Belagavi NewsBelgaum NewsKannada NewsKarnataka News

*ಮೆಡಿಟೆಕ್ ಹ್ಯಾಕಥಾನ್ ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ್* *ವೈದ್ಯಕೀಯ ತಂತ್ರಜ್ಞಾನದಲ್ಲಿ ಉದ್ದಿಮೆ ಸ್ಥಾಪಿಸಲು ಡಾ.ಪ್ರಭಾಕರ ಕೋರೆ ಕರೆ*

ಪ್ರಗತಿವಾಹಿನಿ ಸುದ್ದಿ: ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (KAHER) ಕರ್ನಾಟಕದ ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರೀಮಂತ ಪರಂಪರೆಯನ್ನು ಹೊಂದಿದ್ದು, ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಮತ್ತು ಸಂಶೋಧನೆಯನ್ನು ಉತ್ತೇಜಿಸುವ ದೂರದೃಷ್ಟಿಯೊಂದಿಗೆ ಬೇರೂರಿದೆ ಎಂದು ಬೃಹತ ಹಾಗೂ ಮದ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರಿಂದಿಲ್ಲಿ ಹೇಳಿದರು.

ಕೆಎಲ್ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ್ ಆ್ಯಂಡ ರಿಸರ್ಚನ ಇನಕ್ಯುಬೇಶನ್ ಹಾಗೂ ಇನ್ನೊವೇಶನ್ ಸೆಂಟರ್ ಬೆಳಗಾವಿಯಲ್ಲಿಂದು (ದಿ. 30 ಅಗಷ್ಟ 2024) ಏರ್ಪಡಿಸಿದ್ದ ಮೆಡಟೆಕ್ ಹ್ಯಾಕಥಾನ-2024 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಎಲ್ಇ ಸಂಸ್ಥೆಯು ದೇಶಾದ್ಯಂತ ತಮ್ಮದೇ ಆದ ಶೈಕ್ಷಣಿಕ ಸಂಸ್ಥೆಗಳ ಸಂಪರ್ಕ ಹೊಂದಿರುವದರಿಂದ ಸಂಪನ್ಮೂಲಗಳನ್ನು ಒಟ್ಟುಗೂಡಿಸುತ್ತದೆ. ವಿಶೇಷವಾಗಿ ಆರೋಗ್ಯ ಮತ್ತು ತಂತ್ರಜ್ಞಾನದಲ್ಲಿ ಈ ಭಾಗದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿದೆ. ಅತ್ಯಾಧುನಿಕ ಸಂಶೋಧನಾ ಸೌಲಭ್ಯಗಳ ಮೂಲಕ ಬಯೋಮೆಡಿಕಲ್ ಎಂಜಿನಿಯರಿಂಗ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ. ನಾವೀನ್ಯತೆ ಮತ್ತು ವಿವಿಧ ಸಂಸ್ಥೆಗಳ ಸಹಯೋಗದದೊಂದಿಗೆ ಒಳ್ಳೆಯ ಪರಿಸರ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೈದ್ಯಕೀಯ ತಂತ್ರಜ್ಞಾನದಲ್ಲಿ ಕರ್ನಾಟಕವು ಆರೋಗ್ಯ ರಕ್ಷಣೆಗೆ ಒಳ್ಳೆಯ ಪರಿಸರ ವ್ಯವಸ್ಥೆಯನ್ನು ಹೊಂದಿದ್ದು, ಸಂಶೋಧನಾ ಸಂಸ್ಥೆಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಆರೋಗ್ಯ ಪೂರೈಕೆದಾರರ ಅಗಾಧವಾದ ಜಾಲವನ್ನು ಪಡೆದಿದೆ. ರಾಜ್ಯದ ನೀತಿಗಳು ಮತ್ತು ಕ್ರಮಗಳು ನಾವೀನ್ಯತೆಗೆ ಅನುಕೂಲಕರವಾದ ವಾತಾವರಣವಿರುವದರಿಂದ ಮೆಡ್‌ಟೆಕ್ ಅಭಿವೃದ್ದಿಯ ಕೇಂದ್ರವಾಗಿದೆ ಸ್ಟಾರ್ಟ್‌ಅಪ್‌ಗಳು ಮತ್ತು ಸಂಶೋಧಕರಿಗೆ ವಿಶ್ವದರ್ಜೆಯ ಸೌಲಭ್ಯಗಳು ಲಭಿಸುತ್ತಿವೆ ಎಂದು ತಿಳಿಸಿದರು.

ಕರ್ನಾಟಕದ ಆರೋಗ್ಯ ಮತ್ತು ಮೆಡ್‌ಟೆಕ್ ಪರಿಸರ ವ್ಯವಸ್ಥೆಯು ಕ್ರಿಯಾತ್ಮಕ ಮತ್ತು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದ್ದು, ಭಾರತದ ವೈದ್ಯಕೀಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡುತ್ತಿದೆ. ಭಾರತದಲ್ಲಿ ವೈದ್ಯಕೀಯ ಮತ್ತು ದಂತ ಉಪಕರಣಗಳ ವಲಯದಲ್ಲಿನ ಒಟ್ಟು ಉತ್ಪಾದನೆಯ ಸರಿಸುಮಾರು ಶೇ. 25% ರಷ್ಟನ್ನು ರಾಜ್ಯವು ಹೊಂದಿದ್ದು, ಸುಮಾರು 350ಕ್ಕೂ ಅಧಿಕ ವೈದ್ಯಕೀಯ ಸಾಧನಗಳ ತಯಾರಿಕೆ ಮತ್ತು ಪೂರೈಕೆಯ ನೆಲೆಯಾಗಿದೆ ಎಂದು ವಿವರಿಸಿದರು.

ಕರ್ನಾಟಕದಲ್ಲಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಿಂದ ನುರಿತ ವೃತ್ತಿಪರರು ಹೊರಬರುತ್ತಿರುವದರಿಂದ ವೈದ್ಯಕೀಯ ತಂತ್ರಜ್ಞಾನ ಕಂಪನಿಗಳಿಗೆ ಅಗತ್ಯವಿರುವ ಪ್ರತಿಭೆಗಳು ಸುಲಭವಾಗಿ ಸಿಗುತ್ತಿವೆ. ವೈದ್ಯಕೀಯ ಐಟಿ, ಪಿಸಿಆರ್ ಯಂತ್ರಗಳು, ಹೃದಯ ಸ್ಟೆಂಟ್‌ಗಳು, ಇನ್ಸುಲಿನ್ ಪೆನ್‌ ಸೇರಿದಂತೆ ಅನೇಕ ಸಾಧನಗಳನ್ನು ತಾಯಾರಿಸುವ ಕೇಂದ್ರವಾಗಿದೆ. ವೈದ್ಯಕೀಯ ಸಾಧನಗಳು, ರೋಗನಿರ್ಣಯ, ಡಿಜಿಟಲ್ ಆರೋಗ್ಯ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಭಿವೃದ್ಧಿಪಡಿಸುತ್ತಿರುವ ಮೆಡ್‌ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಕರ್ನಾಟಕವು ನೆಲೆಯಾಗಿದೆ.

ನಾವೀನ್ಯತೆ ಮತ್ತು ಸಹಯೋಗದ ಮನೋಭಾವವನ್ನು ಅಳವಡಿಸಿಕೊಳ್ಳೋಣ. ತಂತ್ರಜ್ಞಾನ ಮತ್ತು ಸಂಶೋಧನೆಯ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ, ನಾವು ವೈದ್ಯಕೀಯ ಆವಿಷ್ಕಾರದ ಭವಿಷ್ಯವನ್ನು ಮುನ್ನಡೆಸಬಹುದು ಮತ್ತು ಜನರ ಜೀವನವನ್ನು ಸುಧಾರಿಸಬಹುದು. ಮೆಡ್‌ಟೆಕ್ ಪ್ರಗತಿಯಲ್ಲಿ ಕರ್ನಾಟಕವನ್ನು ಜಾಗತಿಕ ನಾಯಕನನ್ನಾಗಿ ಮಾಡಬಹುದು ಎಂದು ಭರವಸೆ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಅಥವಾ ಹುಬ್ಬಳ್ಳಿಯಲ್ಲಿ ಸ್ಟಾರ್ಟ ಅಪ್ ಪಾರ್ಕ ನಿರ್ಮಾಣಕ್ಕೆ ಸಕಲ ರೂಪರೇಷೆಯನ್ನು ಅಂತಿಮಗೊಳಿಸಿ ಇನ್ನು ಮೂರು ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವದು. ಈ ಭಾಗದಲ್ಲಿ ಅನೇಕ ವೈದ್ಯಕೀಯ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯಗಳಿದ್ದು ಅವುಗಳ ಮೂಲಕ ವೈದ್ಯಕೀಯ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ. ಸಂಶೋಧನೆಗೆ ಹೆಚ್ಚಿನ ಒತ್ತು ನೀಡಿ, ಸ್ವಾಲಂಭನೆ ಸಾಧಿಸಬೇಕಾಗಿದೆ ಎಂದ ಅವರು, ಇತಿಹಾಸದ ಪುಟಗಳನ್ನು ತೆರೆದಾಗ ಕೈಗಾರಿಕೆಗಳಿಗೆ ಮೈಸೂರು ರಾಜರ ಕೊಡುಗೆ ಬಹಳಷ್ಟಿದೆ ಎಂದು ಸ್ಮರಿಸಿದರು.

ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ಕಾಹೆರನ ಕುಲಪತಿ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ ಸಂಶೋಧನೆಗೆ ಒತ್ತು ನೀಡಿ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಈಗ ಇನಕ್ಯೂಬೇಶನ್ ಮೂಲಕ ವೈದ್ಯಕೀಯ ತಂತ್ರಜ್ಞಾನದಲ್ಲಿ ಉದ್ದಿಮೆ ಸ್ಥಾಪಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಸಹಾಯ, ಸಲಹೆ ನೀಡಲಾಗುತ್ತಿದೆ. ಆದ್ದರಿಂದ ಯುವಕರು ಉದ್ದಿಮೆ ಸ್ಥಾಪಿಸಲು ಮಂದಾಗಬೇಕೆಂದು ಕರೆ ನೀಡಿದರು.
ದೆಹಲಿ ಐಐಟಿಯ ಮ್ಯಾನೇಜಿಂಗ ಡೈರೆಕ್ಟರ ಡಾ. ನಿಖಿಲ ಅಗರವಾಲ ಅವರು ಮಾತನಾಡಿ, ಬದಲಾಗುತ್ತಿರುವ ಭಾರತದಲ್ಲಿ ಸ್ಟಾರ್ಟ ಅಪ ಕಲ್ಪನೆ ಹಳೆಯದು. ಆದರೆ ಅದು ನಿಧಾನವಾಗಿತ್ತು. 2016ರಲ್ಲಿ ವೇಗವಪಡೆದುಕೊಂಡಿದೆ. ಭಾರತದಲ್ಲಿ 131 ಯನಿಕಾರ್ನಗಳಿವೆ. ನಂತರ ಸಾವಿರ ಯುನಿಕಾರ್ನ, ಮಿಲಿಯನ್ ಸ್ಟಾರ್ಟ ಅಪಗಳು ಆರಂಭವಾಗಲಿವೆ. ದೇಶದ ಹಲವು ಶೇ. 80 ವಿದ್ಯಾರ್ಥಿಗಳು ಉದ್ಯೊಗಕ್ಕಾಗಿ ಬೇರೆ ದೇಶಗಳಿಗೆ ತೆರಳುತ್ತಾರೆ. ಹಲವು ಬಿಲ್ ಗೇಟ್ಸಗಳನ್ನು ತಯಾರಿಸುವ ತಾಕತ್ತು ಭಾರತಕ್ಕಿದೆ ಅದನ್ನು ಯುವಕರು ಅರಿಯಬೇಕು. ಭಾರತವು ಶೇ. 80 ರಷ್ಟು ವೈದ್ಯಕೀಯ ಸಲಕರಣೆಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಪ್ರತಿಯೊಂದು ವಿಮಾನ ನಿಲ್ದಾಣ ಗಳಲ್ಲಿ ಶೆ.95 ರಷ್ಟು ಸಲಕರಣೆಗಳು ವೈದ್ಯಕೀಯ ಸಲಕರಣೆಗಳಾಗಿರುತ್ತವೆ.ಆದ್ದರಿಂದ ಅದು ತಪ್ಪಲು ವೈದ್ಯಕೀಯ ತಂತ್ರಜ್ಞಾನದ ಅಬಿವೃದ್ದಿ ಹಾಗೂ ಉದ್ದಿಮೆಗಳು ಬರಬೇಕು ಎಂದು ಪ್ರತಿಪಾದಿಸಿದರು.
ವೈದ್ಯರು ಒಳ್ಳೆಯ ಉದ್ಯಮಿ ಹಾಗೂ ಸಲಹೆಗಾರರಾಗಬಹುದು ಎಂಬುದನ್ನು ಮರೆಯಬಾರದು. ಬೆಳಗಾವಿ ಒಳ್ಳೆಯ ಸಂಪರ್ಕ ಹಾಗೂ ಮಾನವ ಸಂಪನ್ಮೂಲ ಹೊಂದಿದ್ದು, ಇಲ್ಲಿ ಅಗತ್ಯವಿರುವ ಎಲ್ಲ ಸಲಹೆ ಹಾಗೂ ಸೌಕರ್ಯ ನೀಡಲು ನಾವು ತಯಾರಿದ್ದೇವೆ. ಮುಂಬರುವ ವರ್ಷ 20 ವೈದ್ಯರಾದರೂ ಉದ್ಯಮಿಗಳಾಗಲು ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಕಾಹೆರನ ಉಪಕುಲಪತಿ ಡಾ. ನಿತಿನ ಗಂಗಾಣೆ ಅವರು ಮಾತನಾಡಿ, ಸಂಶೋಧನೆ & ಅಭಿವೃದ್ಧಿಗೆ ಅಗತ್ಯ ವಿರುವ ಎಲ್ಲ ಸಹಕಾರವನ್ನು ನೀಡಲಾಗುವದು. ಈಗಾಗಲೇ ಕೇವಲ ಒಂದು ವರ್ಷದಲ್ಲಿ 100ಕ್ಕೂ ಅಧಿಕ ಪೆಟೆಂಟ ಪಡೆಯಲಾಗಿದೆ. ಮುಂಬರುವ ದಿನಗಳಲ್ಲಿ ವೈದ್ಯಕೀಯ ವಿಜ್ಞಾನದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವದು ಎಂದು ತಿಳಿಸಿದರು. ಭಾರತ ಸರಕಾರದ ವಿಜ್ಞಾನಿ ಡಾ. ಅರವಿಂದಕುಮಾರ, ಸಿಡ್ಬಿಯ ಹಿರಿಯ ಪ್ರಧಾನ ವ್ಯವಸ್ಥಾಪಕ ಸತ್ಯಪ್ರಕಾಶ ಸಿಂಗ ಅವರು ಮಾತನಾಡಿದರು.
ಕಾನ್ಪುರ ಐಐಟಿಯ ಕೆಐಐಸಿ ಮತ್ತು ಎಸಐಐಸಿ ಹಾಗೂ ಗಾಜಿಯಾಬಾದನ ಯಶೋಧಾ ಆಸ್ಪತ್ರೆಯೊಂದಿಗೆ ಸಂಸ್ಥೆಗಳು ಇದೇ ಸಂದರ್ಭದಲ್ಲಿ ಒಡಂಬಡಿಕೆ ಮಾಡಿಕೊಂಡವು.
ವೇದಿಕೆ ಮೇಲೆ ರಿತೇಶ ದೇಶಪಾಂಡೆ ಉಪಸ್ಥಿತರಿದ್ದರು. ಕಾಹೆರ ಕುಲಸಚಿವ ಡಾ. ಎಂ ಎಸ್ ಗಣಾಚಾರಿ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ. ರಾಜೇಶ ಪವಾರ ಸ್ವಾಗತಿಸಿದರು. ಡಾ. ನೇಹಾ ಧಡೇದ ಹಾಗೂ ಡಾ. ಸೌಮ್ಯಾ ಮಾಸ್ತೆ ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button