Karnataka News

*ಮಹಿಳೆಯರ ಆರೋಗ್ಯಕ್ಕೂ ಮಹತ್ವ ನೀಡಬೇಕು: ರಾಷ್ಟ್ರಪತಿ ದ್ರೌಪದಿ ಮುರ್ಮು*

ಪ್ರಗತಿವಾಹಿನಿ ಸುದ್ದಿ: ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ಆದಿವಾಸಿ ಜನರ ಆರೋಗ್ಯ ಕಾಪಾಡುವಲ್ಲಿ ಸದಾ ಕಾರ್ಯಮಗ್ನವಾಗಬೇಕಾಗಿದೆ. ಭಾರತದಂತ ರಾಷ್ಟ್ರದಲ್ಲಿ ಎಲ್ಲರಿಗೂ ಆರೋಗ್ಯ ವ್ಯವಸ್ಥೆ ಕಲ್ಪಿಸುವದು ಇಂದು ಅತ್ಯಗತ್ಯವಾಗಿದೆ. ಆದ್ದರಿಂದಲೇ ಕೇಂದ್ರ ಸರಕಾರವು ಆಯುಷ್ಯಮಾನ ಭಾರತದಂತಹ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಮುಖ್ಯವಾಗಿ ಕ್ಯಾನ್ಸರ್ ಪೀಡಿತ ಜನರಿಗೆ ಸೂಕ್ತ ಚಿಕಿತ್ಸೆ ಮತ್ತು ಕ್ಯಾನ್ಸರ್ ತಪಾಸಣೆಯನ್ನು ತೀವ್ರಗೊಳಿಸಬೇಕು. ಅದಕ್ಕಾಗಿಯೇ ಕರ್ನಾಟಕದಲ್ಲಿ ಕೆಎಲ್ ಇ ಸಂಸ್ಥೆಯು ಅತ್ಯಾಧುನಿಕವಾದ ಕ್ಯಾನ್ಸರ್ ಆಸ್ಪತ್ರೆಯನ್ನು ಜನಸೇವೆಗೆ ಅರ್ಪಿಸಲಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

ಕೆಎಲ್ಇ ಸಂಸ್ಥೆಯು ನೂತವಾಗಿ ಪ್ರಾರಂಭಿಸಿರುವ ಕೆಎಲ್ಇ ಡಾ. ಸಂಪತಕುಮಾರ ಹಾಗೂ ಡಾ. ಉದಯಾ ಶಿವಣಗಿ ಕ್ಯಾನ್ಸರ್ ಆಸ್ಪತ್ರೆಯನ್ನು ಜನಸೇವೆಗೆ ಅರ್ಪಿಸಿ ಮಾತನಾಡಿದ ಅವರು, ಐಸಿಎಂಆರ್ ಸಮೀಕ್ಷೆಯಂತೆ ದೇಶದಲ್ಲಿ ಸುಮಾರು 20 ಮಿಲಿಯನ್ ಗೂ ಅಧಿಕ ಜನರು ಪ್ರತಿವರ್ಷ ಕ್ಯಾನ್ಸರ್ ಪೀಡಿತರಾಗುತ್ತಿದ್ದು, ಸುಮಾರು 7 ಮಿಲಿಯನ್ ಗೂ ಅಧಿಕ ಜನರು ಪ್ರತಿವರ್ಷ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಪ್ರತಿ ಮೂಲೆಯಲ್ಲೂ ಕ್ಯಾನ್ಸರ್ ಆಸ್ಪತ್ರೆ ಕಾರ್ಯನಿರ್ವಹಿಸುವಂತಾಗಬೇಕು. ಅಲ್ಲದೇ ಉಚಿತ ಹಾಗೂ ಕೈಗೆಟಕುವ ದರದಲ್ಲಿ ಚಿಕಿತ್ಸೆ ಲಭ್ಯವಾಗಬೇಕು. ಅದರಲ್ಲಿಯೂ ಮುಖ್ಯವಾಗಿ ಹಿರಿಯ ನಾಗರೀಕರಿಗೆ ಅನೇಕ ರೋಗಗಳು ಬಾಧಿಸುತ್ತಿದ್ದು, ಅದರಲ್ಲಿ ಕ್ಯಾನ್ಸರ್ ಅತೀ ಹೆಚ್ಚು ಪರಿಣಾಮ ಬೀರುತ್ತದೆ. ಅದಕ್ಕಾಗಿ ಅದರ ಕುರಿತು ಹಚ್ಚೆಚ್ಚು ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಆರೋಗ್ಯಯುತ ಸಮಾಜ ನಿರ್ಮಾಣವಾದರೆ ಮಾತ್ರ ಸಮಾಜ ಸುಧಾರಣೆಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕುಟುಂಬದಲ್ಲಿ ಹುಡುಗರ ಆರೋಗ್ಯಕ್ಕೆ ನೀಡಿದ ಮಹತ್ವವನ್ನು ಹುಡುಗಿಯರಿಗೆ ನೀಡುತ್ತಿಲ್ಲ. ಹುಡುಗಿಯರ ಆರೋಗ್ಯವನ್ನು ಕಡೆಗಣಿಸದೇ ಅವರಿಗೂ ಮಹತ್ವ ನೀಡಬೇಕು. ಮಹಿಳೆಯರ ಆರೋಗ್ಯ ಸಮಸ್ಯೆಗಳನ್ನು ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಕಲ್ಪಿಸಬೇಕು. ಕೆಲವೊಮ್ಮೆ ಕ್ಯಾನ್ಸರ್ ಸಮಸ್ಯೆ ಕಂಡುಬಂದರೆ ಶೀಘ್ರವೇ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕು. ಈಗ ಸರಕಾರವು ಚಿಕಿತ್ಸೆಗೆ ಅನೇಕ ಯೋಜನೆಗಳನ್ನು ರೂಪಿಸಿದೆ. ಗ್ರಾಮೀಣ ಭಾಗದ ಮಹಿಳೆಯರ ಆರೋಗ್ಯ ಸುರಕ್ಷತೆಗೆ ಗಮನಹರಿಸಬೇಕು ಎಂದರು.

ಒಳ್ಳೆಯ ಗುಣಮಟ್ಟದ ಚಿಕಿತ್ಸೆಯೂ ಸಕಲರಿಗೆ ಲಭಿಸಬೇಕು. ವೈದ್ಯಕೀಯ ವೃತ್ತಿಯಲ್ಲಿರುವವರು ಭಾರತದ ಆರೋಗ್ಯದ ಭವಿಷ್ಯವನ್ನು ರೂಪಿಸಬೇಕು. ವೈದ್ಯಕೀಯ ಕ್ಷೇತ್ರವು ಸದಾ ಆವಿಷ್ಕಾರದಿಂದ ಕೂಡಿದ್ದು, ಅವುಗಳ ಪರಿಣಾಮಕಾರಿಯಾದ ಚಿಕಿತ್ಸಾ ಪದ್ಧತಿಯೂ ಜನರಿಗೆ ತಲುಪಿಸಬೇಕು ಎಂದ ಅವರು, ಕೆಎಲ್ಇ ಸಂಸ್ಥೆಯು ಈ ಭಾಗದ ಜನರ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಹಲವು ಜನರ ಆರೋಗ್ಯ ಕಾಪಾಡುವಲ್ಲಿ ಮಗ್ನವಾಗಿದೆ. ಸಂಸ್ಥೆಯು ಶತಮಾನದ ಇತಿಹಾಸವಿರುವ ಶಿಕ್ಷಣ, ಆರೋಗ್ಯ ಮತ್ತು ಕೃಷಿ ಸಂಬಂಧಿತ ಸೇವೆಗಳನ್ನು ಕಲ್ಪಿಸುತ್ತಿರುವದು ಅತ್ಯಂತ ಶ್ಲಾಘನೀಯ ಎಂದರು.

ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಹ್ಲಾದ್ ಜೋಷಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಕ್ಯಾನ್ಸರ್ ರೋಗವು ಅತ್ಯಧಿಕವಾಗಿ ಕಂಡು ಬರುತ್ತಿದ್ದು, ಆರಂಭಿಕವಾಗಿ ಕಂಡು ಹಿಡಿದ ಚಿಕಿತ್ಸೆ ನೀಡಬೇಕಾಗಿದೆ. ಅದಕ್ಕಾಗಿ ಗ್ರಮೀಣ ಪ್ರದೇಶ ಜನರ ಆರೋಗ್ಯ ಸುಧಾರಿಸಲು ಅತೀ ಹೆಚ್ಚು ಅನುದಾನ ನೀಡಲಾಗುತ್ತಿದೆ. ಸರ್ವಜ್ಞನ ವಚನದಂತೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಕೆಎಲ್ ಇ ಸಂಸ್ಥೆಯು ಈ ಭಾಗದ ಅನಾರೋಗ್ಯವನ್ನು ಹೋಗಲಾಡಿಸಲು ಒಳ್ಳೆಯ ಕಾರ್ಯನಿರ್ವಹಿಸುತ್ತಿದೆ. ಈಗ ಸುಸಜ್ಜಿತವಾದ ಕ್ಯಾನ್ಸರ್ ಆಸ್ಪತ್ರೆಯನ್ನು ಜನಸೇವೆಗೆ ಅರ್ಪಿಸಿರುವದು ಅತ್ಯಂತ ಶ್ಲಾಘನೀಯ ಎಂದರು.

ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ದಾನಿಗಳಿಂದಲೇ ಕೆಎಲ್ಇ ಸಂಸ್ಥೆಯು ಹೆಮ್ಮರವಾಗಿ ಬೆಳೆದು ಬಂದಿದೆ. ಸಪ್ತರ್ಷಿಗಳು ನೆಟ್ಟು ಸಸಿ ಇಂದು ಬೃಹದಾಕಾರವಾಗಿದ್ದು, ಅಗತ್ಯವಿರುವ ಎಲ್ಲ ಹಂತದ ಮತ್ತು ವಿಧದ ಶಿಕ್ಷಣ ನೀಡುತ್ತಿದೆ. ಮುಖ್ಯವಾಗಿ ಆರೋಗ್ಯ, ತಾಂತ್ರಿಕ ಹಾಗೂ ಕೃಷಿ ವಿಜ್ಞಾನ ಶಿಕ್ಷಣದ ಜೊತೆಗೆ ಸೇವೆಯನ್ನು ಕಲ್ಪಿಸಲಾಗುತ್ತಿದೆ. ಈ ಭಾಗದಲ್ಲಿಕ್ಯಾನ್ಸರ ಅತೀ ಹೆಚ್ಚು ಕಂಡು ಬರುತ್ತಿದ್ದು, ಅದರ ನಿರ್ಮೂಲನೆಗಾಗಿ ಸುಮಾರು 300 ಹಾಸಿಗೆಗಳ ಆಸ್ಪತ್ರೆಯನ್ನು ಜನಸೇವೆಗೆ ನೀಡಲಾಗಿದೆ. ಎಲ್ಲ ರೀತಿಯ ಕ್ಯಾನ್ಸರ್ ಗೆ ಒಂದೇ ಸೂರಿನಡಿ ಚಿಕಿತ್ಸೆ ಲಭಿಸುವಂತೆ ರೂಪಿಸಲಾಗಿದೆ ಎಂದು ತಿಳಿಸಿದರು.

ವೇದಿಕೆ ಮೇಲೆ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕೊಹೊಳಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಸಂಸದರಾದ ಜಗದೀಶ ಶೆಟ್ಟರ, ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ ಹಾಗೂ ಸಮಾರಂಭದಲ್ಲಿ ದಾನಿಗಳಾದ ಡಾ. ಸಂಪತಕುಮಾರ ಎಸ್ ಶಿವಣಗಿ ಹಾಗೂ ಡಾ. ಉದಯಾ ಶಿವಣಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button