
ಪ್ರಗತಿವಾಹಿನಿ ಸುದ್ದಿ, ಪಟ್ನಾ: ಆಸ್ಪತ್ರೆ ಆವರಣದಲ್ಲಿ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿದ್ದ ಮಹಿಳೆಗೆ ಕಿಸ್ ಕೊಟ್ಟು ಓಡಿಹೋಗಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಮೊಹಮ್ಮದ್ ಅಕ್ರಮ್ ಎಂಬಾತನೇ ಬಂಧಿತ ಆರೋಪಿ. ಕಳೆದ ಮಾ.13ರಂದು ಈತ ಸಾದರ್ ಆಸ್ಪತ್ರೆಯ ಆವರಣದಲ್ಲಿ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿದ್ದ ಆರೋಗ್ಯ ಕಾರ್ಯಕರ್ತೆಯೊಬ್ಬರಿಗೆ ಹಿಂಬದಿಯಿಂದ ಬಂದು ಏಕಾಏಕಿ ಹಿಡಿದುಕೊಂಡು ಲಿಪ್ ಲಾಕ್ ಮಾಡಿ ಕಿಸ್ ಕೊಟ್ಟು ಓಡಿಹೋಗಿದ್ದ. ಈ ಘಟನೆಯ ವಿಡಿಯೊ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿ ದೊಡ್ಡ ಸುದ್ದಿಯಾಗಿತ್ತು.
ಹಠಾತ್ ಕಿಸ್ ದಾಳಿಗೆ ಕಂಗಾಲಾದ ಮಹಿಳೆ ತಾವು 2015ರಿಂದಲೂ ಈ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು ಈತನ ಪರಿಚಯವಿಲ್ಲ. ಆರೋಪಿ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತೀವ್ರ ಶೋಧ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಇಷ್ಟಕ್ಕೂ ಈ ಮೊಹಮ್ಮದ್ ಅಕ್ರಮ್ ಕಳ್ಳತನ ಗ್ಯಾಂಗ್ ಒಂದರ ಲೀಡರ್ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಜಮಾಯಿ ಜಿಲ್ಲೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಈತನ ಕಳ್ಳತನದ ಗ್ಯಾಂಗ್ ಸಕ್ರಿಯವಾಗಿದೆ.
ಈ ಮಧ್ಯೆ ಇಂಥದ್ದೊಂದು ಹೊಸ ಚಾಳಿಗೆ ಬಿದ್ದ ಅಕ್ರಮ್ ಈ ತಿಂಗಳಲ್ಲೇ 10ಕ್ಕೂ ಹೆಚ್ಚು ಮಹಿಳೆಯರು, ಯುವತಿಯರ ಮೇಲೆ ಕಿಸ್ ದಾಳಿ ನಡೆಸಿ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಅನೇಕ ಪ್ರಕರಣಗಳಲ್ಲಿ ಈತ ಶಾಮೀಲಾಗಿದ್ದು ತನಿಖೆಯಿಂದ ಈತನ ಇನ್ನಷ್ಟು ಲೀಲೆಗಳು ಹೊರಬರುವ ಸಾಧ್ಯತೆಗಳಿವೆ.