*ಕಿಡ್ನ್ಯಾಪ್ ಆಗಿದ್ದಾಗಿ ಡ್ರಾಮಾ ಮಾಡಿ ತಂದೆಗೆ 90 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟ ಮಗ*

ಪ್ರಗತಿವಾಹಿನಿ ಸುದ್ದಿ: ಕಿಡ್ನ್ಯಾಪ್ ಆಗಿದ್ದಾಗಿ ನಾಟಕವಾಡಿ ಹೆತ್ತ ತಂದೆಗೆ 90 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಮಗನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮನೀಷ್ (40) ಬಂಧಿತ ಆರೋಪಿ. ಈತ ತನ್ನ ತಂದೆ ಮನೋಹರ್ ಪಟೇಲ್ (62) ಅವರಿಗೆ ಸ್ನೇಹಿತರ ಮೂಲಕ ತನ್ನದೇ ನಂಬರ್‌ನಿಂದ ವಾಟ್ಸಾಪ್ ಕರೆ ಮಾಡಿಸಿ, ನಿಮ್ಮ ಮಗನನ್ನು ಕಿಡ್ನ್ಯಾಪ್ ಮಾಡಿದ್ದೇವೆ ಎಂದು ಹೇಳಿ ಹೆದರಿಸಿದ್ದ. ಮಗನನ್ನು ಬಿಡಬೇಕು ಎಂದಾದರೆ 90 ಲಕ್ಷ ರೂ. ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದ.
ಸದ್ಯ ಆರೋಪಿ ಮಗನನ್ನು ಬೆಂಗಳೂರಿನ ಆರ್.ಆರ್ ನಗರ ಪೊಲೀಸರು ಬಂಧಿಸಿದ್ದಾರೆ. ಹಿಂದಿನ ದಿನ ಹಣದ ವ್ಯವಹಾರಕ್ಕೆಂದು ರೈಲಿನಲ್ಲಿ ಗದಗಕ್ಕೆ ಹೋಗುವುದಾಗಿ ಮನೀಷ್ ಹೇಳಿ ಹೋಗಿದ್ದ. ಬೆಳಗ್ಗೆ ಫೋನ್ ಮಾಡ್ತೀನಿ ಎಂದಿದ್ದ, ಬೆಳಗ್ಗೆ ಕರೆ ಬಂದಾಗ ಮಗನ ಕಿಡ್ನ್ಯಾಪ್ ಆಗಿದೆ ಎಂದಾಗ ಗಾಬರಿಗೊಂಡಿದ್ದ ತಂದೆ ಮನೋಹರ್, ಪೊಲೀಸರಿಗೆ ಮಾಹಿತಿ ತಿಳಿಸಿದ್ದರು.
ಬಳಿಕ ಪೊಲೀಸರು ಮನೀಷ್ ಮೊಬೈಲ್ ಟ್ರ‍್ಯಾಕ್ ಮಾಡಿದ್ದರು. ಆದರೆ ಮೊಬೈಲ್ ಸ್ವಿಚ್ ಆಗಿತ್ತು. ಬಳಿಕ ಒಂದು ನಂಬರ್‌ನಿಂದ ದೂರುದಾರರಿಗೆ ಹಣ ಅರೆಂಜ್ ಆಯ್ತಾ ಅಂತ ಒಂದು ಫೋನ್ ಬಂದಿತ್ತು. ಕರೆ ಬಂದ ನಂಬರ್ ಟ್ರ‍್ಯಾಕ್ ಮಾಡಿ ಮಾಹಿತಿ ಪಡೆದು ಹಾಸನ ಭಾಗದಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು. ಈ ವೇಳೆ ಮನೀಷ್ ಇನ್ನಿಬ್ಬರು ವ್ಯಕ್ತಿಗಳ ಜೊತೆ ಒಂದು ರೂಮ್ ನಲ್ಲಿ ಇರುವುದು ಪತ್ತೆಯಾಗಿತ್ತು.
ಪೊಲೀಸರು ವಿಚಾರಣೆ ನಡೆಸಿದಾಗ ಮನೀಷ್ ಕಿಡ್ನಾಪ್ ನಾಟಕ ಆಡಿ ತಂದೆಯಿಂದ ಹಣ ಕೀಳಲು ಮುಂದಾಗಿದ್ದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮಗ ಸೇರಿ ಮೂವರು ಆರೋಪಿಗಳನ್ನು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



