೆಯಲಿಲ್ಲ. ಯುವಕರಿಗೆ ಉದ್ಯೋಗ ನೀಡಲಿಲ್ಲ. ನಿಮ್ಮ ಶಾಸಕಿ ನಮ್ಮ ಮುಂದೆ ಒಂದು ಪ್ರಸ್ತಾಪ ಇಟ್ಟಿದ್ದಾರೆ. ಈ ಭಾಗದ 15 ಸಾವಿರ ಜನ ಬೆಂಗಳೂರಿಗೆ ನಿತ್ಯ ಉದ್ಯೋಗಕ್ಕೆ ಹೋಗುತ್ತಿದ್ದಾರೆ. ಅವರ ಬದುಕಿನಲ್ಲಿ ಬದಲಾವಣೆ ಬರಬೇಕು ಎಂದು ಕೇಳಿದ್ದಾರೆ.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಇಲ್ಲಿ ಮೀಸಲಿಟ್ಟಿರುವ 1 ಸಾವಿರ ಎಕರೆ ಜಾಗದಲ್ಲಿ ಕೈಗಾರಿಕೆಗಳಿಗೆ ಆದ್ಯತೆ ನೀಡಿ ಉದ್ಯೋಗ ಸೃಷ್ಟಿಸುತ್ತೇವೆ. ನೀವು ಕಳೆದ ಬಾರಿ ರೂಪ ಶಶಿಧರ್ ಅವರನ್ನು 40 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದೀರಿ, ಈ ಬಾರಿ 50 ಸಾವಿರ ಅಂತರದಲ್ಲಿ ಆರಿಸಬೇಕು.
ಈ ಭೂಮಿಗೆ ಬಹುದೊಡ್ಡ ಇತಿಹಾಸವಿದೆ. ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರನ್ನು ಕೊಟ್ಟಿದ್ದೀರಿ. ಈ ಭಾಗದ ರೈತರು, ಕಾರ್ಮಿಕರ ಸಮಸ್ಯೆ ಅರಿತಿದ್ದೇವೆ. ನಮ್ಮ ಸರ್ಕಾರ ಇಲ್ಲಿ ಅಂತರ್ಜಲ ಹೆಚ್ಚಿಸಲು ಕೆ.ಸಿ ವ್ಯಾಲಿ ಯೋಜನೆ ಮಾಡಿದ್ದೇವೆ. ನಾವು ಸಾರ್ವಜನಿಕ ಉದ್ಯಮಗಳನ್ನು ಸ್ಥಾಪಿಸಿದರೆ, ಕೇಂದ್ರ ಸರ್ಕಾರ ಖಾಸಗಿಕರಣ ಮಾಡಿ ಮಾರಾಟ ಮಾಡುತ್ತಿದೆ. ರಾಜ್ಯದಲ್ಲಿ ಬದಲಾವಣೆ ಗಾಳಿ ಬಿಸಿದ್ದು, 40% ಕಮಿಷನ್ ಸರ್ಕಾರ ಕಿತ್ತೊಗೆಯಬೇಕು.
ಗುತ್ತಿಗೆದಾರರ ಸಂಘದ ಅದ್ಯಕ್ಷ ಕೆಂಪಣ್ಣ ಅವರು ಈ ಸರ್ಕಾರದಲ್ಲಿ 40% ಕಮಿಷನ್ ನೀಡಬೇಕು ಎಂದು ಪ್ರಧಾನಿಗೆ ಪತ್ರ ಬರೆದರು. ಸಚಿವರಿಗೆ ಲಂಚ ನೀಡಲಾಗದೇ ಗುತ್ತಿಗೆದಾರ ಸತ್ತಿದ್ದಾನೆ. ನೇಮಕಾತಿಗಳಲ್ಲಿ ಅಕ್ರಮ ಮಾಡಿ ಐಪಿಎಸ್ ಅಧಿಕಾರಿ ಜೈಲು ಸೇರಿದ್ದಾರೆ. ಈ ಸರ್ಕಾರದ ಅವಧಿಯಲ್ಲಿ ವಿಧಾನಸೌಧದಿಂದ ಸರ್ಕಾರಿ ಕಚೇರಿಗಳು ಕಾಸು ಕಾಸು ಎಂದು ಕನವರಿಸುತ್ತಿವೆ. ನಮ್ಮ ರಾಜ್ಯ ತಲೆ ತಗ್ಗಿಸುವಂತೆ ಭ್ರಷ್ಟಾಚಾರ ನಡೆಯುತ್ತಿದೆ. ಈ ಕಳಂಕವನ್ನು ನಾವು ತೊಡೆದುಹಾಕಬೇಕಿದೆ.
ಯೋಗಕ್ಕಿಂತ ಯೋಗಕ್ಷೇಮ ಮುಖ್ಯ. ಹೀಗಾಗಿ ನಿಮ್ಮ ಶಾಸಕಿ ಮಾದರಿಯಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನ ಕಾಂಗ್ರೆಸ್ ಪಕ್ಷ ಎಲ್ಲರ ರಕ್ಷಣೆ ಮಾಡಲಿದೆ ಎಂದು ನಂಬಿದ್ದಾರೆ.
ಈ ಸರ್ಕಾರ ಕೋವಿಡ್ ಸಮಯದಲ್ಲಿ ಅಸಂಘಟಿತ ಕಾರ್ಮಿಕರಿಗೆ ಸಹಾಯ ಮಾಡಲಿಲ್ಲ. ಇದಕ್ಕೆ ಉತ್ತರವನ್ನು ಚುನಾವಣೆಯಲ್ಲಿ ನೀಡಬೇಕು. ಬಿಜೆಪಿ ನಾಯಕರು ಎಷ್ಟೇ ಹಣ ಖರ್ಚು ಮಾಡಿದರೂ ನೀವು ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದೀರಿ. ನಾವು ಈ ಹಿಂದೆ ಕೊಟ್ಟಿದ್ದ 165 ವಚನಗಳನ್ನು ಉಳಿಸಿಕೊಂಡಿದ್ದೇವೆ. ಬಿಜೆಪಿ 600 ಭರವಸೆ ನೀಡಿ ಶೇ.10 ರಷ್ಟು ಈಡೇರಿಸಿಲ್ಲ. ಅಧಿಕಾರ ಇದ್ದಾಗ ಏನೂ ಮಾಡದವರು ಅಧಿಕಾರ ಹೋದ ನಂತರ ಏನು ಮಾಡುತ್ತಾರೆ. ಪುರಂದರದಾಸರು ಹೇಳಿದಂತೆ, ಕೊಟ್ಟ ಕುದುರೆ ಏರಲಾಗದೆ ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ. ಬಿಜೆಪಿ ಸರ್ಕಾರ ಈಗ ಬಜೆಟ್ ನಲ್ಲಿ ಏನೇ ಘೋಷಣೆ ಮಾಡಿದರೂ ಅದು ಜಾರಿಯಾಗುವುದಿಲ್ಲ. ಕಳೆದ ಬಜೆಟ್ ನಲ್ಲಿ ಘೋಷಿಸಿದ ಶೇ.50ರಷ್ಟು ಕಾರ್ಯಕ್ರಮ ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಬಜೆಟ್ ನಲ್ಲಿ ಬರುವ ಘೋಷಣೆಗಳನ್ನು ನಂಬಬೇಡಿ.
ಈ ಭಾಗದ ಅಭಿವೃದ್ಧಿಗೆ ಮುನಿಯಪ್ಪನವರು ಸಾಕಷ್ಟು ಶ್ರಮ ಹಾಕಿದ್ದಾರೆ. ಇಲ್ಲಿನ ಹೆದ್ದಾರಿಗೆ ಕಾರಣಕರ್ತರಾಗಿದ್ದಾರೆ. ಬೋಗಿ ಕೋಚ್ ಘಟಕ ಸ್ಥಾಪನೆಗೆ ಶ್ರಮಿಸಿದ್ದು, ರಾಜ್ಯ ಸರ್ಕಾರ ಹಣ ಪಾವತಿಸಿದೆ. ಆದರೆ ಕೇಂದ್ರ ಸರ್ಕಾರ ಈ ಯೋಜನೆ ಮಾಡಲು ಮುಂದಾಗಿಲ್ಲ.
ನೀವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ, ಇವರ ಕೈ ಬಲಪಡಿಸಬೇಕು ಎಂದು ಮನವಿ ಮಾಡುತ್ತೇನೆ ಎಂದರು.
*ಕಿಚ್ಚ ಸುದೀಪ್ ಭೇಟಿಯ ಕಾರಣ ತಿಳಿಸಿದ ಡಿ.ಕೆ.ಶಿವಕುಮಾರ್*
https://pragati.taskdun.com/d-k-shivakumarkichcha-sudeepmeetclarification/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ