ಜೈನ್ ಮುನಿಗಳ ಹತ್ಯೆ: ಹೆಬ್ಬಾಳಕರ್, ಜಾರಕಿಹೊಳಿ, ಜೊಲ್ಲೆ ಖಂಡನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ ೧೦೮ ಕಾಮಕುಮಾರ ನಂದಿ ಮಹಾರಾಜರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಅಮಾನುಷ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಅಹಿಂಸೆಯನ್ನು ಬೋಧಿಸುವ ಜೈನ ಧರ್ಮ ಇಡೀ ಮನುಕುಲಕ್ಕೆ ಆದರ್ಶವಾಗಿದೆ. ಅಂತಹ ಧರ್ಮದ ಮುನಿಗಳನ್ನು ಹತ್ಯ ಮಾಡಿರುವುದು ತೀವ್ರ ನೋವನ್ನು ಉಂಟು ಮಾಡಿದೆ. ಅವರ ಸದ್ಭಕ್ತರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಜೊತೆಗೆ, ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ನೀಡುವಂತಾಗಬೇಕು ಎಂದಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಸಂತಾಪ
ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದ ಜೈನ್ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯು ತೀವ್ರ ನೋವು ತಂದಿದೆ ಎಂದು ಲೋಕೋಪಯೋಗಿ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರು ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಚಿವರು, ಜೈನ್ ಮುನಿ ಕಾಮಕುಮಾರ ನಂದಿ ಮಹಾರಾಜರರ ಹತ್ಯೆಯು ಜನತೆಯಲ್ಲಿಯೂ ನೋವು ತರಿಸಿದೆ. ಈ ಪ್ರಕರಣ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಜೈನ್ ಮುನಿಗಳ ಹತ್ಯೆಯಿಂದ ನನಗೂ ಆಘಾತವಾಗಿದೆ ಎಂದು ತಿಳಿಸಿದ್ದಾರೆ.
ಶಿಕ್ಷೆಯಾಗಬೇಕು – ಜೊಲ್ಲೆ
ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ ೧೦೮ ಕಾಮಕುಮಾರ ನಂದಿ ಮಹಾರಾಜರನ್ನು ದುಷ್ಕರ್ಮಿಗಳು ಅಮಾನುಷವಾಗಿ ಹತ್ಯೆ ಮಾಡಿರುವುದನ್ನು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಖಂಡಿಸಿದ್ದಾರೆ.
ಜೈನ ಸಮಾಜದ ಮುನಿಗಳು ಅಹಿಂಸಾವಾದಿಗಳಾಗಿರುವ ಅವರು ಅಹಿಂಸಾ ಪರಮೋಧರ್ಮ ಎಂದು ಬೋದಿಸುವ ಜೈನಮುನಿಗಳಿಗೆ ಈ ರೀತಿಯಾಗಿ ಹತ್ಯೆ ಮಾಡಿರು ವುದು ಸಮಾಜವೇ ತಲೆ ತಗ್ಗಿಸುವಂತಾಗಿದೆ ಎಂದಿದ್ದಾರೆ. ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ಕೊಡಬೇಕು, ಕೊಲೆಗಡುಕರಿಗೆ ಶಿಕ್ಷೆ ಆಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ