Belagavi NewsBelgaum NewsKannada NewsKarnataka NewsLatestPolitics

*ಕಿತ್ತೂರು ಕರ್ನಾಟಕದ ಅಭಿವೃದ್ಧಿಗಾಗಿ 5,000 ಕೋಟಿ ಅನುದಾನ ಬಿಡುಗಡೆಗಾಗಿ ಸಿಎಂಗೆ ಮನವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಿತ್ತೂರು ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ “ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ” ರಚನೆ ಮಾಡಿ ಪ್ರತಿ ವರ್ಷ 5,000 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲು ಸಿಎಂ ಸಿದ್ದರಾಮಯ್ಯ ಅವರಿಗೆ ಎಲ್ಲ ಶಾಸಕರ ಪರವಾಗಿ ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಹೆಚ್. ಕೋನರಡ್ಡಿ ಮನವಿ ಸಲ್ಲಿಸಿದರು.

ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯುಳ್ಳ ಬೆಳಗಾವಿ ವಿಭಾಗದ (ಕಿತ್ತೂರು ಕರ್ನಾಟಕ) ಜಿಲ್ಲೆಗಳಾದ ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಅಭಿವೃದ್ಧಿಯ ದೃಷ್ಟಿಯಿಂದ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ ಮಾಡಿ ಪ್ರತಿ ವರ್ಷ ವಿಶೇಷ ಅನುದಾನ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಲ್ಲ ಶಾಸಕರ ಪರವಾಗಿ ಮನವಿ ಸಲ್ಲಿಸಿದ್ದೇನೆ ಎಂದು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು. 

ಸುವರ್ಣಸೌಧದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಮುಂಬೈ ಕರ್ನಾಟಕದ ಬೆಳಗಾವಿ ವಿಭಾಗದ ಕಿತ್ತೂರ ಕರ್ನಾಟಕ ಅಭಿವೃದ್ಧಿ ವಿಷಯದಲ್ಲಿ ಇನ್ನೂ ನಿರೀಕ್ಷಿತ ಮಟ್ಟವನ್ನು ತಲುಪಿಲ್ಲ. ಈ ಭಾಗದ ಪ್ರಗತಿಗೆ ವಿಶೇಷ ಒತ್ತು ನೀಡುವ ಅವಶ್ಯಕತೆ ಇದ್ದು ಬೇರೆ ಬೇರೆ ಪ್ರದೇಶಗಳಿಗೆ ಹೋಲಿಸಿದರೆ, ಕಿತ್ತೂರು ಕರ್ನಾಟಕ ಭಾಗವು ಆರ್ಥಿಕವಾಗಿ ಹಾಗೂ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (ಶಿಕ್ಷಣ, ಆರೋಗ್ಯ, ಸಾಕ್ಷರತೆ) ತೀರಾ ಹಿಂದುಳಿದಿದೆ. ಈ ಭಾಗದ ಜಿಲ್ಲೆಗಳ ತಲಾ ಆದಾಯ ರಾಜ್ಯದ ಸರಾಸರಿಗಿಂತ ಕಡಿಮೆ ಇದ್ದು, ರಾಜ್ಯದಲ್ಲಿ ಅತೀ ಕಡಿಮೆ ತಲಾ ಆದಾಯ ಹೊಂದಿದೆ. ಇಲ್ಲಿ ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯಗಳ ಕೊರತೆಯಿದೆ. ಡಾ: ನಂಜುಂಡಪ್ಪ ವರದಿ ಅನ್ವಯ ಈ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ವಿಶೇಷ ಆರ್ಥಿಕ ಪ್ಯಾಕೇಜ್, ಹೆಚ್ಚಿನ ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಯ ಅಗತ್ಯವಿತ್ತು. 

ಆದ್ದರಿಂದ, ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನಾತ್ಮಕ ರಕ್ಷಣೆ ಮತ್ತು ಮಂಡಳಿ ಇರುವಂತೆಯೇ ಕಿತ್ತೂರು ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ “ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ” ಯನ್ನು ರಚನೆ ಮಾಡಿ ಈ ಮಂಡಳಿಗೆ ಪ್ರತಿ ವರ್ಷ ಆಯ-ವ್ಯಯದಲ್ಲಿ ಕನಿಷ್ಠ ರೂ. 5,000 ಕೋಟಿ ವಿಶೇಷ ಅನುದಾನವನ್ನು ಮೀಸಲಿಡಬೇಕೆಂದು ಕಿತ್ತೂರ ಕರ್ನಾಟಕ ಭಾಗದ ಎಲ್ಲ ಶಾಸಕರು ಚಳಿಗಾಲದ ಅಧಿವೇಶನದಲ್ಲಿ ಪಕ್ಷಾತೀತವಾಗಿ ಮಾತನಾಡಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿಯೇ ಮುಖ್ಯಮಂತ್ರಿಗಳು ಈ ವಿಷಯವನ್ನು ಘೋಷಣೆ ಮಾಡಬೇಕೆಂದು ಈ ಭಾಗದ ಎಲ್ಲ ಶಾಸಕರ ಪರವಾಗಿ ಕೋನರಡ್ಡಿ ಮನವಿ ಸಲ್ಲಿಸಿದರು.

Home add -Advt

ಈ ಸಂದರ್ಭದಲ್ಲಿ ಹಿರಿಯ ಸಚಿವರಾದ ಹೆಚ್.ಕೆ. ಪಾಟೀಲ, ಜಿ. ಪರಮೇಶ್ವರ, ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರುಗಳು ಉಪಸ್ಥಿತರಿದ್ದರು.

Related Articles

Back to top button