Latest

45.56 ಕೋಟಿ ರೂ. ವೆಚ್ಚದಲ್ಲಿ ಕಿತ್ತೂರು ಅರಮನೆ, ಕೋಟೆ ಸಂರಕ್ಷಣೆ, ಜೀರ್ಣೋದ್ಧಾರ ಹಾಗೂ ವಸ್ತುಸಂಗ್ರಹಾಲಯ ನವೀಕರಣಕ್ಕೆ ಅನುಮೋದನೆ

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:  ಕಿತ್ತೂರಿನ ರಾಣಿ ಚೆನ್ನಮ್ಮನ ಅರಮನೆ ಮತ್ತು ಕೋಟೆಯನ್ನು 18.05 ಕೋಟಿ ರೂ.ಗಳ ವೆಚ್ಚದಲ್ಲಿ ಸಂರಕ್ಷಣೆ ಹಾಗೂ ಪುನರ್ ಸ್ಥಾಪನೆಯನ್ನು ಹಾಗೂ ವಸ್ತು ಸಂಗ್ರಹಾಲಯದ ನವೀಕರಣ ಮತ್ತು ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು 27. 51 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುಮೋದನೆ ನೀಡಿದರು.

ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ 4 ನೇ ಸಭೆಯಲ್ಲಿ ಅವರು ಮಾತನಾಡಿ ಕಿತ್ತೂರು ಕೋಟೆ ಅತ್ಯಂತ ಶಿಥಿಲವಾಗಿದೆ. ಇದನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಪುನರ್ ಸ್ಥಾಪನೆ ಮತ್ತು ಜೀರ್ಣೋದ್ಧಾರ ಎರಡೂ ಆಗಬೇಕಿದೆ. ಕೋಟೆಯ ಒಳಭಾಗದ ಜೀರ್ಣೋದ್ಧಾರ ಸರಿಯಾಗಿ ಮಾಡಬೇಕು ಹಾಗೂ ಕೋಟೆಯ ಸುತ್ತ ಸ್ವಚ್ಛ ಮಾಡಬೇಕು. ಇದರ ನಿರ್ವಹಣೆಗೆ ಅಂದಾಜುಪಟ್ಟಿಯನ್ನು ತಯಾರಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ವಸ್ತು ಸಂಗ್ರಹಾಲಯದಲ್ಲಿ ಕಿತ್ತೂರು ಸಂಸ್ಥಾನದ ಸಂಪೂರ್ಣ ಕಥೆಯನ್ನು ಹೇಳುವಂತೆ ಅಭಿವೃದ್ಧಿಗೊಳಿಸಬೇಕು. ಪ್ರತಿ ಪಾತ್ರಕ್ಕೂ ಸಮಾನ ಮಹತ್ವವನ್ನು ನೀಡಬೇಕು ಕಿತ್ತೂರು ಅರಮನೆಯ ದರ್ಬಾರಿನ ಪ್ರತಿರೂಪವನ್ನು ನಿರ್ಮಿಸಲು ಹುಬ್ಬಳ್ಳಿಯ ಮೂರು ಸಾವಿರ ಮಠ ಹಾಗೂ ಅಮ್ಮಿನಭಾವಿ ಮಠಗಳ ವಾಸ್ತುಶಿಲ್ಪವನ್ನು ಅಧ್ಯಯನ ಮಾಡುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು. ಹಾಲೋಗ್ರಾಫಿಕ್ ಸ್ಟುಡಿಯೋ ನಿರ್ಮಾಣವನ್ನು ಮುಂದಿನ ಹಂತದಲ್ಲಿ ಕೈಗೊಳ್ಳುವಂತೆ ಸೂಚಿಸಿದರು.

ಕಾಮಗಾರಿಯನ್ನು ಅನುಭವ ಮತ್ತು ಪರಿಣಿತಿ ಹೊಂದಿರುವ ಗುತ್ತಿಗೆದಾರರಿಂದ ಮಾಡಿಸುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

 

*ಕೂಡಲ ಸಂಗಮ ಬಸವತತ್ವದ ಅರಿವು ಮೂಡಿಸುವ ತಾಣವಾಗಬೇಕು

 

ಕೂಡಲ ಸಂಗಮವು ಜನಾಕರ್ಷಣೆಯ ತಾಣವಾಗಬೇಕು ಹಾಗೂ ಬಸವ ತತ್ವದ ಅರಿವು ಮೂಡಿಸಬೇಕು. ಇದಕ್ಕೆ ಪೂರಕವಾಗಿ ಕೂಡಲಸಂಗಮವನ್ನು ಅಭಿವೃದ್ಧಿ ಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಿವಿಲ್ ಕಾಮಗಾರಿಗಳ ಜೊತೆಗೆ, ಕೂಡಲ ಸಂಗಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮ್ಯೂಸಿಯಂನಲ್ಲಿ ಬಸವಣ್ಣನವರ ಜೀವನಚರಿತ್ರೆ, ಅವರ ವಿಚಾರಧಾರೆ ಹಾಗೂ ಅವರ ಸಮಕಾಲೀನ ಶರಣರ ಕುರಿತ ಮಾಹಿತಿಯನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಳವಡಿಸಲು ಸೂಚಿಸಿದರು. ಇದಕ್ಕೆ ಅತ್ಯುತ್ತಮ ಮ್ಯೂಸಿಯಂ ಕ್ಯುರೇಟರ್ ಅವರನ್ನು ನೇಮಕ ಮಾಡಿಕೊಳ್ಳುವಂತೆ ತಿಳಿಸಿದರು.
ಮುಂದಿನ ಮೇ ಅಂತ್ಯದೊಳಗೆ ಮೊದಲ ಹಂತವನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಬಸವ ಅಂತರರಾಷ್ಟ್ರೀಯ ಕೇಂದ್ರದ ಕಟ್ಟಡದ ಪರಿಷ್ಕೃತ ವಾಸ್ತು ವಿನ್ಯಾಸಕ್ಕೆ ಅನುಗುಣವಾಗಿ ಪರಿಷ್ಕೃತ ಅಂದಾಜನ್ನು ಅನುಮೋದನೆಗಾಗಿ ಸಲ್ಲಿಸುವಂತೆ ಮುಖ್ಯಮಂತ್ರಿಯವರು ಸೂಚಿಸಿದರು.
ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ದೇವಸ್ಥಾನ ಹಾಗೂ ಮಾರಾಟ ಮಳಿಗೆಗಳು ಮುಚ್ಚಿದ್ದವು. ಈ ಹಿನ್ನೆಲೆಯಲ್ಲಿ ಕೂಡಲಸಂಗಮದ ಮಾರಾಟ ಮಳಿಗೆ ಬಾಡಿಗೆದಾರರು ಆರ್ಥಿಕ ಸಂಕಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಲಾಕ್ ಡೌನ್ ಅವಧಿಯ ಬಾಡಿಗೆ ಮೊತ್ತ ಮನ್ನಾ ಮಾಡಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಸಭೆಯಲ್ಲಿ ಸಚಿವರಾದ ಗೋವಿಂದ ಎಂ. ಕಾರಜೋಳ, ಮುರುಗೇಶ್ ನಿರಾಣಿ, ಪ್ರಾಧಿಕಾರದ ವ್ಯಾಪ್ತಿಯ ಶಾಸಕರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

ಬಾಡ ಕನಕದಾಸರ ಅರಮನೆಯಲ್ಲಿ ಧ್ವನಿ-ಬೆಳಕು ಪ್ರದರ್ಶನಕ್ಕೆ ವ್ಯವಸ್ಥೆ

 

ಸಂತ ಕನಕದಾಸರ ಜನ್ಮಸ್ಥಳ ಬಾಡದಲ್ಲಿ ನಿರ್ಮಿಸಲಾಗಿರುವ ಕನಕದಾಸರ ಅರಮನೆಯಲ್ಲಿ ಧ್ವನಿ-ಬೆಳಕು ಪ್ರದರ್ಶನ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದರು.
ಅವರು ಇಂದು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನಕದಾಸರ ಅರಮನೆಯು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಇದನ್ನು ಇನ್ನಷ್ಟು ಉತ್ತಮ ಪಡಿಸುವ ನಿಟ್ಟಿನಲ್ಲಿ ಧ್ವನಿ-ಬೆಳಕು ಪ್ರದರ್ಶನ ಪ್ರಾರಂಭಿಸಲು ಸೂಚಿಸಿದರು. ಇದಕ್ಕೆ ಅತ್ಯುತ್ತಮ ಸಂಸ್ಥೆಗಳ ಮೂಲಕ, ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು.
ಅಂತೆಯೇ ಅರಮನೆಯಲ್ಲಿ ಕನಕದಾಸರ ಜೀವನ ಕುರಿತು ಅನಿಮೇಷನ್ ಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ. ಈ ತಂತ್ರಜ್ಞಾನವನ್ನು ಉನ್ನತೀಕರಿಸಿ, 3ಡಿ ಚಿತ್ರ ನಿರ್ಮಾಣ ಮಾಡಲು ಮುಖ್ಯಮಂತ್ರಿಗಳು ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಡಳಿತ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ವರದಿ ಸಲ್ಲಿಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಸಚಿವರಾದ ಶಿವರಾಮ ಹೆಬ್ಬಾರ, ಬಿ.ಸಿ. ಪಾಟೀಲ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ. ಎನ್. ಮಂಜುಳಾ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಮೂರೇ ತಿಂಗಳಲ್ಲಿ ಕರಗಿದ ರಾಧಾಕಿಶನ್ ದಮಾನಿ ಆಸ್ತಿ; ಡಿ-ಮಾರ್ಟ್ ಗೆ ಹೊಡೆತ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button