*ಕೆಎಲ್‌ಇ ಆಸ್ಪತ್ರೆಯಲ್ಲಿ ಇಯುಎಸ್ ಎಂಡೋಸ್ಕೋಪಿ ಮತ್ತು ಅಲ್ಟ್ರಾಸೌಂಡ್ ನೂತನ ಸೇವೆ ಆರಂಭ*

ಪ್ರಗತಿವಾಹಿನಿ ಸುದ್ದಿ: ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಗ್ಯಾಸ್ಟ್ರೋಎಂಟ್ರಾಲಾಜಿ ವಿಭಾಗದಲ್ಲಿ ನೂತನವಾಗಿ ಅಳವಡಿಸಲಾಗಿರುವ ಇಯುಎಸ್ ಎಂಡೋಸ್ಕೋಪಿ ಮತ್ತು ಅಲ್ಟ್ರಾಸೌಂಡ್‌ನ ನೂತನ ಸೇವೆಯನ್ನು ಹೆಚ್ ಎನ್ ರಿಲಯನ್ಸ ಫೌಂಡೇಶನ್ ಆಸ್ಪತ್ರೆಯ ಇನ್ಸಟಿಟ್ಯೂಟ್ ಆಫ್ ಗ್ಯಾಸ್ಟ್ರೋಸೈನ್ಸನ ಮುಖ್ಯಸ್ಥರು ಹಾಗೂ ಎಂಡೋಸ್ಕೋಪಿ ತಜ್ಞವೈದ್ಯರಾದ ಡಾ. ಅಮಿತ ಮೆಡಿಯೋ ಜನಸೇವೆಗೆ ಅರ್ಪಿಸಿದರು.
ನಂತರ ಮಾತನಾಡಿದ ಅವರು. ಆಧುನಿಕತೆ ಬೆಳೆದಂತೆ ವೈದ್ಯ ವಿಜ್ಞಾನ ಸಾಕಷ್ಟು ಪ್ರಗತಿ ಹೊಂದುತ್ತಿದೆ. ಅದರಂತೆ ಆಹಾರ ಪದ್ದತಿ ಹಾಗೂ ಜೀವನಶೈಲಿಂದ ಲೀವರ ಸಮಸ್ಯೆಗಳು ಅಧಿಕಗೊಳ್ಳುತ್ತಿವೆ. ಆದ್ದರೀಮ ಅದರ ಕುರಿತು ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಮೆಟ್ರೋ ನಗರಗಳಲ್ಲಿ ಇರುವಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಒಳಗೊಂಡ ಆಸ್ಪತ್ರೆ ಇಲ್ಲಿದೆ. ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರ ಕಾರ್ಯ ಅತ್ಯಂತ ಶ್ಲಾಘನೀಯ. ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಲಭಿಸುತ್ತಿರುವದು ಈ ಭಾಗದ ಜನರಿಗೆ ಸಾಕಷ್ಟು ಅನುಕೂಲ ಕಲ್ಪಿಸಿದೆ ಎಂದರು.

ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ ಈ ಭಾಗದ ಜನರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಲೀವರ ಸಮೇತ ಬಹುವಿಧ ಅಂಗಾಂಗಳನ್ನು ಕಸಿ ಮಾಡುವ ಕೇಂದ್ರ ಇದೊಂದೆ. ಇಂತಹ ಅತ್ಯಾಧುನಿಕ ಯಂತ್ರವು ಬೆಳಗಾವಿ ಮತ್ತು ಸುತ್ತಮುತ್ತಲಿನ ಜನರಿಗೆ ಆರಂಭಿಕ ರೋಗನಿರ್ಣಯ ಮತ್ತು ಜಿಐ ರೋಗಗಳ ನಿರ್ವಹಣೆಗೆ ಉಪಯುಕ್ತವಾಗಿದೆ ಎಂದು ತಿಳಿಸಿದರು.
ನೂತನವಾಗಿ ಅಳವಡಿಸಲಾದ ಇಯುಎಸ್ ಎಂಡೋಸ್ಕೋಪಿ ಮತ್ತು ಅಲ್ಟ್ರಾಸೌಂಡ್ ಬೆಳಗಾವಿಯಲ್ಲಿ ಪ್ರಥಮವಾಗಿದ್ದು, ಇದು ಜಿಐ ಟ್ರಾಕ್ಟ್‌ನ ಅಕ್ಕ ಪಕ್ಕದ ರಚನೆಗಳನ್ನು ಪರಿಶೀಲಿಸಿ, ಆರಂಭಿಕ ಹಂತದಲ್ಲಿಯೇ ರೋಗನಿರ್ಣಯಕ್ಕೆ ಸಹಾಯ ಮಾಡುತ್ತದೆ. ಹಾನಿಕರವಲ್ಲದ ಮತ್ತು ಕ್ಯಾನ್ಸರ್ ಗೆಡ್ಡೆಗಳ ನಡುವಿನ ವ್ಯತ್ಯಾಸವನ್ನು ಗಮನಿಸಿ ಸರಿಯಾದ ಮಾಹಿತಿ ನೀಡುತ್ತದೆ, ಕುಳಿಗಳಲ್ಲಿ ಕೀವು ಹೊರತೆಗೆಯಲು, ಬಯಾಪ್ಸಿ ತಪಾಸಣೆ ಹಾಗೂ ಆಂತರಿಕ ನಾಳಗಳಲ್ಲಿ ಉಂಟಾಗುವ ತುರ್ತು ರಕ್ತಸ್ರಾವವನ್ನು ನಿಲ್ಲಿಸಲು ಸಹಕರಿಸುತ್ತದೆ ಎಂದು ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಾಜಿ ಹಿರಿಯ ತಜ್ಞವೈದ್ಯರಾದ ಡಾ. ಸಂತೋಷ್ ಹಜಾರೆ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಯಾನ್ಸರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ, ಡಾ. ಸುದರ್ಶನ ಚೌಗಲಾ, ಡಾ. ರಾಜಶೇಖರ ಸೋಮನಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಗ್ಯಾಸ್ಟ್ರೋಎಂಟರಾಲಜಿ ವಿಭಾಗವು ಮೇ 18 ಮತ್ತು 19 ಎರಡು ದಿನಗಳ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವನ್ನು ಏರ್ಪಡಿಸಿತ್ತು. ದೇಶದ ವಿವಿಧ ಭಾಗಗಳಿಂದ ಸುಮಾರು 150 ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ