ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನವಜಾತ ಶಿಶುವಿಗೆ ತಾಯಿಯ ಎದೆಹಾಲು ಉಣಿಸುವದು ಎಲ್ಲ ಪೌಷ್ಟಿಕಾಂಶಗಳನ್ನು ನೀಡುವ ಅತ್ಯುತ್ತಮ ವಿಧಾನ. ಇದರಿಂದ ಮಗುವಿನ ರೋಗನಿರೋಧಕ ಶಕ್ತಿಯು ಹೆಚ್ಚಾಗುತ್ತದೆ. ಹೆರಿಗೆಯಾದ ಮೊದಲ ದಿನದ ಎದೆಹಾಲಿನಲ್ಲಿ ಮಗುವಿಗೆ ಬೇಕಾಗಿರುವ ಪ್ರೋಟೀನ್ ಖನಿಜಾಂಶಗಳು ಮತ್ತು ಕೊಬ್ಬಿನಲ್ಲಿ ಕರಗುವ ವಿಟ್ಯಾಮಿನ್ಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಮಗುವನ್ನು ಅನಾರೋಗ್ಯದಿಂದ ಕಾಪಾಡುತ್ತದೆ. ಆದ್ದರಿಂದ ಅದು ಮಗುವಿಗೆ ಅಮೃತ ಸಮಾನ ಹಾಗೂ ಮಗುವಿಗೆ ಹಾಲುಣಿಸುವದು ಪುಣ್ಯದ ಕೆಲಸ ಎಂದು ಅಖಿಲ ಭಾರತ ವೀರಶೈವ ಮಹಾಸಭೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ರತ್ನಪ್ರಭಾ ಬೆಲ್ಲದ ಹೇಳಿದರು.
ಬೆಳಗಾವಿಯ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಜೆಎನ್ ವೈದ್ಯಕೀಯ ಮಹಾವಿದ್ಯಾಲಯ, ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಚಿಕ್ಕಮಕ್ಕಳ ವೈದ್ಯರ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಚಿಕ್ಕಮಕ್ಕಳ ವಿಭಾಗವು ಏರ್ಪಡಿಸಿದ್ದ ಸ್ತನಪಾನ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕತೆಯ ಭರದಲ್ಲಿ ತಮ್ಮ ಸೌಂದರ್ಯ ಹಾಳಾಗುತ್ತದೆ ಎಂಬ ತಪ್ಪು ಕಲ್ಪನೆಯಿಂದಾಗಿ ಮಹಿಳೆಯರು ನವಜಾತ ಶಿಶುವಿಗೆ ಎದೆಹಾಲು ಉಣಿಸಲು ಹಿಂದೇಟು ಹಾಕುತ್ತಿದ್ದಾರೆ. ಇದು ಮಗುವಿಗೆ ಮಾಡಿದ ಅನ್ಯಾಯ. ದೇವರ ಸೃಷ್ಟಿಯಾಗಿರುವ ತಾಯಿಯು ಮಗುವಿಗೆ ಹಾಲುಣಿಸುವ ಪುಣ್ಯದ ಕೆಲಸ ಮಾಡಬೇಕು. ಮಗು ಜನಿಸಿದ ತಕ್ಷಣ ಎದೆ ಹಾಲು ಉಣಿಸಿ, ಭವಿಷ್ಯದಲ್ಲಿ ಆರೋಗ್ಯವಂತ ಮಗುವನ್ನು ನಿರ್ಮಾಣಗೊಳಿಸಬೇಕಾಗಿರುವದು ನಮ್ಮೆಲ್ಲರ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟರು.
ಕೆಲ ತಾಯಂದಿರಿಗೆ ಅನಾರೋಗ್ಯ ಅಥವಾ ಇನ್ನೀತರ ಕಾರಣಗಳಿಂದ ಎದೆ ಹಾಲು ಬರದೇ ಆ ಮಕ್ಕಳಿಗೆ ತೊಂದರೆಯುಂಟಾಗುವ ಸಂಭವ ಅಧಿಕವಾಗಿರುತ್ತದೆ. ಆದ್ದರಿಂದ ಮಹಿಳೆಯರು ಎದೆಹಾಲನ್ನು ದಾನವಾಗಿ ನೀಡಬೇಕು. ಇದಕ್ಕಾಗಿ ಅನೇಕ ಆಸ್ಪತ್ರೆಗಳಲ್ಲಿ ಎದೆ ಹಾಲು ದಾನ ಮಾಡುವ ವ್ಯವಸ್ಥೆ ಇದೆ. ಅದಕ್ಕೆ ಎದೆಹಾಲನ್ನೂ ಕೂಡ ದಾನವಾಗಿ ನೀಡಬಹುದು. ನೀವು ನಿಮ್ಮ ಮಗುವಿಗೆ ಮಾತ್ರ ಹಾಲು ನೀಡದೇ ಬೇರೆ ತಾಯಿಯ ಮಗುವಿಗೂ ಕೂಡ ಹಾಲು ನೀಡಿ, ಆ ಮಗುವನ್ನು ಅಪೌಷ್ಟಿಕಾಂಶತೆಯಿಂದ ತಪ್ಪಿಸಬಹುದು ಎಂದು ತಿಳಿಸಿದರು.
ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ ಅವರು ಮಾತನಾಡಿ, ನವಜಾತ ಶಿಶುವಿಗೆ ಎದೆಹಾಲು ಉಣಿಸುವಂತೆ ತಾಯಂದಿರಿಗೆ ಜಾಗೃತಿ ಮೂಡಿಸಲು ಸರಕಾರೇತರ ಸಂಸ್ಥೆಗಳು ಮುಂದಾಗಬೇಕು. ಅದರಲ್ಲಿಯೂ ಆಸ್ಪತ್ರೆಯಲ್ಲಿ ತಾಯಂದಿರು ಇರುವಾಗ ದಾದಿಯರೂ ಕೂಡ ಎದೆಹಾಲಿನ ಮಹತ್ವವನ್ನು ತಿಳಿಸಿ, ಮಗುವಿಗೆ ನೀಡಲು ಸಹಕಾರಿಯಾಗಬೇಕು ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ. ವಿ. ಜಾಲಿ, ಡಾ. ವಿ ಡಿ ಪಾಟೀಲ, ಡಾ. ವಿ ಎ ಕೋಠಿವಾಲೆ, ಡಾ. ರೂಪಾ ಬೆಲ್ಲದ, ಡಾ. ಮನಿಷಾ ಭಾಂಡನಕರ, ಡಾ. ಮಹೇಶ ಕಮತೆ, ಡಾ. ವಿ ಎಂ ಪಟ್ಟಣಶೆಟ್ಟಿ, ಸುಧಾರೆಡ್ಡಿ, ಡಾ. ಆರಿಫ್ ಮಾಲ್ದಾರ, ಡಾ. ವಿ ಎಂ ಪಾಟೀಲ, ಡಾ. ಭಾವನಾ ಕೊಪ್ಪದ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಅನುಭವ ಮತ್ತು ಜ್ಞಾನದ ಅನುಸಂದಾನವೇ ಯಶಸ್ಸು – ಎಂ.ವಿ.ಭಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ