*ಕೆಎಲ್‌ಇ ಆಯುಷ್ಮತಿ ಆಯುರ್ವೇದ ಸ್ಪಾ ನಾಳೆ ಉದ್ಘಾಟನೆ: ಡಾ. ಪ್ರಭಾಕರ ಕೋರೆ*

ಪ್ರಗತಿವಾಹಿನಿ ಸುದ್ದಿ: ಶಹಾಪುರದಲ್ಲಿ ಕೆಎಲ್‌ಇ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯ, ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಆವರಣದಲ್ಲೇ ‘ಕೆಎಲ್‌ಇ ಆಯುಷ್ಮತಿ ಆಯುರ್ವೇದ ಸ್ಪಾ’ ನಿರ್ಮಿಸಲಾಗಿದೆ. ಡಿ.15ರಂದು ಸಂಜೆ 6ಕ್ಕೆ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನಿಕ ವೈದ್ಯಕೀಯ ಸೇವೆಗಳ ಜತೆಗೆ ಪಾರಂಪರಿಕ ಪದ್ಧತಿಯನ್ನೂ ಉಳಿಸಿಕೊಂಡು ಹೊರಟಿರುವ ಕೆಎಲ್‌ಇ ಈಗ ಕರ್ನಾಟಕದಲ್ಲೇ ಮೊಟ್ಟಮೊದಲ ಹಾಗೂ ದೇಶದಲ್ಲೇ ವಿಶೇಷವಾದ ಆಯುರ್ವೇದ ಸ್ಪಾ ಆರಂಭಿಸುತ್ತಿದೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಂಬೈನ ಕೇರಳ ಆಯುರ್ವೇದ ಕ್ಲಿನಿಕ್ ನಿರ್ದೇಶಕಿ ಡಾ.ದೇವಿಕಾ ದೇಶಮುಖ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಸ್ಥೆಯ ಅಧ್ಯಕ್ಷ ಡಾ.ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಲಿದ್ದಾರೆ ರಘು ದೀಕ್ಷಿತ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದರು.
ಗಿಡಮೂಲಿಕೆ ಮತ್ತು ಔಷಧ ಸಸ್ಯಗಳನ್ನು ಬೆಳೆಯುವುದಕ್ಕಾಗಿ 16 ಎಕರೆ ಜಾಗ ಖರೀದಿಸಿದ್ದೇವೆ. ಆಯುರ್ವೇದ ಭಾರತೀಯ ವೈದ್ಯ ಸಂಸ್ಕೃತಿಯ ಭಾಗ. ಇದನ್ನು ಜೀವಂತವಾಗಿರಿಸಲು ಸಂಸ್ಥೆ ಪ್ರಯತ್ನಿಸುತ್ತಿದೆ. ಆಯುರ್ವೇದ ಪದ್ಧತಿಗೆ ಹೊಸ ತಂತ್ರಜ್ಞಾನ ಸ್ಪರ್ಶ ನೀಡಿ, ಆಧುನಿಕ ಜೀವನ ಪದ್ಧತಿಗೆ ಪೂರಕವಾಗಿ ಸಜ್ಜುಗೊಳಿಸಿದ್ದೇವೆ ಎಂದು ಡಾ.ಕೋರೆ ವಿವರಿಸಿದರು.

ಕೆಎಲ್‌ಇ ಸಂಸ್ಥೆಯಿಂದ ಚಿಕಿತ್ಸಾ ಕೇಂದ್ರ ತೆರೆಯಲು ಜಾಂಬೋಟಿ ಬಳಿ ಜಾಗ ಗುರುತಿಸಲಾಗಿತ್ತು. ಅಲ್ಲಿ ಆನೆಗಳು ಬರುತ್ತವೆ ಎಂಬ ಕಾರಣಕ್ಕೆ ಹಿಂದೆ ಸರಿದಿದ್ದೇವೆ. ಆದರೆ ನಿಸರ್ಗ ಚಿಕಿತ್ಸಾ ಕೇಂದ್ರ ತೆರೆಯಬೇಕೆಂಬ ಚಿಂತನೆ ಇದ್ದೇ ಇದೆ ಎಂದು ಡಾ. ಪ್ರಭಾಕರ ಕೋರೆ ತಿಳಿಸಿದರು.
ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುಹಾಸಶೆಟ್ಟಿ, ಆರ್ಕಿಟೆಕ್ಟ್ ವಿನಯ ಪಾಟೀಲ ಇದ್ದರು.



