ಕಿತ್ತೂರು ಬಂದ್: ವೈದ್ಯೆ ಮೇಲೆ ಹಲ್ಲೆಗೆ ಯತ್ನದ ಹಿಂದೆ ಇಬ್ಬರು ವೈದ್ಯರ ಕುಮ್ಮಕ್ಕು?
ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು – ಇಲ್ಲಿಯ ಮಹಿಳಾ ವೈದ್ಯೆಗೆ ಜೀವ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ ಘಟನೆ ಖಂಡಿಸಿ ಪಟ್ಟಣದ ವರ್ತಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ನೀಡಿದ ಕಿತ್ತೂರು ಬಂದ್ ಗೆ ಗುರುವಾರ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಮುಂಜಾನೆಯಿಂದ ಎಲ್ಲರೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಔಷಧ ವ್ಯಾಪಾರಸ್ಥರು, ಮದ್ಯದಂಗಡಿಗಳು ಸೇರಿ ಎಲ್ಲ ವ್ಯಾಪಾರ ವಹಿವಾಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಮಹಿಳಾ ವೈದ್ಯೆಗೆ ನಿಮ್ಮ ಜೊತೆ ನಾವಿದ್ದೇವೆ, ಇಂತಹ ಪುಂಡ ಪೋಕರಿಗಳಿಗೆ ಎದೆ ಗುಂದದೆ ಕರ್ತವ್ಯ ನಿರ್ವಹಿಸಿ ಎಂದು ಆತ್ಮಸ್ಥೈರ್ಯ ತುಂಬಿ ಈ ಬಂದ್ ಮೂಲಕ ಬೆಂಬಲ ಸೂಚಿಸಿದರು.
ವರ್ತಕರ ಸಂಘ, ಖಾಸಗಿ ವೈದ್ಯರ ಸಂಘ, ನ್ಯಾಯವಾದಿಗಳ ಸಂಘ, ಮದ್ಯಮಾರಾಟಗಾರರ ಸಂಘ, ವಿವಿಧ ಮಹಿಳಾ ಸಂಘಟನೆಗಳು, ಯುವಕ ಸಂಘಟನೆಗಳು, ಸೇರಿದಂತೆ ಪಕ್ಷಾತೀತವಾಗಿ ಈ ಘಟನೆಯನ್ನು ಖಂಡಿಸಿ ಮುಂದೆ ಇಂತಹ ಘಟನೆಗಳು ನಡೆದರೆ ಎಲ್ಲರೂ ಅದನ್ನು ಸಮರ್ಥವಾಗಿ ಒಗ್ಗಟ್ಟಾಗಿ ಎದುರಿಸಲು ಸಿದ್ದರಿದ್ದೇವೆಂಬ ಸಂದೇಶ ಸಾರಿದರು.
ಇಬ್ಬರು ವೈದ್ಯರ ಕುಮ್ಮಕ್ಕು -ಶಾಸಕರ ಆರೋಪ
ವೈದ್ಯಗೆ ಜೀವ ಬೆದರಿಕೆ ಪ್ರಕರಣದ ಹಿಂದೆ ಇಬ್ಬರು ವೈದ್ಯರ ಕುಮ್ಮಕ್ಕು ಇರುವುದು ಕಂಡು ಬಂದಿದೆ, ಇಲಾಖಾಧಿಕಾರಿಗಳು ತಪ್ಪಿತಸ್ಥರ ಮೇಲೆ ಕಟ್ಟು ನಿಟ್ಟಿನ ಕ್ರಮ ಪ್ರಕಟಿಸಬೇಕೆಂದು ಶಾಸಕ ಮಹಾಂತೇಶ ದೊಡಗೌಡರ ಆಗ್ರಹಿಸಿದರು.
ವೈದ್ಯೆಗೆ ಜೀವ ಬೆದರಿಕೆ ಖಂಡಿಸಿ ಕಿತ್ತೂರು ಬಂದ್ ಹಿನ್ನೆಲೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈ ಘಟನೆಗೆ ಸಂಬಂಧಿಸಿದಂತೆ ವೈದ್ಯೆ ಮನನೊಂದು ರಾಜೀನಾಮೆಗೆ ಮುಂದಾಗಿದ್ದರು, ಆದರೆ ಅವರಿಗೆ ಧೈರ್ಯ ತುಂಬುವ ಮೂಲಕ ರಾಜಿನಾಮೆ ನೀಡದಂತೆ ಮನವೊಲಿಸಲಾಯಿತು, ಈ ಘಟನೆಯನ್ನು ಕಿತ್ತೂರು ನಾಡಿನ ಜನರು ಖಂಡಿಸಿ ಸ್ವಯಂ ಪ್ರೇರಿತರಾಗಿ ಬಂದ್ ಮಾಡಿರುವುದು ಸಮಾಜಘಾತುಕರಿಗೆ ಎಚ್ಚರಿಕೆಯಾಗಿದೆ ಎಂದರು.
ಇಂತಹ ಘಟನೆಗಳಿಗೆ ಸಂಬಂಧಿಸಿದಂತೆ ನೌಕರರು ಯಾವುದೇ ಕಾರಣಕ್ಕೂ ಭಯ ಪಡುವ ಅವಶ್ಯಕತೆ ಇಲ್ಲ, ನಮ್ಮ ಕಾರ್ಯ ಪಡೆ ನಿಮ್ಮ ಜೊತೆ ಸದಾ ಇರುತ್ತದೆ. ಈ ಪ್ರಕರಣವನ್ನು ಪೊಲೀಸ್ ಅಧಿಕಾರಿಗಳು ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಇಂತಹ ದುಷ್ಕೃತ್ಯ ಮಾಡುವ ಸಮಾಜಘಾತುಕ ಶಕ್ತಿಗಳನ್ನು ಯಾವುದೇ ಕಾರಣಕ್ಕೂ ಸಹಿಸುವದಿಲ್ಲ, ಇಂತಹ ರೌಡಿಸಂ ಮಾಡುವ ವ್ಯಕ್ತಿಗಳನ್ನು ಮಟ್ಟಹಾಕಬೇಕು, ಈ ಘಟನೆಯಲ್ಲಿ ಪ್ರಚೋದನೆ ನೀಡಿದವರ ಮೇಲೆ ಕಠಿಣ ಶಿಕ್ಷೆಯಾಗಬೇಕು, ಆರೋಗ್ಯ ಇಲಾಖೆಯ ಜಿಲ್ಲಾ ವೈದ್ಯಾಧಿಕಾರಿ ದೌರ್ಜನ್ಯಕ್ಕೊಳಗಾದ ವೈದ್ಯರ ಬೆಂಬಲಕ್ಕೆ ಪ್ರಾಮಾಣಿಕವಾಗಿ ನಿಲ್ಲಬೇಕು, ಈ ಘಟನೆಯಿಂದ ಕಿತ್ತೂರಿಗೆ ಕಪ್ಪು ಚುಕ್ಕೆ ಉಂಟಾಗಿದೆ, ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕೆಂದು ಸಂದೀಪ ದೇಶಪಾಂಡೆ, ಬಸವರಾಜ ಪರವಣ್ಣವರ, ಮಲ್ಲಣ್ಣ ಸಾಣಿಕೊಪ್ಪ, ವಿ.ಡಿ.ಉಣಕಲ್ಲಕರ, ಮೊಹನ ಅಂಗಡಿ, ಜಗದೀಶ ಬಿಕ್ಕಣ್ಣವರ, ಹನುಮಂತ ಲಂಗೋಟಿ, ಮಹಾದೇವಿ ಮಣವಡ್ಡರ, ಡಾ. ಮಂಜುನಾಥ ಮುದಕನಗೌಡರ, ಎಸ್.ಪಿ.ಹಿರೇಮಠ ಸೇರಿದಂತೆ ಇತರರು ಆಗ್ರಹಿಸಿದರು.
ಹಿರಿಯ ಆರೋಗ್ಯಾಧಿಕಾರಿ. ಐ.ಪಿ.ಗಡಾದ, ತಹಶೀಲ್ದಾರ ಪ್ರವೀಣ ಜೈನ್, ತಾಪಂ ಇಒ ಸುಭಾಸ ಸಂಪಗಾಂವಿ, ಸಿಪಿಐ ಶ್ರೀಕಾಂತ ತೋಟಗಿ, ಟಿಎಚ್‌ಒ ಎಸ್.ಎಸ್.ಶಿದ್ದಣ್ಣವರ, ಎಸ್.ಸಿ.ಮಾಸ್ತಿಹೊಳಿ ಹಾಜರಿದ್ದರು.
ವರ್ತಕರ ಸಂಘ, ಮಹಿಳಾ ಸಂಘ, ಖಾಸಗಿ ವೈದ್ಯರ ಸಂಘ, ಔಷಧಿ ವ್ಯಾಪಾರಸ್ಥರ ಸಂಘ, ಸೇರಿದಂತೆ ವಿವಿಧ ಸಂಘಟನೆಗಳು ಕಠೀಣ ಕ್ರಮಕ್ಕೆ ಆಗ್ರಹಿಸಿ ಶಾಸಕರ ಹಾಗೂ ತಹಶೀಲ್ದಾರಗೆ ಮನವಿ ಪತ್ರ ಸಲ್ಲಸಿದರು.
ಸಭೆ ನಿರ್ಣಯ
ಸರ್ಕಾರಿ ಆಸ್ಪತ್ರೆಯ ಮಹಿಳಾ ವೈದ್ಯೆಗೆ ಜೀವ ಬೆದರಿಕೆ ಹಾಗೂ ಹಲ್ಲೆಗೆ ಯತ್ನಿಸಿದ ಆರೋಪಿಗಳ ಹಿಂದೆ ಪ್ರಚೋದನೆ ನೀಡುತ್ತಿರುವ ಇಬ್ಬರು ವೈದ್ಯರ ಮೇಲೆ ಪ್ರಕರಣ ದಾಖಲಿಸಿಬೇಕು. ಘಟನೆಯಿಂದ ಮನನೊಂದು ಮಾಹಿತಿ ನೀಡಲು ತೆರಳಿದ್ದ ವೈದ್ಯರೊಂದಿಗೆ ಜಿಲ್ಲಾ ಆರೋಗ್ಯಾಧಿಕಾರಿ ನಡೆದುಕೊಂಡ ವರ್ತನೆಯ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿ ಈ ಕುರಿತು ಮುಖ್ಯಮಂತ್ರಿಗಳ ಹಾಗೂ ಆರೋಗ್ಯ ಸಚಿವರ ಮೇಲೆ ಒತ್ತಡ ತರುವಂತೆ ಶಾಸಕ ಮಹಾಂತೇಶ ದೊಡಗೌಡರ ಅವರಿಗೆ ಆಗ್ರಹಿಸಿ ಗುರುವಾರ ನಡೆದ ಸಭೆಯಲ್ಲಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ