*ಚನ್ನಮ್ಮನ ವಿಜಯೋತ್ಸವಕ್ಕೆ ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ್ ಚಾಲನೆ*


ಪ್ರಗತಿವಾಹಿನಿ ಸುದ್ದಿ; ಬೆಳಗಾವಿ : ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ ಚನ್ನಮ್ಮನ ಕಿತ್ತೂರಿನಲ್ಲಿ ವಿಜಯಜ್ಯೋತಿಯನ್ನು ಸಡಗರ-ಸಂಭ್ರಮದಿಂದ ಬರಮಾಡಿಕೊಂಡು ನಂದಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಿತ್ತೂರು ಉತ್ಸವ-2023 ಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.

ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ರಾಜ್ಯದಾದ್ಯಂತ ಸಂಚರಿಸಿ ಇಂದು ಬೆಳಿಗ್ಗೆ ಚನ್ನಮ್ಮನ ಕಿತ್ತೂರಿಗೆ ಆಗಮಿಸಿದ “ವಿಜಯಜ್ಯೋತಿ”ಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡರು.
ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ:
ಇದಾದ ಬಳಿಕ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್, ಸಂಸದೆ ಮಂಗಲಾ ಅಂಗಡಿ, ಶಾಸಕ ಬಾಬಾಸಾಹೇಬ್ ಪಾಟೀಲ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಬೆಳಗಾವಿ ಉತ್ತರ ಶಾಸಕ ಆಸಿಫ್(ರಾಜು) ಸೇಠ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಅವರು ಸೇರಿದಂತೆ ಎಲ್ಲ ಗಣ್ಯರು ಚನ್ನಮ್ಮನ ಕಿತ್ತೂರಿನ ಚನ್ಮಮ್ಮ ವೃತ್ತದಲ್ಲಿರುವ ಚನ್ಮಮ್ಮಳ ಪುತ್ಥಳಿಗೆ ಹಾಗೂ ಮಹಾದ್ವಾರದ ಅಕ್ಕಪಕ್ಕದಲ್ಲಿರುವ ಅಮಟೂರು ಬಾಳಪ್ಪ ಹಾಗೂ ಸಂಗೊಳ್ಳಿ ರಾಯಣ್ಣನ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು.

ಗಮನಸೆಳೆದ ಕಲಾವಾಹಿನಿ ಮೆರವಣಿಗೆ:
ಕನ್ನಡ ನಾಡಿನ ಕಲಾ ವೈಭವವನ್ನು ಪ್ರತಿಬಿಂಬಿಸುವ ವಿವಿಧ ಕಲಾತಂಡಗಳ ಕಲಾವಾಹಿನಿ ಮೆರವಣಿಗೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಚಾಲನೆ ನೀಡಿದರು.
ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು, ಡೊಳ್ಳುಕುಣಿತ, ಗೊಂಬೆಕುಣಿತ, ಕುದುರೆಕುಣಿತ, ಲಂಬಾಣಿ ನೃತ್ಯ, ಝಾಂಜ್ ಪಥಕ್, ಜನಪದವಾದ್ಯಗಳಾದ ಚಂಡಿಮೇಳ, ನಗಾರಿ, ಕಥಕ್ಕಳಿ ತಂಡಗಳು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ ವೇಷಧಾರಿ ಮಕ್ಕಳು ಜನಪದ ಕಲಾವಾಹಿನಿ ಮೆರವಣಿಗೆಯ ಸೊಬಗು ಹೆಚ್ಚಿಸಿದರು.
ಚನ್ನಮ್ಮವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಿಚ್ಚಣಿಕೆ ಮಠದ ಆವರಣದಲ್ಲಿ ಸಮಾರೋಪಗೊಂಡಿತು.
ಗೃಹಲಕ್ಷ್ಮೀ, ಗೃಹಜ್ಯೋತಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ರೂಪಕಗಳೂ ಸೇರಿದಂತೆ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತಿತರ ಇಲಾಖೆಗಳ ರೂಪಕಗಳ ಸಾಲು ಮೆರವಣಿಗೆಯಲ್ಲಿ ಗಮನಸೆಳೆಯಿತು.
ಆಕರ್ಷಕ ಹಳದಿ ಪೇಟ:
ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಉಚಿತವಾಗಿ ಆಕರ್ಷಕ ಹಳದಿ ಪೇಟವನ್ನು ತೊಡಿಸಲಾಯಿತು. ಜನಪ್ರತಿನಿಧಿಗಳು, ಅಧಿಕಾರಿಗಳು, ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಜನರು ಪೇಟ ತೊಟ್ಟು ಸಂಭ್ರಮಿಸಿದರು.

ಜನಾಕರ್ಷಿಸಿದ ವಸ್ತುಪ್ರದರ್ಶನ ಮಳಿಗೆಗಳು:
ಇದೇ ಮೊದಲ ಬಾರಿ ಕೋಟೆ ಆವರಣದೊಳಗೆ ಕೋಟೆ ಗೋಡೆಯಗುಂಟ ಸ್ಥಾಪಿಸಲಾಗಿರುವ ವಸ್ತುಪ್ರದರ್ಶನ ಮೇಳವನ್ನು ಶಾಸಕ ಬಾಬಾಸಾಹೇಬ್ ಪಾಟೀಲ ಅವರು ಉದ್ಘಾಟಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ತದ ವತಿಯಿಂದ ಸ್ಥಾಪಿಸಲಾಗಿರುವ 128 ಮಳಿಗೆಗಳಿಗೆ ಜನರು ತಂಡೋಪತಂಡವಾಗಿ ಭೇಟಿ ನೀಡಿದರು.
ಕೃಷಿ, ಆರೋಗ್ಯ, ಮೀನುಗಾರಿಕೆ, ಪಶುಪಾಲನೆ, ಗ್ರಾಮೀಣಾಭಿವೃದ್ದಿ, ಕೃಷಿ ಯಂತ್ರೋಪಕರಣ ಸೇರಿದಂತೆ ವಿವಿಧ ಮಳಿಗೆಗಳನ್ನು ಗಣ್ಯರು ವೀಕ್ಷಿಸಿದರು.
ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನವನ್ನು ಸಂಸದರಾದ ಮಂಗಲ ಅಂಗಡಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಸದರಾದ ಮಂಗಲ ಅಂಗಡಿ, ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತ್ಯನಾರಾಯಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕೋಣಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ ಮುರಗೋಡ ಮತ್ತಿತರರು ಉಪಸ್ಥಿತರಿದ್ದರು.
ಕಿತ್ತೂರು, ಬೈಲಹೊಂಗಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ