Belagavi NewsBelgaum NewsKarnataka NewsLatestPolitics

*ಭಾರತೀಯ ಮಹಿಳೆಯರಿಗೆ ಸ್ಫೂರ್ತಿ, ಸ್ವಾಭಿಮಾನಕ್ಕೆ ಇನ್ನೊಂದು ಹೆಸರೇ ಕಿತ್ತೂರು ರಾಣಿ ಚನ್ನಮ್ಮ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*

ಪ್ರಗತಿವಾಹಿನಿ ಸುದ್ದಿ: ಹೆಣ್ಣುಮಕ್ಕಳು ಮನೆಯಿಂದ ಹೊರ ಬಾರದಂತಹ ಪರಿಸ್ಥಿತಿಯಲ್ಲಿ ಕೆಚ್ಛೆದೆಯಿಂದ ಹೋರಾಡಿದ ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮ ಭಾರತೀಯ ಮಹಿಳೆಯರ ಪಾಲಿಗೆ ಇಂದಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ವೀರರಾಣಿ ಕಿತ್ತೂರು ಚನ್ನಮ್ಮನವರ ಐತಿಹಾಸಿಕ 200ನೇ ವಿಜಯೋತ್ಸವ ಹಾಗೂ ಕಿತ್ತೂರು ಉತ್ಸವದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಸ್ವಾಭಿಮಾನಿಗಳ ನಾಡು ಕಿತ್ತೂರಿನಲ್ಲಿ ವಿಜಯೋತ್ಸವ ಅತ್ಯಂತ ಅರ್ಥಪೂರ್ಣವಾಗಿ ನಡೆಯುತ್ತಿದೆ ಎಂದರು.

ಸ್ವಾಭಿಮಾನಕ್ಕೆ ಇನ್ನೊಂದು ಹೆಸರೇ ಚೆನ್ನಮ್ಮ. ಮಹಿಳೆಯರು ಹೊರಗೆ ಬಾರದಂತಹ ಸ್ಥಿತಿ ಇದ್ದಾಗ ಹೊರಗೆ ಬಂದು ಬ್ರಿಟಿಷರ ವಿರುದ್ಧ ಹೋರಾಡಿದವರು ಚೆನ್ನಮ್ಮ. ಹೆಣ್ಣುಮಕ್ಕಳಿಗೆ ಆದರ್ಶವಾಗಿದ್ದಾರೆ ನಮ್ಮ ಚನ್ನಮ್ಮ ಎಂದು ಹೇಳಿದರು.

ಇಂದಿನ ಪೀಳಿಗೆ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಮರೆಯುತ್ತಿದೆ. ಆದರೆ, ಅದಾಗಬಾರದು, ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ಮೊದಲಾವರು ನಮಗೆ ಆದರ್ಶರಾಗಬೇಕು ಎಂದು ಸಚಿವರು ಕರೆ ನೀಡಿದರು.

ನಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ, ನಮ್ಮ ಮುಖ್ಯಮಂತ್ರಿ, ಸರ್ಕಾರದ ಮೇಲಿರಲಿ. ಸರ್ಕಾರದಿಂದ ಉತ್ತಮ ಕಾರ್ಯಕ್ರಮಗಳನ್ನು ಕೊಡಲಾಗುತ್ತಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ಮೂಲಕ 2000 ರೂಪಾಯಿ ನೀಡಲಾಗುತ್ತಿದೆ. ನಾಡಿನ ಅಭಿವೃದ್ಧಿ, ಶ್ರೇಯೋಭಿವೃದ್ಧೀಗಾಗಿ ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಸಚಿವರು ಹೇಳಿದರು.

ಸಂಸದ ವಿಶ್ವೇಶ್ವರ ಹೆಗಡೆಯವರ ಪ್ರಯತ್ನದಿಂದ ರಾಣಿ ಚನ್ನಮ್ಮ ಅವರ ಅಂಚೆ ಚೀಟಿ ಬಿಡುಗಡೆ ಮಾಡಿದ್ದಕ್ಕೆ ರಾಜ್ಯ ಸರ್ಕಾರದ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸುತ್ತಿದ್ದು, ಪಂಚಮಸಾಲಿ ಮಠದ ಬಸವ ಜಯಮೃತ್ಯುಂಜಯ ಸ್ವಾಮಿಗಳು ದೆಹಲಿಯಲ್ಲಿ ಚನ್ನಮ್ಮನ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರಿಂದ ಅವರು ಕೂಡ ಅಂದು ಹಾಜರಿರುವರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ ಹಂಚಿಕೊಂಡರು.

ಈ ವೇಳೆ ವಿಜಯೋತ್ಸವದ ಸ್ಮರಣ ಸಂಚಿಕೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಿಡುಗಡೆಗೊಳಿಸಿದರು.

ಸಮಾರಂಭದಲ್ಲಿ ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ನಿಚ್ಚಣಕಿಯ ಶ್ರೀ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಮಹಾಸ್ವಾಮಿಗಳು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ್, ರಾಜು ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಎಸ್ಪಿ ಭೀಮಾ ಶಂಕರ ಗುಳೇದ, ಜಿಲ್ಲಾ ಪಂಚಾಯತ ಸಿಇಒ ರಾಹುಲ್ ಶಿಂಧೆ, ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್, ಮಾಜಿ ಶಾಸಕ ಶಾಮ ಘಾಟಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button