ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮೊದಲ ಬಾರಿಗೆ ರಾಜ್ಯಮಟ್ಟದ ಚನ್ನಮ್ಮನ ಕಿತ್ತೂರು ಉತ್ಸವ ಹಮ್ಮಿಕೊಳ್ಳಲಾಗಿದ್ದು, ವ್ಯವಸ್ಥಿತ, ಅದ್ಧೂರಿ ಉತ್ಸವ ಆಚರಣೆಗೆ ಸರ್ವ ರೀತಿಯಲ್ಲೂ ಸಿದ್ಧತೆ ಕೈಗೊಳ್ಳಲಾಗಿದೆ. ಭಾನುವಾರ (ಅ.23) ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚನ್ನಮ್ಮನ ಕಿತ್ತೂರು ಉತ್ಸವವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ಅವರು ತಿಳಿಸಿದರು.
ಶನಿವಾರ (ಅ.22)ಉತ್ಸವದ ಪೂರ್ವಸಿದ್ಧತೆಯ ಕಾರ್ಯಪ್ರಗತಿಯನ್ನು ಪರಿಶೀಲಿಸಿದ ನಂತರ ಕೋಟೆ ಆವರಣದಲ್ಲಿರುವ ಗ್ರಾಮ ದೇವತೆ ದೇವಸ್ಥಾನದಲ್ಲಿ ಸುದ್ದಿಗಾರರಿಗೆ ಅವರು ಮಾಹಿತಿ ನೀಡಿದರು.
ಸಾರಿಗೆ ಊಟದ ವ್ಯವಸ್ಥೆ:
ಉತ್ಸವಕ್ಕೆ ಬೇರೆ ಬೇರೆ ಕಡೆಗಳಿಂದ ಬರುವ ಜನರಿಗಾಗಿ ಮೂರು ದಿನಗಳವರೆಗೆ ಕಾದು ಟ್ಟಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದೆ. ರೋಟರಿ ಕ್ಲಬ್ ನಲ್ಲಿ ಮೂರು ದಿನಗಳವರೆಗೆ ಸಾರ್ವಜನಿಕರು, ಕಲಾವಿದರು, ಮಾಧ್ಯಮದವರು ಸೇರಿ ಸುಮಾರು 22ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಇದೆ ಎಂದು ಶಾಸಕ ಮಹಾಂತೇಶ ದೊಡಗೌಡರ ಅವರು ಅವರು ತಿಳಿಸಿದರು.
ವೈವಿಧ್ಯಮಯ ಕಾರ್ಯಕ್ರಮಗಳು:
ಗಾಯಕರಾದ ವಿಜಯಪ್ರಕಾಶ್, ರಘು ದೀಕ್ಷಿತ್, ಹಾಸ್ಯ ಕಲಾವಿದರಾದ ಪ್ರಾಣೇಶ್, ಜೇವರ್ಗಿ ನಾಟ್ಯ ತಂಡ, ಜೀ ಕನ್ನಡ ಹಾಸ್ಯ ಕಲಾ ತಂಡ, ಜಾನಪದ ಸಂಗೀತ, ಆಳ್ವಾಸ್ ಕಲಾ ತಂಡ, ಸೇರಿದಂತೆ ರಾಜ್ಯದ ಇನ್ನೂ ಅನೇಕ ಹೆಸರಾಂತ ಕಲಾವಿದರು ಉತ್ಸವದಲ್ಲಿ ಜನರನ್ನು ರಂಜಿಸಲಿದ್ದಾರೆ ಎಂದು ಶಾಸಕ ಮಹಾಂತೇಶ ದೊಡಗೌಡರ ಅವರು ತಿಳಿಸಿದರು.
ಕಿತ್ತೂರು ಉತ್ಸವಕ್ಕೆ ಹಬ್ಬದ ಕಳೆ:
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಈ ಬಾರಿ ಕಿತ್ತೂರು ಉತ್ಸವಕ್ಕೆ ಅದ್ಧೂರಿ ಹಬ್ಬದ ಕಳೆ ಬಂದಿದೆ. ಮುಖ್ಯ ವೇದಿಕೆ ಹಾಗೂ ಇನ್ನೆರಡು ಉಪ ವೇದಿಕೆಗಳಲ್ಲಿ ಮೂರು ದಿನಗಳವರೆಗೆ ಸಾಹಿತ್ಯಿಕ, ಸಾಂಸ್ಕೃತಿಕ, ಐತಿಹಾಸಿಕ ಕಾರ್ಯಕ್ರಮಗಳು ನಡೆಯಲಿವೆ. ಇಡೀ ಕಿತ್ತೂರು ವಿದ್ಯುತ್ ದೀಪಗಳಿಂದ ಕಂಗೊಳಿಸಲಿದೆ ಎಂದು ಮಾಹಿತಿ ನೀಡಿದರು.
ಉತ್ಸವ ಕುರಿತು ವ್ಯಾಪಕ ಪ್ರಚಾರ:
ಉತ್ಸವದ ಬಗ್ಗೆ ಟಿವಿ, ಪತ್ರಿಕೆ, ಸೋಶಿಯಲ್ ಮೀಡಿಯಾ ಮೂಲಕ ಈಗಾಗಲೇ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. 22 ಬಸ್ ನಿಲ್ದಾಣಗಳಲ್ಲಿ ಆಡಿಯೋ ಮೂಲಕ ಪ್ರಚಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಕ್ರೀಡೆ, ಫಲಪುಷ್ಪ, ವಸ್ತು ಪ್ರದರ್ಶನ:
ಮ್ಯಾರಾಥಾನ, ಕುಸ್ತಿ, ಸೈಕ್ಲಿಂಗ್, ಬೋಟಿಂಗ್ ಮಹಿಳೆಯರಿಗೆ ರಂಗೋಲಿ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಜೊತೆಗೆ ಫಲಪುಷ್ಪ, ಹಾಗೂ 120 ಮಳಿಗೆಗಳಲ್ಲಿ ವಸ್ತು ಪ್ರದರ್ಶನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬೆಳಗಾವಿ, ಕಾಕತಿಯಲ್ಲಿ ನೇರ ಪ್ರಸಾರ:
ಮೂರು ದಿನಗಳವರೆಗೆ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಹಾಗೂ ಕಾಕತಿಯಲ್ಲಿ ಎಲ್ಇಡಿ ಸ್ಕ್ರೀನ್ ಮೂಲಕ ಉತ್ಸವ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ಸೂಕ್ತ ಬಂದೋಬಸ್ತ್ ವ್ಯವಸ್ಥೆ:
ಉತ್ಸವದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಕ್ರಿಮಾನಲ್ ಹಿನ್ನೆಲೆ ಉಳ್ಳವರ ಬಗ್ಗೆ ನಿಗಾ ವಹಿಸಲಾಗಿದೆ. 22 ಕಡೆ ಪಾರ್ಕಿಂಗ್ ವ್ಯವಸ್ಥೆ, 590ಕಡೆ ಸಿಸಿಟಿವಿ ಅಳವಡಿಸಲಾಗಿದೆ. ಕೆಎಸ್ಆರ್ಪಿ, ಡಿಆರ್, ಗೃಹ ರಕ್ಷಕ, ಸಿವಿಲ್ ಪೊಲಿಸ್ ಸೇರಿ ಒಟ್ಟು 500 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅವರು ತಿಳಿಸಿದರು.
ಉತ್ಸವದ ಪೂರ್ವಸಿದ್ಧತೆ ಪರಿಶೀಲನೆ:
ಮುಖ್ಯ ವೇದಿಕೆ, ಎರಡು ಉಪ ವೇದಿಕೆಗಳನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ, ಶಾಸಕ ಮಹಾಂತೇಶ ದೊಡಗೌಡರ ಸೇರಿದಂತೆ ಇತರ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಆಸನ, ನೀರು, ಶೌಚಾಲಯ ವ್ಯವಸ್ಥೆ:
ಜನರಿಗೆ, ಗಣ್ಯರಿಗ, ಮಾಧ್ಯಮದವರಿಗೆ ಉತ್ಸವ ವೀಕ್ಷಣೆಗಾಗಿ ಆಸನ ವ್ಯವಸ್ಥೆ,ಕುಡಿಯುವ ನೀರು, ಶೌಚಾಲಯ, ಎಲ್ಇಡಿ ಸ್ಕ್ರೀನ್ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ ಹಾಗೂ ಶಾಸಕರು ಪರಿಶೀಲನೆ ನಡೆಸಿದರು.
ಮಾಧ್ಯಮ ಕೇಂದ್ರ ಪರಿಶೀಲನೆ:
ಉತ್ಸವದ ಪೂರ್ಣ ಪ್ರಚಾರ ಕೈಗೊಳ್ಳಲು ಮಾಧ್ಯಮ ಕೇಂದ್ರ ಸ್ಥಾಪಿಸಲಾಗಿದೆ. ಕೇಂದ್ರ ಪರಿಶೀಲನೆ ನಡೆಸಿದ ಶಾಸಕರು, ಅಧಿಕಾರಿಗಳು ವ್ಯವಸ್ಥಿತ ಸೌಲಭ್ಯಕ್ಕಾಗಿ ಸಿಬ್ಬಂದಿಗೆ ಸೂಚಿಸಿದರು.
ಈ ವೇಳೆಯಲ್ಲಿ ಬೈಲಹೊಂಗಲ ಉಪವಿಭಾಗಾಧಿಕಾರಿ ಶ್ರೀಧರ ಬಗಲಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ, ಕಿತ್ತೂರು ತಹಶೀಲ್ದಾರ್ ಸೋಮಲಿಂಗಪ್ಪ ಮಳಲಿ, ಜಿಲ್ಲಾಮಟ್ಟದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸರ್ಕಾರಿ ಶಾಲೆಗಳಿಂದ ಪ್ರತಿ ತಿಂಗಳು 100 ರೂಪಾಯಿ ದೇಣಿಗೆ; ಆಕ್ರೋಶಕ್ಕೆ ಕಾರಣವಾಯ್ತು ಶಿಕ್ಷಣ ಇಲಾಖೆ ಸುತ್ತೋಲೆ
https://pragati.taskdun.com/latest/100rs-per-monthparentsgovt-schooleducation-department-circuler/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ