
ಪ್ರಗತಿವಾಹಿನಿ ಸುದ್ದಿ, ಕಿತ್ತೂರು: ಪ್ರತಿವರ್ಷದಂತೆ ಈ ಬಾರಿಯೂ ಕಿತ್ತೂರು ಉತ್ಸವವನ್ನು ಅಕ್ಟೋಬರ್ ೨೩, ೨೪ ಹಾಗೂ ೨೫ ರಂದು ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಅಚರಿಸಲಾಗುವುದು ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ (ಅ.೨೧) ನಡೆದ ಕಿತ್ತೂರು ಉತ್ಸವ-೨೦೧೯ ಕುರಿತ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪ್ರತಿವರ್ಷದಂತೆ ಈ ವರ್ಷ ಕೂಡಾ ಉತ್ಸವದಲ್ಲಿ ಸ್ಥಳೀಯ ಹಾಗೂ ಹೊರಗಿನ ಕಲಾವಿದರಿಗೆ ಅವಕಾಶವನ್ನು ನೀಡಲಾಗಿದೆ. ಉತ್ಸವದಲ್ಲಿ ಹೆಚ್ಚಿನ ರೀತಿಯಲ್ಲಿ ಮಳಿಗೆಗಳು ಬರುವ ಸಾಧ್ಯತೆ ಇದೆ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಕಿತ್ತೂರು ಉತ್ಸವಕ್ಕೆ ೧ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಹಾಗೂ ರಾಜ್ಯ ಮಟ್ಟದ ಕೃಷಿ ವಿಚಾರ ಸಂಕಿರಣ, ರಾಜ್ಯ ಮಟ್ಟದ ಕವಿ ಗೋಷ್ಟಿ, ಪುರುಷ ಹಾಗೂ ಮಹಿಳೆಯರಿಗೆ ಕುಸ್ತಿ, ಮುಕ್ತ ಕಬಡ್ಡಿ, ವಾಲಿಬಾಲ್, ಸೈಕ್ಲಿಂಗ್ ಕ್ರೀಡಾ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.
ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ ನಾಡ ಹಬ್ಬವಾದ ಕಿತ್ತೂರು ಉತ್ಸವದಲ್ಲಿ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್. ಬಿ.ಬೊಮ್ಮನಹಳ್ಳಿ
ಹೇಳಿದರು.
ಕಿತ್ತೂರು ಚೆನ್ನಮ್ಮ ಉತ್ಸವ ಕಾರ್ಯಕ್ರಮ ದೇಶದ ಹೆಮ್ಮೆಯ ಕಾರ್ಯಕ್ರಮವಾಗಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಸ್ವಾತಂತ್ರ್ಯ ಕಹಳೆಯನ್ನು ಉದೀದ ಮೊದಲ ಮಹಿಳೆ ಹಾಗೂ ಸ್ವಾತಂತ್ರ್ಯ ಮೂಲಭೂತ ಕಾರಣೀಕೃತರಾದವರು ವೀರ ರಾಣಿ ಚೆನ್ನಮ್ಮ ಅವರು ಎಂದು ಹೇಳಿದರು.

ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಅಕ್ಟೋಬರ್ 23 ರಂದು ಸಂಜೆ 7 ಗಂಟೆಗೆ ಈ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಅಂದು ಬೆಳಿಗ್ಗೆ ೮-೩೦ ಗಂಟೆಗೆ ಬೆಳಗಾವಿ ಸಮೀಪದ ಕಾಕತಿಯಲ್ಲಿ ರಾಣಿ ಚೆನ್ನಮ್ಮ ಮೂರ್ತಿಯ ಪೂಜೆ ನಡೆಯಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಿತ್ತೂರು ಉತ್ಸವ-೨೦೧೯ ರ ಪ್ರಚಾರಸಾಮಗ್ರಿಗಳನ್ನು ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಬಿಡುಗಡೆಗೊಳಿಸಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗಂಟಿ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಕಿತ್ತೂರ ತಹಶಿಲ್ದಾರರ ಪ್ರವೀಣ ಜೈನ್ ಅವರು ಉಪಸ್ಥಿತರಿದ್ದರು.
ಪರಿಶೀಲನೆ

ಇದೇ ಅ.೨೩ ರಿಂದ ನಡೆಯಲಿರುವ ಕಿತ್ತೂರು ಉತ್ಸವದಲ್ಲಿ ಸಾವಿರಾರು ಜನರು ಭಾಗವಹಿಸಲಿದ್ದು, ಯಾವುದೇ ರೀತಿಯ ಅನಾನುಕೂಲ ಆಗದಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಿತ್ತೂರು ಉತ್ಸವ-೨೦೧೯ ರ ಹಿನ್ನೆಲೆಯಲ್ಲಿ ಸೋಮವಾರ(ಅ.೨೧) ಸಂಜೆ ಕಿತ್ತೂರಿಗೆ ಭೇಟಿ ನೀಡಿ ಸಮಾರಂಭದ ಮುಖ್ಯ ವೇದಿಕೆ, ಕೋಟೆಯನ್ನು ಪರಿಶೀಲಿಸಿದರು.
ಸಾವಿರಾರು ಜನರು ಆಗಮಿಸುವುದರಿಂದ ಸೂಕ್ತ ಆಸನ, ಧ್ವನಿ-ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಜನರ ಅಗತ್ಯಕ್ಕೆ ಅನುಗುಣವಾಗಿ ಬೇರೆ ಬೇರೆ ಕಡೆಗೆ ಮೊಬೈಲ್ ಶೌಚಾಲಯಗಳು, ನೀರಿನ ವ್ಯವಸ್ಥೆಯನ್ನು ಒದಗಿಸಬೇಕು ಎಂದು ತಿಳಿಸಿದರು.

ಕೋಟೆ, ವಸ್ತುಸಂಗ್ರಹಾಲಯ ಹಾಗೂ ವಸ್ತು ಪ್ರದರ್ಶನ ಮಳಿಗೆಗಳನ್ನು ಪರಿಶೀಲಿಸಿದ ಅವರು, ಮಳೆಯಾಗಿರುವುದರಿಂದ ಕೋಟೆ ಆವರಣವನ್ನು ಸ್ವಚ್ಛಗೊಳಿಸಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಲು ಅನುಕೂಲವಾಗುವಂತೆ ಮಾಡಬೇಕು.
ಮುಖ್ಯ ವೇದಿಕೆ ಹಾಗೂ ಕೋಟೆ ಸುತ್ತಮುತ್ತಲು ಇನ್ನೂ ಹೆಚ್ವಿನ ಅಲಂಕಾರಿಕ ವಿದ್ಯುದೀಪಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು, ಸೂಕ್ತ ಭದ್ರತೆ ಮತ್ತು ಸಮರ್ಪಕ ಪಾರ್ಕಿಂಗ್ ವ್ಯವಸ್ಥೆಯ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಉತ್ಸವವನ್ನು ಅಚ್ಚುಕಟ್ಟಾಗಿ ಹಾಗೂ ಸಂಭ್ರಮದಿಂದ ನಡೆಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ತಿಳಿಸಿದರು.
ಉತ್ಸವದ ಸಿದ್ಧತೆ, ತುರ್ತು ವೈದ್ಯಕೀಯ ಸೌಲಭ್ಯ, ಕಲಾತಂಡಗಳಿಗೆ ಊಟ, ವಸತಿ ವ್ಯವಸ್ಥೆ ಸೇರಿದಂತೆ ಉತ್ಸವವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ತಹಶೀಲ್ದಾರ ಪ್ರವೀಣ ಜೈನ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ